Advertisement

ಶುದ್ಧ ಕುಡಿವ ನೀರಿನ ಘಟಕಕ್ಕಿಲ್ಲ ದುರಸ್ತಿ ಭಾಗ್ಯ!

10:45 AM Mar 30, 2018 | |

ಬಳ್ಳಾರಿ: ಕುಡಿವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ಶುದ್ಧ ಕುಡಿವ ನೀರಿನ ಘಟಕಗಳನ್ನು 24 ಗಂಟೆಯೊಳಗೆ ದುರಸ್ತಿಗೊಳಿಸಬೇಕು ಎಂದು ಮೇಲಧಿಕಾರಿಗಳು ಜಿಪಂ, ತಾಪಂ ಕೆಡಿಪಿ, ಸಾಮಾನ್ಯ ಸಭೆಗಳಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವುದೇನೋ ನಿಜ. ಆದರೆ, ತಾಲೂಕಿನ ಚರಕುಂಟೆ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಬಳಕೆಯಾಗದೆ ನನೆಗುದಿಗೆ ಬಿದ್ದಿರುವುದನ್ನು ನೋಡಿದರೆ, ಈ ಮಾತುಗಳು ಕೇವಲ ಸಭೆಗಷ್ಟೇ ಸೀಮಿತ ಎನ್ನಿಸುವುದೂ ಅಷ್ಟೇ ವಾಸ್ತವ….

Advertisement

ಹೌದು…! ಕಳೆದ ವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಕುಡಿವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ದುರಸ್ತಿಗೆ ಬಂದಿರುವ ಶುದ್ಧ ಕುಡಿವ ನೀರಿನ ಘಟಕವನ್ನು 24 ಗಂಟೆಯೊಳಗೆ ರಿಪೇರಿ ಮಾಡಿಸಬೇಕು. ಒಂದು ಲಕ್ಷದೊಳಗಿನ ವೆಚ್ಚವನ್ನು ಮೊದಲು ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಇಲಾಖೆಯಿಂದ ಬಳಸಿ, ಜಿಲ್ಲಾ
ಪಂಚಾಯಿತಿಗೆ ಬಿಲ್‌ ಕಳುಹಿಸಬೇಕು. ಅದಕ್ಕೂ ಹೆಚ್ಚಾಗುವಂತಿದ್ದರೆ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಖಾರವಾಗಿ ಹೇಳಿದ್ದರು.

ಆದರೆ, ತಾಲೂಕಿನ ಚರಕುಂಟೆ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲಾಗಿದೆ. ಇದಕ್ಕಾಗಿ ಅಂದಾಜು 8 ರಿಂದ 10 ಲಕ್ಷ ರೂ. ವೆಚ್ಚ ಮಾಡಿ ಅಗತ್ಯ ಯಂತ್ರಗಳನ್ನೂ ಖರೀದಿಸಿ ಅಳವಡಿಸಲಾಗಿದೆ. ಆರಂಭದಲ್ಲಿ ಒಂದೆರಡು ತಿಂಗಳು ಚಾಲನೆ ಪಡೆದುಕೊಂಡಿದ್ದ ಶುದ್ಧ ಕುಡಿವ ನೀರಿನ ಘಟಕ ಬಳಿಕ ಸ್ಥಗಿತಗೊಂಡಿದೆ. ಸ್ಥಗಿತಕ್ಕೆ ಸಮರ್ಪಕ  ಕಾರಣಗೊತ್ತಿಲ್ಲ ವಾದರೂ, ಗ್ರಾಮಸ್ಥರು ಹೇಳುವಂತೆ ನೀರು ಶುದ್ಧಗೊಳಿಸುವ ಯಂತ್ರದಲ್ಲಿ ಅಂದಾಜು 10 ಕೊಡ ನೀರು ಸಂಗ್ರಹವಾದರೆ ಯಂತ್ರ ಸ್ಥಗಿತವಾಗುತ್ತದೆಯಂತೆ. 

ಇದನ್ನು ರಿಪೇರಿ ಮಾಡಿಸಲಾಗದ ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು, ಘಟಕಕ್ಕೆ ಬೀಗ ಜಡಿದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಭೆಯಲ್ಲಿ ಮೇಲಧಿಕಾರಿಗಳ ಮಾತುಗಳಿಗೆ ತಲೆಯಾಡಿಸುವ ಅಧಿಕಾರಿಗಳು, ಸಭೆಯ ನಂತರ ಗಾಳಿಗೆ ತೂರುತ್ತಾರೆ ಎಂಬುದಕ್ಕೆ ಚರಕುಂಟೆ ಗ್ರಾಮದ ಶುದ್ಧ ಕುಡಿವ ನೀರಿನ ಘಟಕವೇ ತಾಜಾ ಉದಾಹರಣೆಯಾಗಿದೆ.

1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಬೋರ್‌ವೆಲ್‌ಗ‌ಳೇ ಜಲಮೂಲಗಳು. ಈ ಮೊದಲು ಗ್ರಾಮದ ಹೊರ ವಲಯದಲ್ಲಿನ ಅಂತರ್ಜಲ ನೀರನ್ನೇ ಶುದ್ಧೀಕರಿಸಿ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದ್ದು, ಇದೀಗ ಬತ್ತಿದ ಹಿನ್ನೆಲೆಯಲ್ಲಿ ಅನತಿ ದೂರದಲ್ಲಿರುವ ಎಚ್‌ ಎಲ್‌ಸಿ ಕಾಲುವೆ ಬಳಿ ಬೋರ್‌ವೆಲ್‌ ಕೊರೆಸಿ, ಅಲ್ಲಿಂದ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಈ ಪೈಪ್‌ ಲೈನ್‌ಗೂ ಗ್ರಾಮದ ಅಲ್ಲಲ್ಲಿ ರಂದ್ರಗಳು ಬಿದ್ದಿರುವುದರಿಂದ ಚರಂಡಿ ನೀರು ಸೇರಿ ಕುಡಿವ ನೀರು ಕಲುಷಿತವಾಗುತ್ತಿದ್ದು, ಈ ನೀರನ್ನೇ ಸೇವಿಸುತ್ತಿರುವ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ.

Advertisement

ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಶುದ್ಧ ಕುಡಿವ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆಯೂ ಕೋರಿದ್ದರೂ, ಎಚ್ಚೆತ್ತುಕೊಳ್ಳುತ್ತಿಲ್ಲ. ಘಟಕ ಚಾಲನೆಯಲ್ಲಿದಿದ್ದರೆ, ಗ್ರಾಮಸ್ಥರು ಇಂದು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ
ಎಚ್ಚೆತ್ತುಕೊಳ್ಳಬೇಕಾಗಿದೆ.

ತಾಲೂಕಿನ ಚರಕುಂಟೆ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕದಲ್ಲಿ ಸಣ್ಣ ರಿಪೇರಿ ಇದ್ದು, ಇದೀಗ ಸರಿಪಡಿಸಲಾಗಿದೆ. ಇಂದು ಸಹ ಇಂಜಿನೀಯರ್‌ರನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದು, ಪರಿಶೀಲಿಸಿದ್ದಾರೆ. ಶೀಘ್ರದಲ್ಲೇ ಗ್ರಾಮಸ್ಥರಿಗೆ ಘಟಕದಿಂದ ಶುದ್ಧ ಕುಡಿವ ನೀರನ್ನು
ಒದಗಿಸಲಾಗುತ್ತದೆ. 
 ಜಾನಕಿರಾಮ್‌, ಇಒ, ತಾಪಂ, ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next