Advertisement

ಚುನಾವಣೆಯಲ್ಲೇ ಟೀಕೆಗಳಿಗೆ ಉತ್ತರಿಸುವೆ: ಎಚ್‌ಡಿಕೆ

11:29 AM Aug 18, 2017 | Team Udayavani |

ಬೆಂಗಳೂರು: ಜೆಡಿಎಸ್‌ ಶಕ್ತಿ ಕೇವಲ ಮೂರು ಜಿಲ್ಲೆಗಳಿಗೆ ಸೀಮಿತ ಎಂದು ಗರ್ವದಿಂದ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಚಿವರು-ಶಾಸಕರು ಲೂಟಿಯಲ್ಲಿ ತೊಡಗಿದ್ದು, ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಸೆಪ್ಟೆಂಬರ್‌ 15 ರ ನಂತರ ಜಾತಕ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಜೆಡಿಎಸ್‌ ಕಚೇರಿಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ಸಮಾವೇಶದ‌ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸೊಕ್ಕಿನಿಂದ ಮಾತನಾಡುತ್ತಿದ್ದಾರೆ.

ಪದೇ ಪದೇ ಜೆಡಿಎಸ್‌ ಶಕ್ತಿ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು. ಸಿದ್ದರಾಮಯ್ಯಗೆ ಪಕ್ಷ ಕಟ್ಟಿ ಅಭ್ಯಾಸ ಇಲ್ಲ. ಬೇರೆಯವರು ಕಟ್ಟಿದ ಪಕ್ಷದಲ್ಲಿ ಸೇರಿಕೊಳ್ಳುವುದು ಅವರ ಜಾಯಮಾನ. ನಾವು ನಮ್ಮ ಶ್ರಮ ಮತ್ತು ದುಡಿಮೆಯಿಂದ ಪಕ್ಷ ಕಟ್ಟಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುವ ಸ್ಥಿತಿ ಬರಲಿದ್ದು, ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೇ ಮುಖ್ಯಮಂತ್ರಿಯಾಗಲಿದ್ದಾರೆ.

ಅವರಿಂದಲೇ ಕಾಂಗ್ರೆಸ್‌ ರಾಜ್ಯದಲ್ಲಿ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಹೇಳಿದರು ಹಣ ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. 100 ಕೋಟಿ ರೂ. ವೆಚ್ಚ ಮಾಡಿ ಗುಂಡ್ಲುಪೇಟೆ, ನಂಜನಗೂಡು ಚುನಾವಣೆ ಗೆದ್ದು ಬೀಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆ ಎರಡೂ ಕ್ಷೇತ್ರದಲ್ಲಿ ಇವರು ಗೆಲ್ಲಲ್ಲ ಎಂದರು. ಅರ್ಕಾವತಿ ಡಿ ನೋಟಿಫಿಕೇಷನ್‌ಗಿಂತ ಹಗರಣ ಬೇಕಾ ಇವರ ಸರ್ಕಾರದ ಭ್ರಷ್ಟಾಚಾರಕ್ಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜೆಡಿಎಸ್‌ ಸರ್ಕಾರ ಬರಲಿ ಇವರಿಗೆ ತೋರಿಸುತ್ತೇನೆ.

ಹನ್ನೊಂದು ವರ್ಷಗಳ ಜಂತಕಲ್‌ ಕೇಸು ಹಿಡಿದು ಜಗ್ಗಾಡುತ್ತಿರುವ ಇವರಿಗೆ ಸರಿಯಾದ ಬುದ್ಧಿ ಕಲಿಸುತ್ತೇನೆ ಎಂದು ಗುಡುಗಿದರು.  ನನಗೆ ವಾಸಿಯಾಗದ ಕಾಯಿಲೆ ಏನೂ ಇಲ್ಲ. ಕಫ‌ ಮತ್ತು ಕೆಮ್ಮಿನ ಕಾರಣ ಸಿಂಗಪುರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದೆ. ಇದೀಗ ಆರೋಗ್ಯವಾಗಿದ್ದು ಮುಂದಿನ ತಿಂಗಳಿನಿಂದ ಚುನಾವಣೆ ಯುದ್ಧಕ್ಕೆ ಇಳಿಯಲಿದ್ದೇನೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಪ್ರವಾಸ ಮಾಡಲಿದ್ದೇನೆ. ಆ ಭಾಗದಿಂದಲೇ 40 ಕ್ಷೇತ್ರ ಗೆದ್ದು ತೋರಿಸುತ್ತೇನೆ ಎಂದು ಹೇಳಿದರು. ನಾನು ಯಾರ ಬಗ್ಗೆಯೂ ಮೃಧು ಧೋರಣೆ ತಾಳಿಲ್ಲ. ತಾಳುವ ಅಗತ್ಯವೂ ಇಲ್ಲ. ಒಂದು ತಿಂಗಳಿನಿಂದ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಸದ್ಯದಲ್ಲೇ  ಎಲ್ಲ ವಿಷಯಗಳ ಬಗ್ಗೆ ಮಾತನಾಡಲಿದ್ದೇನೆ ಎಂದು ತಿಳಿಸಿದರು.

ಬಿಬಿಎಂಪಿಯಲ್ಲಿ ಹೈಪವರ್‌ ಕಮಿಟಿ ಮಾಡಿಕೊಂಡು ಕೋಟಿ ಕೋಟಿ ರೂ. ಲೂಟಿ ಮಾಡುತ್ತಿದ್ದಾರೆ. ಸಚಿವ ಜಾರ್ಜ್‌ ಅವರೇ ಎಲ್ಲ ಅಧಿಕಾರ ಇಟ್ಟುಕೊಂಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಅಧಿಕಾರ ಇಲ್ಲ. ಬೆಂಗಳೂರು ಅಭಿವೃದ್ದಿ ಮಾಡಿ ಬಿಟ್ಟಿದ್ದೇವೆ ಎಂದು ಬೊಗಳೆ ಬಿಟ್ಟ ಕಾಂಗ್ರೆಸ್‌ನವರ ಸಾಧನೆ ಇತ್ತೀಚೆಗೆ ಸುರಿದ ಮಳೆಯಿಂದ ಬಯಲಾಗಿದೆ. ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸಬೇಕೇ ? ಬೇಡವೇ? ಎಂಬ ಬಗ್ಗೆ ಜೆಡಿಎಸ್‌ ಸದಸ್ಯರು-ಶಾಸಕರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ  

ಇಂದಿನಿಂದ ದೇವೇಗೌಡರ ಉತ್ತರ ಕರ್ನಾಟಕ ಪ್ರವಾಸ
ಬೆಂಗಳೂರು:
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಶುಕ್ರವಾರದಿಂದ ಆರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿರುವ ಅವರು ಕಾರ್ಯಕರ್ತರ ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭಗಳಲ್ಲಿ ಐದೂ ಜಿಲ್ಲೆಗಳಲ್ಲಿ  ರಾಜಕೀಯವಾಗಿ ತಟಸ್ಥರಾಗಿರುವ ಜನತಾಪರಿವಾರದ ನಾಯಕರನ್ನು ಭೇಟಿ ಮಾಡಿ ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next