Advertisement

ಪಶ್ಚಿಮ ಘಟ್ಟದ ಪರೇಡ್‌

04:17 PM Jan 20, 2018 | |

ಗಣರಾಜ್ಯೋತ್ಸವದ ದಿನ ರಾಷ್ಟ್ರದ ರಾಜಧಾನಿಯ ರಾಜ್‌ಪಥ್‌ನಲ್ಲಿ ನಡೆಯುವ ಸ್ಥಬ್ದಚಿತ್ರಗಳದು ವಿಶೇಷ ಮೆರುಗು. ಅತ್ಯುತ್ತಮವಾದ ಮೂರು ಸ್ತಬ್ಧಚಿತ್ರಗಳಿಗೆ ಬಹುಮಾನವೂ ಇರುವುದರಿಂದ ಜಿದ್ದಾಜಿದ್ದಿಯೂ ಏರ್ಪಡುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೀಗಾಗಿ ಪ್ರತಿ ರಾಜ್ಯಗಳಿಗೂ ಇದು ಪ್ರತಿಷ್ಠೆಯ ವಿಷಯ. ಆದರೆ ಪ್ರೇಕ್ಷಕರಿಗೆ ಇದು ಕಣ್ಮನ ತಣಿಸುವ ಸಂಗತಿ. ರಾಜ್ಯಗಳ ಸಂಸ್ಕೃತಿ, ಕಲೆ ಮತ್ತು ಹೆಗ್ಗಳಿಕೆಯನ್ನು ಬಿಂಬಿಸುವ ಸ್ತಬ್ದ ಚಿತ್ರಗಳನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಾಗದು? ಪ್ರತ್ಯಕ್ಷವಾಗಿ ನೋಡಲು ಅವಕಾಶ ಒದಗದಿದ್ದರೂ ಟಿ.ವಿಯಲ್ಲಾದರೂ ಮನೆಮಂದಿ ಜೊತೆ ಕೂತು ಪೆರೇಡು ನೋಡುವ ಸಂಪ್ರದಾಯ ಅನೇಕ ಮನೆಗಳಲ್ಲಿದೆ. 

Advertisement

ಈವರೆಗಿನ ಸ್ತಬ್ದಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ 2005ರಲ್ಲಿ ಮೊದಲ ಸ್ಥಾನ ಪಡೆದಿದ್ದು ಬಿಟ್ಟರೆ ಮತ್ತೆ ಸಿಕ್ಕಿಲ್ಲ. ಆದರೆ ಎರಡು ಬಾರಿ 2ನೇ ಸ್ಥಾನ ಮತ್ತು 3ನೇ ಸ್ಥಾನ ಗೆದ್ದಿದೆ. 2015ರಲ್ಲಿ ನಮ್ಮ ರಾಜ್ಯದ ಚನ್ನಪಟ್ಟಣ ಗೊಂಬೆಗಳ ಸ್ತಬ್ದಚಿತ್ರಕ್ಕೆ ಮೂರನೇ ಬಹುಮಾನ ಲಭ್ಯವಾಗಿತ್ತು. ಬಣ್ಣಬಣ್ಣದ ಈ ಸ್ತಬ್ದಚಿತ್ರ ಜನರ ಮನಸೂರೆಗೊಂಡಿತ್ತು. ಟಿಪ್ಪು ಸುಲ್ತಾನನ ಸ್ತಬ್ಧಚಿತ್ರ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಮತ್ತು ಕಾಫಿ ನಾಡು ಕೊಡಗನ್ನು ಪ್ರತಿನಿಧಿಸುವ ಸ್ತಬ್ಧಚಿತ್ರ, ಗೊರವರು ಮತ್ತು ಕರ್ನಾಟಕ ಜಾನಪದ ಸೊಗಡನ್ನು ಪ್ರತಿಬಿಂಬಿಸುವ ಸ್ತಬ್ದಚಿತ್ರ, ಇವು ಇತ್ತೀಚಿನ ವರ್ಷಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಸ್ತಬ್ಧಚಿತ್ರಗಳಾಗಿವೆ.

