Advertisement

ಮುಸ್ಲಿಮರ ಹಿನ್ನಡೆಗೆ ಜನಪ್ರತಿನಿಧಿಗಳೇ ಕಾರಣ: ಉಸ್ತಾದ್‌

06:11 PM Feb 08, 2021 | Team Udayavani |

ರಾಯಚೂರು: ಇಂದಿಗೂ ವ್ಯವಸ್ಥೆಯೊಂದಿಗೆ ಹೋರಾಡುತ್ತಿರುವ ಮುಸ್ಲಿಮರ ಸಮಸ್ಯೆಗಳ ಬಗ್ಗೆ ಮುಸ್ಲಿಂ ಜನಪ್ರತಿನಿಧಿಗಳೇ ಧ್ವನಿ ಎತ್ತದಿರುವುದು ನಿಜಕ್ಕೂ ವಿಪರ್ಯಾಸ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್‌ ಉಸ್ತಾದ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಅತ್ತನೂರು ಪಂಕ್ಷನ್‌ ಹಾಲ್‌ ನಲ್ಲಿ ಅಂಜುಮನ್‌ ಎ ರಾಯಚೂರಿನಿಂದ ರವಿವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಮುಸ್ಲಿಮರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲ ರಂಗದಲ್ಲೂ ಹಿಂದುಳಿದ ಮುಸ್ಲಿಮರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಂದ ಸಂಸತ್‌ವರೆಗೂ ಎಲ್ಲಿಯೂ ಚರ್ಚೆ ಆಗುತ್ತಿಲ್ಲ. ಸಮುದಾಯ ಸೌಲಭ್ಯಗಳಿಲ್ಲದೇ ಹೀನ ಸ್ಥಿತಿ ಎದುರಿಸುತ್ತಿದ್ದರೂ ಇದೇ ಸಮುದಾಯದಿಂದ ಗೆದ್ದು ಬಂದವರು ಕ್ಯಾರೇ ಎನ್ನುತ್ತಿಲ್ಲ ಎಂದು ದೂರಿದರು.

ಸರ್ಕಾರಿ ಹುದ್ದೆ ಪಡೆಯುವಲ್ಲಿ ಮುಸ್ಲಿಮರ ಹಿಂದುಳಿದಿದ್ದಾರೆ. ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಕಡಿಮೆ ಇದೆ. ಇದರಿಂದ ಸಮಾಜಕ್ಕೆ ನ್ಯಾಯೋಚಿತವಾಗಿ ದಕ್ಕಬೇಕಾದ ಸೌಲಭ್ಯ, ಅನುದಾನಗಳಲ್ಲೂ ವಂಚನೆಯಾಗುತ್ತಿದೆ. ಮುಸ್ಲಿಮರ ಕಲ್ಯಾಣಕ್ಕಾಗಿ ಹಿಂದೆ ಜಾರಿ ಮಾಡಿದ್ದ ಸಮುದಾಯದ ಯೋಜನೆಗಳು ಕೂಡ ಸ್ಥಗಿತಗೊಂಡಿವೆ. ಜಾತ್ಯತೀತ ತತ್ವ ಪಾಲಿಸುವುದಾಗಿ ಹೇಳುವ ಜನನಾಯಕರು ಕೂಡ ಮುಸ್ಲಿಮರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದರು.

ಮತದಾರ ಪಟ್ಟಿಯಲ್ಲೂ ವಂಚನೆ ಮಾಡಿ ಮತಗಟ್ಟೆಗಳನ್ನು ಬದಲಿಸಲಾಗುತ್ತಿದೆ. ಇದರಿಂದ ಮುಸ್ಲಿಮರು ಹಕ್ಕು ಚಲಾಯಿಸುವಲ್ಲೂ ವಿಫಲರಾಗುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲೂ ಅವಕಾಶ ವಂಚನೆ ಮಾಡುತ್ತಿದ್ದು, ಮುಸ್ಲಿಮರನ್ನು ರಾಜಕೀಯವಾಗಿ ತುಳಿಯುವ ಪಿತೂರಿ ನಡೆಯುತ್ತಿದೆ ಎಂದು ದೂರಿದರು.

ನವದೆಹಲಿಯ ಐಎಎಸ್‌- ಐಪಿಎಸ್‌ ತರಬೇತುದಾರ ಸಮೀರ ಅಹ್ಮದ್‌ ಮಾತನಾಡಿ, ಮುಸ್ಲಿಮರು ಹಿಂದುಳಿಯಲು ಮುಖ್ಯ ಕಾರಣವೇ ಅನಕ್ಷರತೆ. ದೇಶದ ಎಷ್ಟೋ ಜೈಲುಗಳಲ್ಲಿ ವಿಚಾರಣೆ ನಡೆಸದೆ ಮುಸ್ಲಿಮರನ್ನು ಬಂಧಿ  ಮಾಡಲಾಗಿದೆ. ಇದನ್ನು ಕೇಳುವಷ್ಟು ಕೂಡ ಜ್ಞಾನ ಇಲ್ಲದಾಗಿದೆ. ಕಾನೂನಿನ ಬಗ್ಗೆ ಗೊತ್ತಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಹೀಗಾಗಿ ಶಿಕ್ಷಣದಿಂದ ಮಾತ್ರ ನಮ್ಮ ಹಕ್ಕುಗಳನ್ನು ಕೇಳಿ ಪಡೆಯುವ ಶಕ್ತಿ ಬರುತ್ತದೆ ಎಂದರು.

Advertisement

ಮಾಜಿ ಶಾಸಕ ಸಯ್ಯದ್‌ ಯಾಸಿನ್‌, ಮುಖಂಡರಾದ ಸಮ್ಮದ್‌ ಸಿದ್ಧಿಖಿ, ಸೈಯದ್‌ ಮಹ್ಮದ್‌ ಯದುಲ್ಲಾ ಹುಸೇನಿ, ಬಷಿರುದ್ದೀನ್‌, ಮುಜಿಬುದ್ದೀನ್‌, ಅಬ್ದುಲ್
ಕರೀಂ, ಸಾಜಿದ್‌ ಸಮೀರ್‌, ಎಂ.ಕೆ.ಬಾಬರ್‌, ಅಬ್ದುಲ್‌ ಫಿರೋಜ್‌ ಸೇರಿದಂತೆ ಅನೇಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next