ಚಡಚಣ: ಇಂಡಿ, ನಾಗಠಾಣ ಹಾಗೂ ಬಬಲೇಶ್ವರ ಮತಕ್ಷೇತ್ರದ ಹಳ್ಳಿಗಳಿಗೆ ಅನುಕೂಲವಾಗುವ ನಿಯೋಜಿತ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಝಳಕಿ ಗ್ರಾಮದ ಆರ್‌ಟಿಒ ಕಚೇರಿ ಪಕ್ಕದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದ್ದು ವಿರೋಧ ಪಕ್ಷದ ಉಪ ನಾಯಕ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಭೇಟಿ ನೀಡಿ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಕೃಷ್ಣಾ ಬಿಸ್ಕೀಂ ಯೋಜನೆ ಸಂಪೂರ್ಣ ಜಾರಿ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ. ಕೃಷ್ಣಾ ನ್ಯಾಯ ಮಂಡಳಿ ನ್ಯಾ| ಬ್ರಿಜೇಶಕುಮಾರ ಅವರು 2012ನೇ ಸಾಲಿನಲ್ಲಿ ತೀರ್ಪನ್ನು ಪ್ರಕಟಣೆ ಮಾಡಿ ಕೃಷ್ಣಾ ಬಿ ಸ್ಕೀಂನಲ್ಲಿ 177 ಟಿಎಂಸಿ ನೀರನ್ನು ನಮಗೆ ಹಂಚಿಕೆ ಮಾಡಿದ್ದಾರೆ. ಈ ನೀರನ್ನು ಬರದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಹಂಚಿಕೆ ಮಾಡಿ ಈ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಎಲ್ಲ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ, ರೈತ ಮುಖಂಡರಾದ ಶ್ರೀಮಂತ ಕಾಪ್ಸೆ, ಮುದ್ದಣ್ಣಗೌಡ ಪಾಟೀಲ, ಅಶೋಕ ಬೋರಗಿ, ಎಸ್.ಎಂ. ಬಿರಾದಾರ, ಶಂಕರ ತೆಲಸಂಗಿ, ರಾಮಚಂದ್ರ ಮಹೇಂದ್ರಕರ, ಚಂದ್ರಶೇಖರ ಖಾನಾಪುರ, ಶಿವಗೊಂಡ ಕಾಡೆ, ಕಲ್ಲಪ್ಪ ಬಳಗಾನೂರ, ಸಿದ್ದಣ್ಣ ಬಿರಾದಾರ, ಬಿ.ಎಂ. ಬಿರಾದಾರ, ಈರಣ್ಣ ವಾಲಿ, ದುಂಡಪ್ಪ ಖಾನಾಪುರ, ಶಶಿಗೌಡ ಪಾಟೀಲ, ಅಶೋಕ ಕಾಪ್ಸೆ ಸೇರಿಂದತೆ ಸಾವಿರಾರು ರೈತರು ಪಾಲ್ಗೊಂಡಿದ್ದರು.
ಶಾಸಕ ಯಶವಂತರಾಯಗೌಡ ಭೇಟಿ: ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ರೈತರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಲಿಲ್ಲ. ಈ ವೇಳೆ ಶಾಸಕರು ಮಾತನಾಡಿ, ಈ ನೀರಾವರಿ ಯೋಜನೆ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಮಂತ್ರಿಗಳೊಂದಿಗೆ ಚರ್ಚಿಸಿ ತಮ್ಮ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸುವುದಾಗಿ ಹೇಳಿದರು.
ರೈತರ ನಿಯೋಗವನ್ನು ಕೂಡ ಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿಗಳಿಗೆ ಭೇಟಿ ಮಾಡಿಸಿ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೊಳಿಸಲು ಸರಕಾರದ ಮೇಲೆ ಒತ್ತಡ ಹೇರುವುದಾಗಿ ಹೇಳಿದ ಅವರು, ಕೂಡಲೇ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಡಿ. 9ರಂದು ಬೆಳಗ್ಗೆ 10ಕ್ಕೆ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರೊಂದಿಗೆ ನಾಗಠಾಣ ಶಾಸಕ ದೇವಾನಂದ
ಚವ್ಹಾಣ ಹಾಗೂ ನಾನೂ ಕೂಡ ರೈತರೊಂದಿಗೆ ಸಮಾಲೋಚಿಸಲು ಬರುವುದಾಗಿ ಹೇಳಿದರು.