ಈ ಬಾರಿ ಏನೇನಿರುತ್ತೆ?
ಈ ವರ್ಷದ 69ನೇ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಳ್ಳುವ ರಾಜ.Âದ ಸ್ತಬ್ದಚಿತ್ರ ಹೇಗಿರುತ್ತೆ ಎಂಬ ಕುತೂಹಲ ಕನ್ನಡಿಗರಲ್ಲಿರುವುದು ಸಹಜವೇ. ಅಂದ ಹಾಗೆ ಈ ಬಾರಿಯ ವಿಷಯ “ರಾಜ್ಯದ ವನ್ಯಜೀವಿ ಮತ್ತು ಪಕ್ಷಿ ಸಂಕುಲ’. ನಮ್ಮಲ್ಲಿ ಕನ್ನಡದ ಕುರಿತು ಜಾಗೃತಿ, ಕಾಳಜಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಿಕ್ಕ ರಾಜ್ಯಗಳಿಗಿಂತ ನಮ್ಮ ಸ್ತಬ್ಧಚಿತ್ರಗಳೇ ಚೆನ್ನಾಗಿ ಮೂಡಿಬರಲಿ, ಈ ಬಾರಿ ಮೊದಲ ಬಹುಮಾನವನ್ನೇ ಬಾಚಿಕೊಳ್ಳಲು ಎಂಬ ಕೋಟ್ಯಂತರ ಕನ್ನಡಿಗರ ಆಶಯ, ನಮ್ಮದು ಕೂಡಾ. ಈ ಕಾರಣಕ್ಕಾಗಿಯೇ ಈ ಬಾರಿಯ ಸ್ತಬ್ಧಚಿತ್ರ ಒಳಗೊಳ್ಳುವ ಪ್ರತಿಕೃತಿ ಮತ್ತು ಅವುಗಳ ಕುರಿತ ಮಾಹಿತಿ ಇಲ್ಲಿ ನೀಡುತ್ತಿದ್ದೇವೆ.
 
ಹೇಗಿರುತ್ತೆ ನಮ್ಮ ರಾಜ್ಯದ ಸ್ತಬ್ದಚಿತ್ರಗಳು
ಈ ಹಿಂದಿನ ನಮ್ಮ ರಾಜ್ಯದ ಸ್ತಬ್ದಚಿತ್ರಗಳನ್ನು ಗಮನಿಸಿದರೆ ಈ ವಿಷಯವನ್ನು ಗಮನಿಸಬಹುದು. ನಮ್ಮ ಸ್ತಬ್ಧಚಿತ್ರಗಳಲ್ಲಿ ಒಂದು ಸಮಾನವಾದ ಅಂಶವಿದೆ, ಶೈಲಿಯಿದೆ. ಈ ಶೈಲಿ ಕೆಲ ರಾಜ್ಯಗಳ ಸ್ತಬ್ದ ಚಿತ್ರಗಳಲ್ಲಿಯೂ ಕಾಣಬಹುದು. ಅದೆಂದರೆ ನಮ್ಮ ಬಹುತೇಕ ಸ್ತಬ್ದಚಿತ್ರಗಳ ಮುಂಭಾಗದಲ್ಲಿ ಒಂದು ಪ್ರಮುಖ ಕಲಾಕೃತಿಯಿರುತ್ತದೆ. ನಾವೇನನ್ನು ಹೇಳಹೊರಟ್ಟಿದ್ದೇವೆಂಬುದರ ಪ್ರತೀಕವಾಗಿರುತ್ತೆ ಆ ಕಲಾಕೃತಿ. ನಂತರ ಅದರ ಹಿನ್ನೆಲೆಯಲ್ಲಿ, ಆ ವರ್ಷದ ವಿಷಯವನ್ನು ಪ್ರೇಕ್ಷಕರಲ್ಲಿ ಇನ್ನಷ್ಟು ಆಳವಾಗಿ ಪಸರಿಸುವ ಕಲಾಕೃತಿಗಳು ಬಳಕೆಯಾಗಿರುತ್ತೆ.

