Advertisement

ಜನಪ್ರತಿನಿಧಿಗಳಿಗೆ ಸಂಬಳ-ಪಿಂಚಣಿ ಅಗತ್ಯವಿಲ್ಲ: ಪ್ಯಾಟಿ

05:53 AM Jan 30, 2019 | Team Udayavani |

ಹರಿಹರ: ಸರಕಾರಿ ನೌಕರರಿಗೆ ನೀಡುವಂತೆ ಜನಪ್ರತಿನಿಧಿಗಳಿಗೂ ಸಂಬಳ, ಪಿಂಚಣಿ ನೀಡುವುದು ಅಗತ್ಯವಿಲ್ಲ ಎಂದು ಗಿರಿಯಮ್ಮ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಎಚ್. ಪ್ಯಾಟಿ ಹೇಳಿದರು.

Advertisement

ಕೇಂದ್ರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ನೆಸ್ಸೆಸ್‌ ಪ್ರಾದೇಶಿಕ ನಿರ್ದೇಶನಾಲಯ, ದಾವಣಗೆರೆ ವಿವಿ ಎನ್ನೆಸ್ಸೆಸ್‌ ಕೋಶ ಸಹಭಾಗಿತ್ವದಲ್ಲಿ ನಗರದ ಗಿರಿಯಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯೂತ್‌ ಪಾರ್ಲಿಮೆಂಟ್ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳಾಗುವವರು ಸೇವಾ ಮನೋಭಾವ ಹೊಂದಿರುತ್ತಾರೆ. ಇದರಲ್ಲಿ ಹಣಕಾಸಿನ ಅಥವಾ ಆರ್ಥಿಕ ಲಾಭದ ಅಂಶ ನುಸುಳಬಾರದು. ನಮ್ಮಲ್ಲಿ ಜನಪ್ರತಿನಿಧಿಗಳು ಸಂಬಳ, ಪಿಂಚಣಿ ಪಡೆಯುವ ಮೂಲಕ ಪೇಡ್‌ ಸರ್ವರ್‌ (ಸಂಬಳ ಪಡೆಯುವ ಸೇವಕರು) ಆಗಿದ್ದಾರೆ. ಇದರಿಂದಾಗಿ ಸರ್ಕಾರಿ ನೌಕರರಿಗೂ ಜನಪ್ರತಿನಿಧಿಗಳಿಗೂ ಏನೂ ವ್ಯತ್ಯಾಸವಿಲ್ಲದಂತಾಗಿದೆ ಎಂದರು.

ಬಂಡವಾಳ ಹೂಡಿ ವ್ಯಾಪಾರ ಮಾಡುವಂತೆ ರಾಜಕಾರಣವೂ ಇಂದು ವ್ಯವಹಾರವಾಗಿ ಮಾರ್ಪಟ್ಟಿರುವುದನ್ನು ಬದಲಾಯಿಸಬೇಕು. ನಮ್ಮಲ್ಲಿ ಜನಪ್ರತಿನಿಧಿಗಳಾಗುವವರು ಬಹುತೇಕ ಸ್ಥಿತಿವಂತರೆ ಆಗಿದ್ದು, ವೇತನ ಹಾಗೂ ಪಿಂಚಣಿ ನಿರಾಕರಿಸುವ ಮೂಲಕ ಮಾದರಿಯಾಗಬೆಕು ಎಂದರು.

ಯೂತ್‌ ಪಾರ್ಲಿಮೆಂಟ್ ಪರಿಕಲ್ಪನೆ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿದೆ. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಯೋಚನಾ ಶಕ್ತಿ ವೃದ್ಧಿಗೆ ಇದು ಸಹಾಯಕ. ರಾಜಕೀಯ ಕ್ಷೇತ್ರ, ಪ್ರಜಾಪ್ರಭುತ್ವಕ್ಕೆ ಅಂಟಿಕೊಂಡಿರುವ ಕಂಟಕಗಳನ್ನು ನಿವಾರಿಸುವ ಶಕ್ತಿಯನ್ನು ಯುವ ಸಮುದಾಯ ಪ್ರದರ್ಶಿಸಬೇಕು ಎಂದು ಹೇಳಿದರು.

Advertisement

ಕೈಗಾರಿಕೋದ್ಯಮಿ ಎಂ.ಆರ್‌. ಸತ್ಯನಾರಾಯಣ ಮಾತನಾಡಿ, ಹಿಂದಿನ ರಾಜಕಾರಣಿಗಳಲ್ಲಿ ದೇಶ, ಜನ ಹಿತದ ಗುರಿ ಇರುತ್ತಿತ್ತು. ಈಗ ಸ್ವಹಿತವೇ ಮೇಳೈಸಿದೆ. ಅದರ ನಂತರ ಜನರಹಿತ ಎಂಬ ವಾತಾವರಣವಿದೆ. ಯುವ ಸಮುದಾಯ ಉದ್ಯಮಶೀಲತೆ ಮೈಗೂಡಿಸಿಕೊಂಡರೆ ದೇಶದ ಅಭಿವೃದ್ಧಿಗೆ ಸಹಾಯಕ ಎಂದರು.

ಭಯೋತ್ಪಾದನೆ, ಬದಲಾವಣೆಗೊಂಡ ವಾತಾವರಣ, ಕ್ರೀಡೆಗಳ ಅವಶ್ಯಕತೆ ಬಗ್ಗೆ, ಬಡತನ ಮುಂತಾದ ವಿಷಯಗಳ ಕುರಿತು 45 ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಅತ್ಯುತ್ತಮವಾಗಿ ವಿಷಯ ಮಂಡಿಸಿದ ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಯಿತು. ಯೂತ್‌ ಪಾರ್ಲಿಮೆಂಟ್‌ನಲ್ಲಿ ವಿದ್ಯಾರ್ಥಿಗಳು ಅನುಭವಗಳನ್ನು ಹಂಚಿಕೊಂಡರು.

ಚಿತ್ರದುರ್ಗದ ನೆಹರು ಯುವ ಕೇಂದ್ರದ ಸಂಚಾಲಕ ವಿಷ್ಣು, ಪವಿತ್ರಾ, ಪುಷ್ಪಾ, ದಾವಣಗೆರೆ ವಿವಿ ಎನ್‌ಎಸ್‌ಎಸ್‌ ಸಂಚಾಲಕ ಪ್ರೊ. ಬಿ.ಎಸ್‌. ಪ್ರದೀಪ್‌, ಪೌರ ಸೇವಾ ಸಮಿತಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾಲೇಜಿನ ಎನ್ನೆಸ್ಸೆಸ್‌ ಘಟಕ-1ರ ಅಧಿಕಾರಿ ಡಾ| ರಾಜೇಶ್ವರಿ, ಸುಬ್ರಹ್ಮಣ್ಯ ನಾಡಿಗೇರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next