Advertisement

ಮತ್ತೆ ಗರಿಗೆದರಿದ ಸೌಡ-ಶಂಕರನಾರಾಯಣ ಸಂಪರ್ಕ ಸೇತುವೆ ಬೇಡಿಕೆ

09:34 PM Oct 05, 2020 | mahesh |

ಕುಂದಾಪುರ: ಬಹುಕಾಲದ ಬೇಡಿಕೆಯಾಗಿರುವ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣದ ಬೇಡಿಕೆಯೊಂದು ಈಡೇರುವ ನಿರೀಕ್ಷೆ ಮತ್ತೂಮ್ಮೆ ಗರಿಗೆದರಿದೆ. ಈಗಾಗಲೇ ಸೇತುವೆ ಬೇಡಿಕೆಗೆ ಶಾಸಕರು, ಸಂಸದರಿಂದ ಹಸುರು ನಿಶಾನೆ ಸಿಕ್ಕಿದ್ದು, ಇದರ ಭಾಗವಾಗಿ ಸೌಡಕ್ಕೆ ಶೃಂಗೇರಿ ವಿಭಾಗದ ಹೆದ್ದಾರಿ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶನಿವಾರ ಸಂಜೆ ಭೇಟಿ ನೀಡಿ ಸೇತುವೆ ನಿರ್ಮಾಣದ ಪ್ರಸ್ತಾವಿತ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಪರಂ ರೆಡ್ಡಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ್‌ ನಾಯ್ಕ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.

ಶಂಕರನಾರಾಯಣ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸೌಡ, ಹಾರ್ದಳ್ಳಿ – ಮಂಡಳ್ಳಿ , ಮೊಳಹಳ್ಳಿ , ಯಡಾಡಿ- ಮತ್ಯಾಡಿ ಮತ್ತಿತರ ಭಾಗದ ಜನ ಸೇತುವೆಯಿಲ್ಲದೆ ಹಾಲಾಡಿ ಮೂಲಕ ಸುತ್ತುಬಳಸಿ, 10 ಕಿ.ಮೀ. ಹೆಚ್ಚುವರಿ ಸಂಚಾರ ನಡೆಸಬೇಕಾಗಿದೆ. ಈ ಸೇತುವೆಗಾಗಿ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ, ಸೌಡ ಮತ್ತಿತರ ಊರುಗಳ ಜನ ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದಾರೆ.

ಈ ಮೊದಲು ಸೌಡ-ಶಂಕರನಾರಾಯಣ, ಆಲೂರಿನ ರಾಗಿಹಕ್ಲು, ಕಬ್ಬಿನಾಲೆ ಹಾಗೂ ಬೈಂದೂರಿನ ತಾರಾಪತಿ – ಅಳಿವೆಕೋಡಿ ಬಳಿ ಸೇರಿದಂತೆ ಒಟ್ಟು 4 ಸೇತುವೆ ಈ ಹಿಂದೆ ಕೇಂದ್ರ ರಸ್ತೆ ಅಭಿವೃದ್ಧಿ ನಿಗಮದಿಂದ ಮಂಜೂರಾಗಿತ್ತು. ಆಗಿನ ಸಿಎಂ ಸಿದ್ದರಾಮಯ್ಯ ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕೂಡ ನೆರವೇರಿಸಿದ್ದರು. 18 ಕೋ.ರೂ. ಅನುದಾನದ ಪ್ಯಾಕೇಜ್‌ ತಾಂತ್ರಿಕ ಕಾರಣದಿಂದ ಕೈಬಿಟ್ಟು ಹೋಗಿತ್ತು. ಈಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಿಂದಾಗಿ ರಾಜ್ಯ ಸರಕಾರದಿಂದ ಈ ಸೇತುವೆಗಳಿಗೆ 35 ಕೋ.ರೂ. ಅನುದಾನ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಎರಡು ಕ್ಷೇತ್ರಗಳಿಗೂ ಸಂಬಂಧ
ಪ್ರಸ್ತಾವಿತ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಪಾತ್ರದ ಒಂದು ದಡವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಲ್ಲಿ ಹಾಗೂ ಇನ್ನೊಂದು ತೀರವು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಕುಂದಾಪುರದಲ್ಲಿದೆ.