ಹುಲಿ
ದೇಶದ ಶೇ. 70ರಷ್ಟು ಹುಲಿಗಳಿರುವ ರಾಜ್ಯ ನಮ್ಮದು. ದಾಖಲೆ ಸಂಖ್ಯೆಯ 408 ಹುಲಿಗಳು ರಾಜ್ಯದಲ್ಲಿವೆ. ಅದಕ್ಕೇ ನಮ್ಮ ರಾಜ್ಯ ‘ಹುಲಿಗಳ ರಾಜ್ಯ’ ಎಂದು ಹೆಸರಾಗಿರುವುದು. ಬಂಡೀಪುರ, ಭದ್ರಾ, ದಾಂಡೇಲಿ, ನಾಗರಹೊಳೆ, ಬಿಳಿಗಿರಿರಂಗ ಸ್ವಾಮಿ ಸೇರಿದಂತೆ ಒಟ್ಟು 5 ಹುಲಿ ಸಂರಕ್ಷಿತ ಅರಣ್ಯಗಳು ನಮ್ಮಲ್ಲಿವೆ. ಇವೆಲ್ಲಾ ಕಾರಣಗಳಿಂದಾಗಿಯೇ ಈ ಬಾರಿ ಸ್ಥಬ್ದಚಿತ್ರದಲ್ಲಿ ಹುಲಿಗೆ ಪ್ರಾಮುಖ್ಯತೆ ನೀಡಲಾಗಿದೆ. ಗುಡ್ಡವೊಂದರ ತುದಿಯಲ್ಲಿ ವಿಶ್ರಮಿಸುತ್ತಿರುವ ಹುಲಿಯ ಪ್ರತಿಕೃತಿ ಈ ಬಾರಿಯ ಸ್ತಬ್ಧಚಿತ್ರದ ಆಕರ್ಷಣೆ.

ಆನೆ
ಕರುನಾಡ ಮನೆಯ ಹಬ್ಬ ಮೈಸೂರು ದಸರಾಗೆ ಮುಕುಟದಂತಿರುವ ಆನೆಗಳಿಗೆ ಈ ಬಾರಿಯ ಸ್ಥಬ್ದಚಿತ್ರದಲ್ಲಿ ಜಾಗ ಸಿಕ್ಕಿರುವುದು ಆಶ್ಚರ್ಯದ ಸಂಗತಿಯೇನಲ್ಲ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಆನೆಗಳು ವಾಸವಾಗಿರುವ ರಾಜ್ಯವೆನ್ನುವ ಖ್ಯಾತಿ ಸಿಕ್ಕಿರುವುದೂ ಕರ್ನಾಟಕಕ್ಕೇ. ಕಳೆದ ವರ್ಷ ಆನೆಗಳ ಗಣತಿ ನಡೆಸಿದಾಗ  ಸುಮಾರು 6000ಕ್ಕೂ ಹೆಚ್ಚಿನ ಆನೆಗಳು ನಮ್ಮ ಕಾಡುಗಳಲ್ಲಿರುವ ಮಾಹಿತಿ ಲಭ್ಯವಾಗಿತ್ತು. ರಾಜ್ಯ ಅರಣ್ಯ ಇಲಾಖೆ ಗುರುತು ಮಾಡಿರುವ “ಹಾಸನ- ಕೊಡಗು- ಮೈಸೂರು- ಮಂಡ್ಯ- ಬೆಂಗಳೂರು’ ವಲಯದಲ್ಲಿ ಅತಿ ಹೆಚ್ಚು ಅಂದರೆ ಶೇ. 90ರಷ್ಟು ಆನೆಗಳಿವೆ. ಈ ವಲಯವನ್ನು ಹೊರತು ಪಡಿಸಿದರೆ ಉತ್ತರಕನ್ನಡ ಮತ್ತು ಬೆಳಗಾವಿಯಲ್ಲಿ ಪುಟ್ಟ ಸಂಖ್ಯೆಯಲ್ಲಿ ಆನೆಗಳಿವೆ. 

