Advertisement

ಹಳ್ಳಿಗಳಲ್ಲಿ ಸಿಎಎ, ಎನ್‌ಆರ್‌ಸಿ ದುಷ್ಪರಿಣಾಮ ತಿಳಿಸಿ

08:20 PM Feb 02, 2020 | Lakshmi GovindaRaj |

ಮೈಸೂರು: ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಅದು ನಮಗಿನ್ನೂ ತಟ್ಟಿಲ್ಲ ಎಂದು ಸುಮ್ಮನೆ ಕೂರದೆ, ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುವಂತೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಕಾರ್ಯಕರ್ತರಿಗೆ ಮನವಿ ಮಾಡಿದರು.

Advertisement

ಕಾಂಗ್ರೆಸ್‌ ಭವನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಸಂವಿಧಾನಿಕ ಹಾಗೂ ತಾರತಮ್ಯದ ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಎಎ-ಎನ್‌ಪಿಆರ್‌-ಎನ್‌ಆರ್‌ಸಿಗಳನ್ನು ದೇಶದಲ್ಲಿ ಯಾವುದೇ ಕಾರಣಕ್ಕೂ ಜಾರಿ ಮಾಡಲಾಗಲ್ಲ. ಇದರಲ್ಲಿ ಕೇಂದ್ರ ವಿಫ‌ಲವಾಗಲಿದೆ. ಈ ಅಂಶಗಳನ್ನು ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ಕಾರ್ಯಕರ್ತರಿಗೇ ಇನ್ನೂ ಗೊಂದಲವಿದೆ. ಮೃದು ಹಿಂದುತ್ವ ಅನ್ನುತ್ತಿರುವ ಕೆಲವರು ಇನ್ನೂ ಗೊಂದಲದಲ್ಲಿದ್ದಾರೆ. ಪಕ್ಷ ಒಂದು ನಿಲುವು ತೆಗೆದುಕೊಂಡಾಗ ಕಾರ್ಯಕರ್ತರಿಗೆ ಮೊದಲು ಆ ಬಗ್ಗೆ ಸ್ಪಷ್ಟತೆ, ಬದ್ಧತೆ ಇರಬೇಕು. ಆಗ ಮಾತ್ರ ಜನರಿಗೆ ಸತ್ಯ ತಿಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್‌ ಶಾ ಮತ್ತು ಆರೆಸ್ಸೆಸ್‌ನವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ.

ಇದನ್ನು ನಾವು ಖಂಡಿಸಬೇಕು. ಆರೆಸ್ಸೆಸ್‌, ಬಿಜೆಪಿ, ಹಿಂದೂ ಮಹಾಸಭಾವರರ್ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ದೇಶಕ್ಕೆ ಅವರದು ಮೂರು ಕಾಸಿನ ತ್ಯಾಗವಿಲ್ಲ ಎಂದು ಟೀಕಿಸಿದರು. ಆರೆಸ್ಸೆಸ್‌ನ ಹುಟ್ಟು, ಬೆಳವಣಿಗೆ ಬಗ್ಗೆ ನಮ್ಮ ಕಾರ್ಯಕರ್ತರು ಓದಿಕೊಳ್ಳಬೇಕು. ರಾಜಕೀಯ ಕಾರಣಕ್ಕಾಗಿ ನಾವು ಆರೆಸ್ಸೆಸ್‌ ಅನ್ನು ವಿರೋಧ ಮಾಡುತ್ತಿಲ್ಲ. ಅವರು ಈ ದೇಶದ ಸಾಮಾಜಿಕ, ಆರ್ಥಿಕ ಬೇರುಗಳನ್ನು ಅಲುಗಾಡಿಸಲು ಹೊರಟಿದ್ದಾರೆ. ಅದಕ್ಕಾಗಿ ನಮ್ಮ ವಿರೋಧ. 135 ಕೋಟಿ ಜನರು ಉಳಿಯಬೇಕಾದರೆ ಮೊದಲು ದೇಶ ಉಳಿಯಬೇಕು ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯವರನ್ನು ಕೊಂದವರನ್ನು ಇವರು ದೇವರೆಂದು ಪೂಜಿಸುತ್ತಾರೆ. ಇವರಿಗೆ ಮಾನವೀಯತೆಯೇ ಇಲ್ಲ. ಮನುಷ್ಯರನ್ನು ಪ್ರೀತಿಸದವರು ಕ್ರೂರಿಗಳಾಗುತ್ತಾರೆ. ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದರೆ ದೇಶದ್ರೋಹ ಅನ್ನುತ್ತಾರೆ. 2014ರ ಡಿಸೆಂಬರ್‌ 31ಕ್ಕೂ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ, ಆಪಾ^ನಿಸ್ಥಾನಗಳಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎನ್ನುವುದು ಸ್ವಾಗತಾರ್ಹ.

