ಬೆಂಗಳೂರು: ಎಲ್ಲಾ ಸಾಧಕ – ಬಾಧಕ ನೋಡಿಯೇ ಸರ್ಕಾರ ನೈಟ್ ಕರ್ಫ್ಯೂ ನಿರ್ಧಾರ ಮಾಡಿದೆ. ಪದೇ ಪದೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎರಡನೇ ಅಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾತ್ತು. ಯಾಕೆ ಲಾಕ್ ಡೌನ್ ಆಗಿತ್ತೆಂದು ತಿಳಿದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ದಿನಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಇದರ ಪಾಲನೆ ಒಳ್ಳೆಯ ರೀತಿಯಲ್ಲಿ ಆಗಬೇಕು. ಜನರು ಸಹಕಾರ ಕೊಡಬೇಕು. ಹತ್ತು ದಿನಗಳ ಕಾಲ ಪರಿಸ್ಥಿತಿ ಗಮನಿಸುತ್ತೇವೆ. ನಂತರ ಸಿಎಂ, ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಕೋವಿಡ್ ಹೆಚ್ಚಳ: ವಿಶ್ವಾದ್ಯಂತ 4 ದಿನಗಳಲ್ಲಿ 11,500 ವಿಮಾನ ಸಂಚಾರ ರದ್ದು,ಪ್ರಯಾಣಿಕರ ಪರದಾಟ
15-18 ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಗೆ ಕೇಂದ್ರ ಸೂಚಿಸಿದೆ. ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಅಗತ್ಯದಷ್ಟು ಸಂಗ್ರಹವಿಲ್ಲ. ಕೇಂದ್ರದ ಎದುರು ಕೋವ್ಯಾಕ್ಸಿನ್ ಗೆ ಬೇಡಿಕೆ ಇಡುತ್ತೇವೆ. ಕೇಂದ್ರದಿಂದ ಕೋವ್ಯಾಕ್ಸಿನ್ ಸರಾಗವಾಗಿ ಪೂರೈಕೆ ಆಗುವ ವಿಶ್ವಾಸ ಇದೆ. 43 ಲಕ್ಷ ಮಕ್ಕಳಿಗೆ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗುತ್ತದೆ ಎಂದು ಸುಧಾಕರ್ ಹೇಳಿದರು.
ಅಧಿಕಾರಕ್ಕೆ ಬಂದ ಒಂದು ವಾರದ ಒಳಗೆ ಮತಾಂತರ ನಿಷೇಧ ಕಾಯ್ದೆ ಕಿತ್ತುಹಾಕ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಸುಧಾಕರ್, ಅವರು ಅಧಿಕಾರಕ್ಕೆ ಬರಲ್ಲ, ಅದಾಗಲ್ಲ. ಅದಕ್ಕೇ ಹಾಗೇ ಹೇಳುತ್ತಿದ್ದಾರೆ ಎಂದರು.