ಹೊಸದಿಲ್ಲಿ : ಇದೇ ಶುಕ್ರವಾರ ಜನವರಿ 26ರಂದು ದೇಶದ 69ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ 10 ಆಸಿಯಾನ್ ದೇಶಗಳ ನಾಯಕರು ಭಾಗವಹಿಸಲಿದ್ದು ಅವರಿಗೆ ಸಂಭಾವ್ಯ ಉಗ್ರ ಬೆದರಿಕೆ ಇರುವ ಕಾರಣ ಗರಿಷ್ಠ ಕಟ್ಟೆಚ್ಚರವನ್ನು ಜಾರಿಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ.
ಇದೇ ಮೊದಲ ಬಾರಿಗೆಂಬಂತೆ ದೇಶ ಗಣರಾಜ್ಯೋತ್ಸವದಲ್ಲಿ ಹತ್ತು ಆಸಿಯಾನ್ ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಅವರೆಂದರೆ ಇಂಡೋನೇಶ್ಯದ ಅಧ್ಯಕ್ಷ ಜೋಕೋ ವಿಡೋಡೋ, ವಿಯೆಟ್ನಾಮ್ ಪ್ರಧಾನಿ ಎನ್‌ಗುಯೆನ್ ಫುಕ್, ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ, ಲಾವೋಸ್ ಪ್ರಧಾನಿ ಥಾಂಗ್ಲೋನ್ ಸಿಸೋಲಿತ್, ಮಲೇಶ್ಯ ಪ್ರಧಾನಿ ನಜೀಬ್ ರಜಾಕ್, ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೋ ಡ್ಯುಟರ್ಟ್, ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್, ಕಾಂಬೋಡಿಯ ಪ್ರಧಾನಿ ಹುನ್ ಸೆನ್, ಥಾಯ್ಲಂಡ್ ಪ್ರಧಾನಿ ಪ್ರಯೂತ್ ಚಾನ್ ಓಛಾ ಮತ್ತು ಸುಲ್ತಾನ್ ಆಫ್ ಬ್ರುನೇಯಿ ಹಸನಾಲ್ ಬೋಲ್ಕಿಯಾ.
ಇವಲ್ಲರದೆ ಇನ್ನೂ ಅನೇಕ ವಿದೇಶಿ ಗಣ್ಯರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಭದ್ರತಾ ಸಂಸ್ಥೆಗಳ ಮೇಲಿನ ಒತ್ತಡ ಹಿಂದೆಂದಿಗಿಂತಲೂ ಅತ್ಯಂತ ಅಧಿಕವಿದೆ.