Advertisement

“ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್‌ ನಿಲ್ದಾಣಕ್ಕೆ ಅನುಮೋದನೆ’

10:36 PM Jan 26, 2021 | Team Udayavani |

ಮಹಾನಗರ: ನಗರದ ಹಳೆ ಮಾರುಕಟ್ಟೆ ಜಾಗದಲ್ಲಿ 144 ಕೋ.ರೂ ವೆಚ್ಚದಲ್ಲಿ 11 ಅಂತಸ್ತಿನ ಮಾರುಕಟ್ಟೆ ನಿರ್ಮಾಣ, 22 ಕೋ.ರೂ. ವೆಚ್ಚದಲ್ಲಿ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಹಾಗೂ ಪಂಪ್‌ವೆಲ್‌ನಲ್ಲಿ 445 ಕೋ.ರೂ. ವೆಚ್ಚದಲ್ಲಿ ಕೇಂದ್ರ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೆನ್ಲಾಕ್‌ ಆಸ್ಪತ್ರೆಯನ್ನು  ಸುಸಜ್ಜಿತ ಗೊಳಿಸು ವಲ್ಲಿ ಆದ್ಯತೆ ನೀಡಲಾಗುತ್ತಿದ್ದು, 37.52 ಕೋ.ರೂ. ವೆಚ್ಚದಲ್ಲಿ ಸರ್ಜಿಕಲ್‌ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಾಗರ ಮಾಲಾ ಯೋಜನೆಯಡಿ ಬೆಂಗ್ರೆ ಪ್ರದೇಶ ದಲ್ಲಿ 65 ಕೋ.ರೂ. ವೆಚ್ಚದ ಕೋಸ್ಟಲ್‌ ಬರ್ತ್‌ ನಿರ್ಮಾಣ, 29 ಕೋ.ರೂ. ವೆಚ್ಚದ ಕ್ಯಾಪಿಟಲ್‌ ಡ್ರೆಜ್ಜಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ :

ಕೋವಿಡ್‌ ಹಿನ್ನೆಲೆ ನೆಹರೂ ಮೈದಾನದಲ್ಲಿ ಈ ಬಾರಿ ಶಾಲಾ ಮಕ್ಕಳಿಂದ ಯಾವುದೇ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ. ಬದಲಾಗಿ ಪೊಲೀಸ್‌, ಗೃಹರಕ್ಷಕ ದಳದವರಿಂದ ಪಥಸಂಚಲನ, ಪರೇಡ್‌ ನಡೆಯಿತು. ಡೊಂಗರಕೇರಿ ಕೆನರಾ ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕಿ ರಚನಾ ಕಾಮತ್‌ ಅವರ ನೇತೃತ್ವದಲ್ಲಿ ನಾಡಗೀತೆ ಹಾಗೂ ರೈತಗೀತೆ ಹಾಡಿದರು.

Advertisement

ಆಕರ್ಷಕ ಪಥಸಂಚಲನ :

ಏಳು ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕವಾಯತು ದಂಡನಾಯಕರಾದ ಈರಸಂಗಪ್ಪ ಶಿತೇಲಿ ಹಾಗೂ ಉಪದಂಡನಾಯಕ ಅನುಕುಮಾರ್‌ ಎಂ.ಎನ್‌. ಅವರ ನೇತೃತ್ವದಲ್ಲಿ ಕವಾಯತು ನಡೆಯಿತು. ಮೀಸಲು ಉಪನಿರೀಕ್ಷಕ ಅವಿನಾಶ್‌ ಎಸ್‌. ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ, ಮೀಸಲು ಉಪನಿರೀಕ್ಷಕ ಅನು ಎಂ.ಎಸ್‌ ಅವರ ನೇತೃತ್ವದಲ್ಲಿ ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಮಂಗಳೂರು ನಗರ, ಉಪನಿರೀಕ್ಷಕ ನಿತ್ಯಾನಂದ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ತುಕುಡಿ, ಗಣೇಶ್‌ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ, ಡಿಎಆರ್‌ ಹಾಗೂ ಸಿ.ಎ.ಆರ್‌. ಪೊಲೀಸ್‌ ವಾದ್ಯವೃಂದದ ತಂಡ, ಪೊಲೀಸ್‌ ಉಪನಿರೀಕ್ಷಕ ಹಾರುನ್‌ ಅಕ್ತಾರ್‌ ನೇತೃತ್ವದಲ್ಲಿ ಮಂಗಳೂರು ನಗರ ಸಿವಿಲ್‌ ಪೊಲೀಸ್‌ ತುಕುಡಿ, ಮಹಿಳಾ ಉಪನಿರೀಕ್ಷಕರಾದ ರೇಖಾ ಆರ್‌. ನೇತೃತ್ವದಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್‌ ತುಕುಡಿ, ಅಭಿಮನ್ಯು ರೈ ನೇತೃತ್ವದಲ್ಲಿ ಗೃಹರಕ್ಷಕದಳ ಮಂಗಳೂರು, ಆರ್‌.ಡಿ. ರಮೇಶ್‌ ನೇತೃತ್ವದಲ್ಲಿ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ತಂಡ, ಗಣೇಶ್‌ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಡಿಎಆರ್‌, ಸಿಎಆರ್‌ ಪೊಲೀಸ್‌ ಬ್ಯಾಂಡ್‌ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next