ಚಿಕ್ಕಬಳ್ಳಾಪುರ: ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಫಲಾನುಭವಿಗಳು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿ ಇತರ ಕುಟುಂಬಗಳಿಗೂ ಅನುಕೂಲ ಕಲ್ಪಿಸಲು ನೆರವಾಗಬೇಕು ಎಂದು ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 87 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ತಲಾ ಒಂದು ಲಕ್ಷದಂತೆ 87 ಲಕ್ಷ ರೂ. ನೀಡಲಾಗುತ್ತಿದೆ.
ನನ್ನ ವಿವೇಚನಾಧಿಕಾರ ಬಳಸಿ 13 ಲಕ್ಷ ರೂ. ಹೆಚ್ಚುವರಿಯಾಗಿ ನೀಡಲು ಕ್ರಮ ವಹಿಸಿ ಜಿಲ್ಲೆಗೆ 1 ಕೋಟಿ ಅನುದಾನವನ್ನು 100 ಕುಟುಂಬಗಳಿಗೆ ನೀಡಲಾಗುತ್ತದೆ ಎಂದರು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 1 ಲಕ್ಷ ರೂ.ಆರ್ಥಿಕ ನೆರವು ಒದಗಿಸಲಾಗುವುದು. ಸಾಂಪ್ರದಾಯಕ ವೃತ್ತಿಗಳಲ್ಲದೇ ಹಸು ಸಾಕಾಣಿಕೆ, ಸೇವಾ ಚಟುವಟಿಕೆ, ಚಕ್ಕಲಿ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಸಹ ಈ ನೆರವು ಪಡೆದುಕೊಳ್ಳಬಹುದು.
ಯೋಜನೆಯಡಿ ಕನಿಷ್ಠ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ. 20 ರಷ್ಟು ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವುದು. ಅರ್ಜಿದಾರರು 45 ವರ್ಷಕ್ಕಿಂತ ಒಳಗಿನವರಾಗಿರಬೇಕು ಎಂದು ಮಾಹಿತಿ ನೀಡಿದರು. ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು. ಸಭೆಯಲ್ಲಿ ಆರ್ಯವೈಶ್ಯ ಸಮುದಾಯ ಮುಖಂಡರು ಉಪಸ್ಥಿತರಿದ್ದರು.