ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳಿಗೆ ನೈತಿಕತೆ, ಶಿಸ್ತು ಅಗತ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಚುಂಚಶ್ರೀ ಬಳಗ ಭಾನುವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಕ್ಕಲಿಗ ಸಮುದಾಯದ ಸಚಿವರು ಮತ್ತು ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಅಧಿಕಾರಿ ಮತ್ತು ರಾಜಕಾರಣಿಗೆ ವೃತ್ತಿಪರತೆ, ಕ್ರಿಯಾ ಶೀಲತೆ, ಅಂತಃಕರಣ, ದೂರದೃಷ್ಟಿ, ನೈತಿಕತೆ ಮತ್ತು ಶಿಸ್ತು ಅಗತ್ಯ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸಿದರೆ ಮಾತ್ರ ಯಶಸ್ವಿ ಅಧಿಕಾರಿ ಮತ್ತು ರಾಜಕಾರಣಿ ಯಾಗಲು ಸಾಧ್ಯ ಎಂದು ತಿಳಿಸಿದರು.
ಒಬ್ಬ ಅಧಿಕಾರಿ ತಪ್ಪು ಮಾಡಿದರೆ ಆ ಸಮದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಒಕ್ಕಲಿಗ ಸಮುದಾಯದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಅತ್ಯು ತ್ತಮವಾಗಿ ಸಮಾಜದ ಕೆಲಸ ಮಾಡಿದರೆ ಒಕ್ಕಲಿಗ ಸಮುದಾಯಕ್ಕೆ ಗೌರವ ನೀಡಿದಂತಾ ಗುತ್ತದೆ. ಕೆಲಸದಲ್ಲಿ ಪ್ರಾಮಾಣಿಕತೆ ತೋರಿಸಿದರೆ ಜನರೇ ಅವರನ್ನು ಗುರುತಿಸುತ್ತಾರೆ ಎಂದರು.
ಸಚಿವ ಸಿ.ಟಿ.ರವಿ ಮಾತನಾಡಿ, ಒಕ್ಕಲಿಗರಾದ ನಾವು ಭೂಮಿ ತಾಯಿಯ ಸೇವೆ ಮಾಡುತ್ತಿದ್ದೇವೆ. ಸಮುದಾಯಕ್ಕೆ ಅನ್ಯಾಯವಾದರೆ ಅದನ್ನು ನೋಡಿ ಸುಮ್ಮನೆ ಇರುವುದಿಲ್ಲ. ಬೆನ್ನು ತೋರಿಸಿ ಓಡಿ ಹೋಗದೇ ಎದೆ ಕೊಟ್ಟು ಹೋರಾಟ ಮಾಡುತ್ತೇವೆ. ಸಮಾಜದಲ್ಲಿ ನಾವೆಷ್ಟು ಬೆಳದಿದ್ದೇವೆ ಎನ್ನುವುದಕಿಂತ ಸಮಾಜ ವನ್ನು ನಾವೆಷ್ಟು ಬೆಳೆಸಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ಗಾ.ನಂ.ಶ್ರೀಕಂಠಯ್ಯ ಮಾತನಾಡಿದರು. ಇದೇ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ್, ಸಚಿವ ಸಿ.ಟಿ.ರವಿ, ಕೆ.ಗೋಪಾಲಯ್ಯ, ಕೆ.ಸುಧಾ ಕರ್, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಐಎಎಸ್ ಅಧಿಕಾರಿ ಉಮಾ ಶಂಕರ್, ಐಪಿಎಸ್ ಅಧಿಕಾರಿ ಹಿತೇಂದ್ರ ಸೇರಿದಂತೆ ಒಕ್ಕಲಿಗ ಸಮಾಜದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನ ಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಅ.ದೇವೇಗೌಡ ಉಪಸ್ಥಿತರಿದ್ದರು.