Advertisement

ಸಿಂಗಳೀಕ

ನಿಮಗೆ ಗೊತ್ತಾ ಪ್ರಪಂಚದಲ್ಲೇ ಅತ್ಯಧಿಕ ಸಂಖ್ಯೆಯ ಸಿಂಹದ ಬಾಲದ ಸಿಂಗಳೀಕ(ಲಯನ್‌ ಟೇಲ್ಡ್‌ ಮಕಾಕ್‌) ಇರುವ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ಉತ್ತರಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆ. ಪ್ರಪಂಚದಲ್ಲಿ ಅಳಿವಿನಂಚಿನಲ್ಲಿರುವ ಸಂತತಿಯೆಂದೇ ಬಿಂಬಿತವಾಗಿರುವ ಸಿಂಗಳೀಕ ಪಶ್ಚಿಮಘಟ್ಟ ಸೇರಿದಂತೆ ಕೊಡಗಿನಲ್ಲೂ ಬರುತ್ತೆ. ಸಿಂಗಳೀಕದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಬ್ದ ಚಿತ್ರದಲ್ಲಿ ಮುಂದುಗಡೆ ಅವುಗಳ ಪ್ರತಿಕೃತಿ ಇರಲಿದೆ. ಸಿಂಗಳೀಕಗಳ ಗುಂಪೊಂದು ಹಲಸಿನ ಹಣ್ಣನ್ನು ಮೆಲ್ಲುತ್ತಿರುವ ಹಾಗೆ ಪ್ರತಿಕೃತಿ ರೂಪಿಸಲಾಗುತ್ತಿದೆ.

ನವಿಲು
ರಾಷ್ಟ್ರಪಕ್ಷಿ ಯಾವುದೆಂದು ಶಾಲೆಯ ಮಕ್ಕಳನ್ನು ಕೇಳಿದರೂ ಕಣ್ಮುಚ್ಚಿ “ನವಿಲು’ ಎಂದು ಉತ್ತರ ಕೊಟ್ಟುಬಿಡುತ್ತಾರೆ. ರಾಜ್ಯದಲ್ಲಿ 2 ನವಿಲು ಅಭಯಾರಣ್ಯಗಳಿವೆ. ಮಂಡ್ಯದ ಆದಿಚುಂಚನಗಿರಿ ನವಿಲು ಅಭಯಾರಣ್ಯ ಮತ್ತು ಬಂಕಾಪುರ ನವಿಲು ಅಭಯಾರಣ್ಯ. ರಾಷ್ಟ್ರಪಕ್ಷಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನವಿಲು ಈ ಬಾರಿ ನಮ್ಮ ಸ್ಥಬ್ದಚಿತ್ರದಲ್ಲಿ ಸ್ಥಾನಪಡೆದಿದೆ.

ಹಾರ್ನ್ಬಿಲ್‌


ನೀವೆಂದಾದರೂ ದಾಂಡೇಲಿಯಲ್ಲಿ, ಕಾಳಿ ನದಿಯ ದಡದಲ್ಲಿದ್ದರೆ ನಿಮಗೆ ಹಾರ್ನ್ಬಿಲ್‌ ಪಕ್ಷಿಯ ದರ್ಶನ ಆಗಿಯೇ ಆಗುತ್ತದೆ. ಅಷ್ಟರಮಟ್ಟಿಗೆ ಈ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಕಾಣಸಿಗುತ್ತವೆ. ಅದರಲ್ಲೂ ಮಲಬಾರ್‌ ಪೈಡ್‌ ಹಾರ್ನ್ ಇಲ್ಲಿ ಅಧಿಕ ಸಂಖ್ಯೆಯಲ್ಲಿವೆ. ದಾಂಡೇಲಿ ಬಿಟ್ಟರೆ ಈ ಪ್ರಮಾಣದಲ್ಲಿ ಮಧ್ಯಪ್ರದೇಶ ಮತ್ತು ಶ್ರೀಲಂಕಾ ಕಾಡುಗಳಲ್ಲಿ ಈ ಪಕ್ಷಿಯನ್ನು ಕಾಣಬಹುದಾಗಿದೆ. ಹಳದಿ, ಬಿಳಿ, ಕಪ್ಪು ಬಣ್ಣಗಳಿಂದ ಕೂಡಿದ ಈ ಆಕರ್ಷಕ ಪಕ್ಷಿಯನ್ನು ಪೆರೇಡಿನಲ್ಲಿ ನೋಡಿ ಆನಂದಿಸಬಹುದು.

