Advertisement

ನಿರ್ಗತಿಕರು, ನಿರಾಶ್ರಿತರಿಗೆ ಮಿಡಿದ ಪ್ರತಿನಿಧಿಗಳು

11:01 AM Apr 06, 2020 | Suhan S |

ಬೆಂಗಳೂರು: ಶ್ರಮಿಕ ವರ್ಗಗಳ ಸಮಸ್ಯೆಗೆ ಮಿಡಿದ ಜನಪ್ರತಿನಿಧಿಗಳು, ನಿರಾಶ್ರಿತರು ಮತ್ತು ನಿರ್ಗತಿಕರಪ್ರದೇಶಗಳಿಗೆ ಬಂತು “ಅನ್ನದ ತೇರು’, ನಿತ್ಯ ಹತ್ತಾರುಸಾವಿರ ಜನರಿಗೆ ಆಹಾರ ಪೂರೈಕೆ, ಪ್ಯಾಕೇಜ್‌ ರೂಪದಲ್ಲಿ ಪರಿಹಾರ ಸಾಮಗ್ರಿಗಳ ವಿತರಣೆ, ಪರಿಹಾರದಲ್ಲೂ ಮಿಂಚುತ್ತಿರುವ ಪ್ರಚಾರ ಪ್ರಿಯರು…!

Advertisement

– ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿರುವ ನಿರಾಶ್ರಿತರು ಮತ್ತು ಶ್ರಮಿಕ ವರ್ಗಗಳಿರುವ ಪ್ರದೇಶಗಳಲ್ಲಿ ಕಂಡುಬಂದ ದೃಶ್ಯಗಳಿವು. ನಗರದಲ್ಲಿ ಹೆಚ್ಚು-ಕಡಿಮೆ ಪ್ರತಿಷ್ಠಿತ, ಮಧ್ಯಮ ವರ್ಗಗಳಷ್ಟೇ ಪ್ರಮಾಣದಲ್ಲಿ ನಿರಾಶ್ರಿತರು ಹಾಗೂ ದಿನಗೂಲಿ ನೌಕರರಿದ್ದಾರೆ. ಲಾಕ್‌ಡೌನ್‌ ಆದಾಗಿ ನಿಂದಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರ ಸಮಸ್ಯೆಗಳಿಗೆ ಪಾಲಿಕೆ ಸದಸ್ಯರು ವಿಭಿನ್ನ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಸಂಬಂಧ “ಉದಯವಾಣಿ’ ನಡೆಸಿದ ರಿಯಾಲಿಟಿ ಚೆಕ್‌ ನಡೆಸಿತು. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಮೂರೂ ಹೊತ್ತು ಊಟ: ಚಿಕ್ಕಪೇಟೆಯ ಪಾಲಿಕೆ ಸದಸ್ಯೆ ಎಸ್‌.ಲೀಲಾಶಿವಕುಮಾರ್‌ ಹಾಗೂ ಪತಿ ಶಿವಕುಮಾರ್‌, ಮಲ್ಲೇ ಶ್ವರಂನ ಮಂತ್ರಿಮಾಲ್‌ ಮುಂದೆ, ಗೂಡ್‌ಶೆಡ್‌ ರಸ್ತೆ, ಚಿಕ್ಕಪೇಟೆ ಹಾಗೂ ಓಕಳಿಪುರಂ ಭಾಗದ ಹಲವೆಡೆ ನಿರಾಶ್ರಿತರಿಗೆ, ರೈಲ್ವೆ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೆ ಊಟ ಪೂರೈಸುತ್ತಿದ್ದಾರೆ. ಲೀಲಾಶಿವಕುಮಾರ್‌ ಮಾತನಾಡಿ, ಚಿಕ್ಕಪೇಟೆ ಭಾಗದಲ್ಲಿ ಬಿಹಾರ, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ಹಾಗೂ ಆಂಧ್ರಪ್ರದೇಶ ದಿಂದ ಬಂದಿರುವ ಅಂದಾಜು 70ರಿಂದ 130 ಜನ ಇದ್ದಾರೆ. ಅವರಿಗೆ ನಿತ್ಯ ಮೂರು ಬಾರಿ ಊಟ ನೀಡಲಾಗುತ್ತಿದೆ. ಚಿಕ್ಕಪೇಟೆ ಭಾಗದಲ್ಲಿ 250 ಬಡಕುಟುಂಬಗಳಿಗೆ ಅಗತ್ಯ ದಿನಸಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ರಾಜಾಜಿನಗರ ಕ್ಷೇತ್ರದ ಪ್ರಕಾಶನಗರ ವಾರ್ಡ್‌ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮೇಯರ್‌ ಜಿ.ಪದ್ಮಾವತಿ, ರಾಜಾಜಿನಗರ ವಾರ್ಡ್‌ ಪಾಲಿಕೆ ಸದಸ್ಯ ಜಿ. ಕೃಷ್ಣಮೂರ್ತಿ ಹಾಗೂ ಶಿವನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಮಂಜುಳಾ ವಿಜಯಕುಮಾರ್‌ ಒಟ್ಟಾಗಿ ರಾಜಾಜಿನಗರದ ಮಹಾಗಣಪತಿ ನಗರದ ಮಹಾಗಣಪತಿ ದೇವಸ್ಥಾನದ ಕಲ್ಯಾಣ ಮಂಟಪವನ್ನು ಬಾಡಿಗೆ ಪಡೆದುಕೊಂಡು ಆಹಾರ ತಯಾರಿಸುತ್ತಿದ್ದಾರೆ. ಅಲ್ಲಿಂದ ಸುತ್ತಲಿನ ಶಿವನಗರ, ಮಂಜುನಾಥ ನಗರ, ಕಾಮಾಕ್ಷಿಪಾಳ್ಯ, ದಯಾನಂದನಗರ, ಎ.ಕೆ. ಕಾಲೊನಿ, ಚಾಮುಂಡಿನಗರ ಹಾಗೂ ಜೇಡರಹಳ್ಳಿ ಭಾಗದಲ್ಲಿ ಅಂದಾಜು ಆರು ಸಾವಿರ ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಉಪಮೇಯರ್‌ ರಾಮಮೋಹನ್‌ ರಾಜ್‌ ಅವರು ಬೊಮ್ಮನಹಳ್ಳಿ ವಾರ್ಡ್‌ನಲ್ಲಿ ಪ್ರತಿದಿನ ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೆ, ಅಂದಾಜು 10ಸಾವಿರ ಜನರಿಗೆ ಅಕ್ಕಿ ಮತ್ತು ಬೇಳೆ ನೀಡಿದ್ದಾರೆ. ಅಲ್ಲದೆ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಅವರು, ಜಕ್ಕೂರು ವಾರ್ಡ್‌ ಪ್ರತಿದಿನ ಅಂದಾಜು ನಾಲ್ಕು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. 3 ಸಾವಿರ ಮಾಸ್ಕನ್ನೂ ವಿತರಿಸಿದ್ದಾರೆ.

