Advertisement

ಜನಪ್ರತಿನಿಧಿಗಳ ಕ್ಷೌರ ಬಹಿಷ್ಕಾರ: ಎಚ್ಚರಿಕೆ!

12:37 PM Jul 17, 2017 | |

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸದಿದ್ದರೆ ಹಡಪದ ಸಮಾಜದಿಂದ ಜನಪ್ರತಿನಿಧಿಗಳ ಕ್ಷೌರ ಕೆಲಸ ಬಹಿಷ್ಕರಿಸುವುದಾಗಿ ಜಿಲ್ಲಾಧ್ಯಕ್ಷ ಈರಣ್ಣ ಬೆಳಗಟ್ಟಿ ಎಚ್ಚರಿಕೆ ನೀಡಿದರು. ಇಲ್ಲಿನ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿಯಿಂದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. 

Advertisement

ಕಳೆದ ಎರಡು ವರ್ಷದಲ್ಲಿ ರೈತ ಹೋರಾಟಗಾರರು ಮಹದಾಯಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಶಾಂತಿಯುತ ಹೋರಾಟ ನಡೆಸಿದರೂ ಉಭಯ ಸರಕಾರದ ಜನಪ್ರತಿನಿಧಿಗಳು ಕಣ್ತೆರೆದು ನೋಡುತ್ತಿಲ್ಲ. ಹೀಗಾಗಿ ಹಡಪದ ಸಮಾಜ ಜನಪತ್ರಿನಿ ಧಿಗಳ ಕ್ಷೌರ ಬಹಿಷ್ಕರಿಸುವುಗಾಗಿ ತೀರ್ಮಾನಿಸಲಾಗಿದೆ ಎಂದರು. 

ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಕಳೆದ  ಎರಡು ವರ್ಷಗಳಿಂದ ವಿವಿಧ ಬಗೆಯ ಹೋರಾಟ ನಡೆಸಿದರೂ ಸರಕಾರಗಳು ಸ್ಪಂದಿಸುತ್ತಿಲ್ಲ. ರೈತರು ಇನ್ನು ಯಾವ ರೀತಿಯ ಹೋರಾಟ ನಡೆಸಬೇಕೆಂಬುದು ತಿಳಿಯದ ಸ್ಥಿತಿಯಲ್ಲಿದ್ದಾರೆ.

ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ರೈತ ಹೋರಾಟಗಾರರು ತಕ್ಕ ಪಾಠ ಕಲಿಸುವ ಸಿದ್ಧತೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ಮಹದಾಯಿ ನ್ಯಾಯಾಧಿಕರಣ ಸಲಹೆ ನೀಡಿದರೂ ಶಾಸಕರಾಗಿ, ಸಂಸದರಾಗಿ ಯಾವುದೇ ರೀತಿಯ ಸರ್ವಪಕ್ಷ ಸಭೆ ಕರೆಯದೇ ಕಾಲಹರಣ ಮಾಡುತ್ತ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ.

ರೈತರು ಮುಂಬರುವ ಚುನಾವಣೆ ಬಹಿಷ್ಕರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುವ ವಿಷಯ ಜನಪತ್ರಿನಿಧಿ  ಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ನಿವೃತ್ತ ಶಿಕ್ಷಕ ಡಿ.ವಿ. ಕುರಹಟ್ಟಿ, ಸುರೇಶ ಹಡಪದ, ಶಿವಪುತ್ರಪ್ಪ ಹಿಂದಿನಮನಿ, ದ್ಯಾಮಣ್ಣ ಹಡಪದ, ವೀರಣ್ಣ ಹಡಪದ ಇದ್ದರು. ಪಕ್ಷಾತೀತ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ರವಿವಾರ 718ನೇ ದಿನಕ್ಕೆ ಕಾಲಿಟ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next