ಮಿಂಚುಳ್ಳಿ
ನಿಮ್ಮೂರ ಕೆರೆಗಳಲ್ಲಿ, ಹೊಳೆಯಲ್ಲಿ ಕ್ಷಣಮಾತ್ರದಲ್ಲಿ ನೀರಿಗೆ ಡೈವ್‌ ಹೊಡೆದು ಗಬಕ್ಕನೆ ಪುಟ್ಟ ಮೀನನ್ನು ಕಚ್ಚಿ ಮಾಯವಾಗಿಬಿಡುವ ಮಿಂಚುಳ್ಳಿ(ಕಿಂಗ್‌ಫಿಶರ್‌) ಪಕ್ಷಿಯನ್ನು ಸಾಮಾನ್ಯವಾಗಿ ಬಹುತೇಕರು ನೋಡಿರುತ್ತಾರೆ. ಜಗತ್ತಿನಾದ್ಯಂತ ಮಿಂಚುಳ್ಳಿಯ ಒಟ್ಟು 90 ಪ್ರಭೇದಗಳಿವೆ. ಅದರಲ್ಲಿ 12 ನಮ್ಮ ದೇಶದಲ್ಲಿವೆ ಕಾಣಸಿಗುತ್ತವೆ. ಆ 12ರಲ್ಲಿ 8 ಮಿಂಚುಳ್ಳಿ ಪ್ರಭೇದಗಳನ್ನು ನಮ್ಮ ರಾಜ್ಯದಲ್ಲಿ ನೋಡಬಹುದು. ಪುಟ್ಟದಾದರೂ ಚುರುಕಿನಿಂದ ಕೂಡಿರುವ  ಈ ಹಕ್ಕಿ ‘ಪಕ್ಷಿಕಾಶಿ’ ಎಂದೇ ಹೆಸರಾಗಿರುವ ರಂಗನತಿಟ್ಟುವಿನಲ್ಲಿ ನೋಡಬಹುದು.

ಕಾಡುನಾಯಿ


ಹೆಚ್ಚಾಗಿ ಗುಂಪಿನಲ್ಲೇ ಕಂಡುಬರುವ ಕಾಡುನಾಯಿಗಳು ‘ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವುದರ ಪ್ರತೀಕ. ಈ ಕಾರಣಕ್ಕೇ ಕಾಡುನಾಯಿಗಳ ಗುಂಪೊಂದು ನಮ್ಮ ಸ್ತಬ್ಧಚಿತ್ರದಲ್ಲಿ ಸ್ಥಾನ ಪಡೆದಿದೆ. ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಅವರು ಕಾಡುನಾಯಿಗಳ ಕುರಿತು ತಯಾರಿಸಿದ್ದ “ವೈಲ್ಡ್‌ ಡಾಗ್‌ ಡೈರೀಸ್‌’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿತ್ತು. ಸಾಕ್ಷ್ಯಚಿತ್ರದ ಪ್ರಮುಖ ಭಾಗಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿತ್ತು. ಕರ್ನಾಟಕದಲ್ಲಿ ನಾಗರಹೊಳೆಯಲ್ಲಿಯೂ ಕಾಡು ನಾಯಿಗಳನ್ನು ಕಾಣಬಹುದಾಗಿದೆ.