Advertisement

2 ಸೇತುವೆಗಳಿಗೆ ಸಿದ್ಧತೆ
ಸದ್ಯ ತಲಾ 10 ಕೋ.ರೂ. ವೆಚ್ಚದಲ್ಲಿ ಸೌಡ ಸೇತುವೆ ಹಾಗೂ ತಾರಾಪತಿ – ಅಳಿವೆಕೋಡಿ ಸೇತುವೆ ನಿರ್ಮಾಣಕ್ಕೆ ಹಸುರು ನಿಶಾನೆ ಸಿಕ್ಕಿದೆ. ಈ ಎರಡು ಸೇತುವೆಗಳ ನಿರ್ಮಾಣ ಕಾಮಗಾರಿಯ ಮರು ಟೆಂಡರ್‌ ಕರೆಯಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಉಳಿದ ಎರಡು ಸೇತುವೆಗಳ ಜಾಗದ ವಿಚಾರ ಹಾಗೂ ಸರಿಯಾದ ರಸ್ತೆ ಸಂಪರ್ಕ ಸಮಸ್ಯೆ ಇರುವುದರಿಂದ ವಿಳಂಬವಾಗುವ ಸಾಧ್ಯತೆಗಳಿವೆ.

ಹತ್ತಾರು ಗ್ರಾಮಗಳಿಗೆ ಲಾಭ
ಪ್ರಮುಖವಾಗಿ ಈ ಸೇತುವೆಯಾದರೆ ಉಡುಪಿ, ಶಿವಮೊಗ್ಗ ಜಿಲ್ಲೆಗೆ ಮತ್ತೂಂದು ಸಂಪರ್ಕ ರಸ್ತೆಯಾಗಲಿದೆ. ಅದಕ್ಕಿಂತಲೂ ಪ್ರಮುಖವಾಗಿ ಸೌಡ ಸೇತುವೆಯಾದರೆ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನೂ ಹೊಂದಿರುವ ಶಂಕರ ನಾರಾಯಣಕ್ಕೆ ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ – ಮಂಡಾಡಿ, ಯಡಾಡಿ – ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕಾತ್ತೂರು ಗ್ರಾಮಗಳ ಜನರಿಗೆ ಪ್ರಯೋಜನವಾಗಲಿದೆ. ಸೌಡ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಪ್ರಯಾಣಿಸಲು 10ರಿಂದ 12 ಕಿ.ಮೀ. ಹತ್ತಿರವಾಗಲಿದೆ. ಮಚ್ಚಟ್ಟು, ಸಿದ್ದಾಪುರ, ಹೊಸಂಗಡಿ, ಉಳ್ಳೂರು ಭಾಗದ ಜನರಿಗೆ ಮಣಿಪಾಲ, ಉಡುಪಿಗೆ ತೆರಳಲು ಕೂಡ ಅನುಕೂಲವಾಗಲಿದೆ.

ಬಹಳಷ್ಟು ಪ್ರಯೋಜನ
ಸೌಡ – ಶಂಕರನಾರಾಯಣ ಸೇತುವೆಯಾದಲ್ಲಿ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಸಿದ್ದಾಪುರ, ಹೊಸಂಗಡಿ ಭಾಗದವರಿಗೆ ಜಿಲ್ಲಾ ಕೇಂದ್ರ ಮಣಿಪಾಲ, ಉಡುಪಿ, ಕುಂದಾಪುರಕ್ಕೆ ಸಂಚರಿಸಲು ಹತ್ತಿರವಾಗಲಿದೆ. ಸೌಡ ಭಾಗದವರಿಗೆ ಶಂಕರನಾರಾಯಣಕ್ಕೆ ಬರಲು ಬಹಳಷ್ಟು ಪ್ರಯೋಜನವಾಗಲಿದೆ.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ

4 ಸೇತುವೆ ನಿರ್ಮಾಣ
ಸೌಡ – ಶಂಕರನಾರಾಯಣ, ಆಲೂರಿನ ರಾಗಿಹಕ್ಲು, ಕಬ್ಬಿನಾಲೆ ಹಾಗೂ ಬೈಂದೂರಿನ ತಾರಾಪತಿ – ಅಳಿವೆಕೋಡಿ ಈ 4 ಸೇತುವೆಗಳಿಗೆ ಸಂಸದರೊಂದಿಗೆ ಮಾತನಾಡಿ, ರಾಜ್ಯ ಸರಕಾರಕ್ಕೆ ಹೊಸದಾಗಿ ಬೇಡಿಕೆ ಸಲ್ಲಿಸಿದ್ದೇನೆ. 35 ಕೋ.ರೂ. ಅನುದಾನ ಮಂಜೂರಾಗುವ ಭರವಸೆಯಿದೆ. ಅದನ್ನು ಈ ಸೇತುವೆಗಳಿಗೆ ವಿನಿಯೋಗಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next