ಮುಂಬಯಿ : ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಉಗ್ರರೆಂದು ಗೊತ್ತುಪಡಿಸಿದ 10 ವ್ಯಕ್ತಿಗಳನ್ನು ಹೋಲುವ ಖಾತೆಗಳ ಬಗ್ಗೆ ಸರಕಾರಕ್ಕೆ ವಿವರವಾದ ವರದಿ ನೀಡುವಂತೆ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಗುರುವಾರ ತಿಳಿಸಿದೆ.
ಅಕ್ಟೋಬರ್ 4 ರಂದು, ಕೇಂದ್ರ ಗೃಹ ಸಚಿವಾಲಯವು ಹಿಜ್ಬುಲ್ ಮುಜಾಹಿದ್ದೀನ್ , ಲಷ್ಕರ್-ಎ-ತೈಬಾ ಮತ್ತು ಇತರ ನಿಷೇಧಿತ ಸಂಘಟನೆಗಳ ಒಟ್ಟು 10 ಸದಸ್ಯರನ್ನು ಯುಎಪಿಎ ಕಾಯ್ದೆಯ ಅಡಿಯಲ್ಲಿ ಉಗ್ರರೆಂದು ಗೊತ್ತುಪಡಿಸಿದೆ.
ಉಗ್ರರೆಂದು ಗೊತ್ತುಪಡಿಸಿದವರಲ್ಲಿ ಪಾಕಿಸ್ಥಾನಿ ಪ್ರಜೆ ಹಬೀಬುಲ್ಲಾ ಮಲಿಕ್ ಅಲಿಯಾಸ್ ಸಾಜಿದ್ ಜುಟ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಬಸಿತ್ ಅಹ್ಮದ್ ರೇಶಿ, ಪ್ರಸ್ತುತ ಪಾಕಿಸ್ಥಾನದಲ್ಲಿ ನೆಲೆಸಿರುವ ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಜಾದ್, ಸೋಪೋರ್‌ನ ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಪುಲ್ವಾಮಾದ ಶೇಖ್ ಜಮೀಲ್-ಉರ್-ರೆಹಮಾನ್ ಅಲಿಯಾಸ್ ಶೇಖ್ ಸಾಹಬ್ ಅವರಾಗಿದ್ದಾರೆ.
ಉಳಿದವರಾದ ಶ್ರೀನಗರ ಮೂಲದ ಬಿಲಾಲ್ ಅಹ್ಮದ್ ಬೇಗ್ ಅಲಿಯಾಸ್ ಬಾಬರ್, ಪೂಂಚ್‌ನ ರಫೀಕ್ ಅಲಿಯಾಸ್ ಸುಲ್ತಾನ್, ದೋಡಾದ ಇರ್ಷಾದ್ ಅಹ್ಮದ್ ಅಲಿಯಾಸ್ ಇದ್ರೀಸ್, ಕುಪ್ವಾರದ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಎಲ್‌ಮತಿಯಾಜ್ ಮತ್ತು ಬಹಮದ್ ಅಹ್ಮದ್ ಷೋಕತ್ಚಿ ಲೈಸ್‌ರಮ್ ಶೇಖ್ ಆಗಿದ್ದಾರೆ.
ಪ್ರತ್ಯೇಕ ಅಧಿಸೂಚನೆಗಳಲ್ಲಿ, ಪೂಂಚ್‌ನಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಪ್ರಮುಖ ಹ್ಯಾಂಡ್ಲರ್ ಹಬೀಬುಲ್ಲಾ ಮಲಿಕ್ ಜಮ್ಮುವಿನಲ್ಲಿ ನೆಲೆಗೊಂಡಿರುವ ಉಗ್ರರಿಗೆ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಸಂವಹನ ವ್ಯವಸ್ಥೆಗಳನ್ನು ಡ್ರೋನ್ ಗಳ ಮೂಲಕ ಬೀಳಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಗೃಹ ಸಚಿವಾಲಯ ಹೇಳಿದೆ.