ಕಾಡುಕೋಣ    

             
ಅತ್ಯಧಿಕ ಸಂಖ್ಯೆಯ ಕಾಡುಕೋಣಗಳಿರುವ ಕಾಡು ನಮ್ಮ ರಾಜ್ಯದಲ್ಲೇ ಇದೆ. ಈ ಹೆಮ್ಮೆಯ ಕಾಡು ಪಶ್ಚಿಮಘಟ್ಟದ ತಪ್ಪಲಲ್ಲಿರುವ ನಮ್ಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ. ತಲೆ ಮೇಲೆ ಚೂಪಾದ ಕೊಂಬು, ಅಗಾಧವಾದ ದೇಹಗಾತ್ರ ನೋಡಿದರೆ ಒಮ್ಮೆ ಭಯ ಮೂಡುವುದು. ಸುಮಾರು 400 ರಿಂದ 1500 ಕೆ.ಜಿಯವರೆಗೆ ತೂಗುವ ಈ ಪ್ರಾಣಿ ಬಲಶಾಲಿ ಕೂಡಾ. ಈ ಸಲದ ಸ್ತಬ್ಧಚಿತ್ರದಲ್ಲಿ ಕಾಡುಕೋಣ ರಾಜ್ಯದ ಶಕ್ತಿಯನ್ನು ಪ್ರದರ್ಶಿಸಲಿದೆ.

ಚಿರತೆ
ವೇಗಕ್ಕೆ ಹೆಸರಾದ ಚಿರತೆ ನಮ್ಮ ಸ್ತಬ್ಧಚಿತ್ರದಲ್ಲಿರುತ್ತೆ. ಕೆಲ ವರ್ಷಗಳ ಹಿಂದೆ ಮಾತೊಂದು ಕೇಳಿಬಂದಿತ್ತು. ಕರ್ನಾಟಕದ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಚಿರತೆ ಜೊತೆ ಜೀವಿಸುತ್ತಿದೆ ಎಂದು. ಇದಕ್ಕೆ ಕಾರಣ, ರಾಜ್ಯದ ಬಹುತೇಕ ಕಡೆಗಳಲ್ಲಿ ಚಿರತೆ ಕಂಡುಬಂದಿದ್ದು ಮತ್ತು ಜನವಸತಿ ಪ್ರದೇಶದ ಸಮೀಪದಲ್ಲೇ ಚಿರತೆಗಳು ಕಾಣಸಿಕ್ಕಿದ್ದು. 2015ನೇ ಗಣತಿಯ ಪ್ರಕಾರ ಅತ್ಯಧಿಕ ಚಿರತೆಗಳನ್ನು ಹೊಂದಿದ ಎರಡನೇ ರಾಜ್ಯವೆಂಬ ಖ್ಯಾತಿ ನಮ್ಮದು. 

ಕೊಕ್ಕರೆ
ಉದ್ದ ಕಾಲ್ಗಳ, ನೀಳ ಕತ್ತಿನ ಈ ಪಕ್ಷಿ ಹಾರುವುದನ್ನು ನೋಡುವುದೇ ಚೆಂದ. ಕೊಕ್ಕರೆ ಬೆಳ್ಳೂರು ಮತ್ತು ರಂಗನತಿಟ್ಟು ಪಕ್ಷಿಧಾಮಗಳಲ್ಲಿ ಮರಗಳ ಮೇಲಿಂದ ಹಿಂಡಾಗಿ ಆಕಾಶಕ್ಕೆ ಹಾರುವ ಕೊಕ್ಕರೆಗಳನ್ನು ನೋಡಬಹುದು. ಖಂಡಗಳಿಂದ ವಲಸೆ ಬರುವ ಇವುಗಳನ್ನು ಸ್ತಬ್ದ ಚಿತ್ರದಲ್ಲಿ ನೋಡಿ ಆನಂದಿಸಬಹುದಾಗಿದೆ.

ಹರ್ಷವರ್ಧನ್‌ ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next