Advertisement

ಆದರೆ, ಅದರಿಂದ ಮುಸ್ಲಿಮರನ್ನೇಕೆ ಹೊರಗಿಟ್ಟಿರಿ? ಪಾಕಿಸ್ತಾನ, , ಬಾಂಗ್ಲಾದೇಶ, ಆಪಾ^ನಿಸ್ಥಾನ ಈ ಮೂರು ದೇಶಗಳು ಮಾತ್ರ ಏಕೆ ನಿಮ್ಮ ಆಯ್ಕೆ? ಶ್ರೀಲಂಕಾ, ಭೂತಾನ್‌, ನೇಪಾಳ, ಚೀನಾ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಬಂದವರಿಗೇಕೆ ಪೌರತ್ವ ಕೊಡಲ್ಲ ಎಂದು ಪ್ರಶ್ನಿಸಿದರು. ಭಾರತ ಬಹುತ್ವದ ರಾಷ್ಟ್ರ. ಯಾವುದೇ ಧರ್ಮದ ಆಧಾರದ ಮೇಲೆ ರಚನೆ ಆಗಿಲ್ಲ. ಹೀಗಾಗಿ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು ಎಂದರು.

ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರ: ದೇಶದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಆ ಬಗ್ಗೆ ಪ್ರಧಾನಿ ಮತ್ತು ಬಿಜೆಪಿಯವರು ಮಾತನಾಡಲ್ಲ. ಇದು ನಿಮ್ಮ ಆದ್ಯತೆಗಳಲ್ಲವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಸ್ಲಿಮರನ್ನು ಪ್ರಚೋದನೆ ಮಾಡಿ ಅವರು ಬೀದಿಗಿಳಿಯಲಿ, ಅವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟೋಣ, ಆ ಮೂಲಕ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.

ಆರೆಸ್ಸೆಸ್‌ ಹುಟ್ಟಿದಾಗಿನಿಂದಲೂ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹವಣಿಸುತ್ತಿದೆ. ಆದರೆ, ಸಂವಿಧಾನದಲ್ಲಿ ಅದಕ್ಕೆ ಅವಕಾಶವಿಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಸಂವಿಧಾನವನ್ನು ನೇರವಾಗಿ ಬದಲಾವಣೆ ಮಾಡಲಾಗಲ್ಲ. ಅದಕ್ಕೆ ಪರೋಕ್ಷವಾಗಿ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ. ಆ ಮೂಲಕ ಅಂತಿಮವಾಗಿ ಮತದಾನದ ಹಕ್ಕು ಕಸಿದುಕೊಳ್ಳುವ ಸಂಚಿದೆ ಎಂದು ಕಿಡಿಕಾರಿದರು.

ಸಂತೋಷ್‌ ಭಾಷಣ ಪ್ರಚೋದನಾಕಾರಿ: ಸಿಎಎ ಪರ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌, ಪ್ರಚೋದ‌ನಾಕಾರಿ ಮತ್ತು ತಪ್ಪು ಮಾಹಿತಿಗಳಿಂದ ಕೂಡಿದ ಭಾಷಣ ಮಾಡಿದ್ದಾರೆ. ಅವರು ಹೇಳಿದ್ದೇ ಸರಿ ಎಂದು ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ವಸ್ತುಸ್ಥಿತಿಯನ್ನು ಕಾಂಗ್ರೆಸ್‌ ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಡಲು ಈ ವಿಚಾರ ಸಂಕಿರಣ ಆಯೋಜಿಸಿದ್ದು, ಕಾರ್ಯಕರ್ತರು ಅರ್ಥಮಾಡಿಕೊಂಡು ಜನರಿಗೆ ಅರ್ಥಮಾಡಿಸುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next