Advertisement

ಶಂಕರ ಮಠದ ಪಾಲಿಕೆ ಸದಸ್ಯ ಎಂ.ಶಿವರಾಜು 4ಸಾವಿರ ಜನರಿಗೆ ಮಾಸ್ಕ್ ವಿತರಿಸಿದ್ದಾರೆ. ಬಿಎಂಟಿಸಿ ಬಸ್‌ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ. ಆಡಳಿತ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ತಮ್ಮ ಕಾಚರಕನಹಳ್ಳಿ ವಾರ್ಡ್‌ನಲ್ಲಿ ಅಂದಾಜು ಐದು ಸಾವಿರ ಬಡವರಿಗೆ ದಿನಸಿ ಹಾಗೂ ಸೀರೆ ಒಳಗೊಂಡ ಪ್ಯಾಕೇಜ್‌ ನೀಡಿದ್ದಾರೆ.

ದಾನಿಗಳಿಂದ ಸಹಾಯ: ದೊಮ್ಮಲೂರು ವಾರ್ಡ್‌ ಪಾಲಿಕೆ ಸದಸ್ಯ ಸಿ.ಆರ್‌. ಲಕ್ಷ್ಮೀನಾರಾಯಣ್‌ ದೊಮ್ಮಲೂರು ವಾರ್ಡ್‌ ವ್ಯಾಪ್ತಿ ದೇಣಿಗೆ ಸಂಗ್ರಹಿಸಿ ಐದು ಸಾವಿರ ಜನರಿಗೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಲಾಕ್‌ಡೌನ್‌ ವೇಳೆ ವಿರೋಧ ಪಕ್ಷದ ಪಾಲಿಕೆ ಸದಸ್ಯರೂ ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಅಗತ್ಯ ದಿನಸಿ, ಹಾಲು ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಮನೋರಾಯನಪಾಳ್ಯದಲ್ಲಿ 1,500 ಜನರಿಗೆ ಅಕ್ಕಿ, ಬೇಳೆ ಅಗತ್ಯ ದಿನಸಿ ಸಾಮಗ್ರಿ ಒಳಗೊಂಡ ಕಿಟ್‌ ವಿತರಿಸಿದ್ದಾರೆ.

 

ಮಾದರಿಯಾದ ಮಹಿಳಾ ಮಣಿಗಳು :  ಸೇವೆಗೆ ಮಹಿಳೆಯರು ಮುಂದಾಗಿದ್ದು, ಚಿಕ್ಕಪೇಟೆ ಪಾಲಿಕೆ ಸದಸ್ಯೆ ಲೀಲಾಶಿವಕುಮಾರ್‌, ಪ್ರಕಾಶ ನಗರ ವಾರ್ಡ್‌ ಪಾಲಿಕೆ ಸದಸ್ಯೆ ಜಿ. ಪದ್ಮಾವತಿ, ಕರಿಸಂದ್ರ ವಾರ್ಡ್‌ ಸದಸ್ಯೆ ಯಶೋಧ ಹಾಗೂ ಗಣೇಶ ಮಂದಿರ ವಾರ್ಡ್‌ ಪಾಲಿಕೆ ಸದಸ್ಯೆ ಡಿ.ಎಚ್‌.ಲಕ್ಷ್ಮೀ ಅವರು ತಮ್ಮ ವಾರ್ಡ್‌ಗಳಲ್ಲಿ ಬಡವರಿಗೆ ನೆರವಾಗುತ್ತಿದ್ದಾರೆ. ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

 

ಮೇಯರ್‌ ಹಿಂದುಳಿದರೇ? :  ಮೇಯರ್‌ ಎಂ.ಗೌತಮ್‌ಕುಮಾರ್‌ ಅವರ ವಾರ್ಡ್‌ ಜೋಗುಪಾಳ್ಯದಲ್ಲಿನ ಬಡವರಿಗೆ ತಮ್ಮ ಬೆಂಬಲಿಗರ ಮೂಲಕ ಉಚಿತ ಊಟ ನೀಡುತ್ತಿದ್ದಾರೆ. ಆದರೂ, ನೇರವಾಗಿ ಸಾರ್ವಜನಿಕರ ಜತೆ ಸೇರುತ್ತಿಲ್ಲ ಎನ್ನುತ್ತಾರೆ ಜೋಗುಪಾಳ್ಯದ ಸ್ಥಳೀಯರು. ಜತೆಗೆ, ಸ್ಥಾಯಿ ಸಮಿತಿಗಳ ಸದಸ್ಯರೂ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next