ಸುಳ್ಯ : ಸುಳ್ಯ- ಅಜ್ಜಾವರ- ಮಂಡೆಕೋಲು ಅಂತಾರಾಜ್ಯ ರಸ್ತೆಯ ಕಾಂತಮಂಗಲ ಸೇತುವೆ ದುರಸ್ತಿ ಶುಕ್ರವಾರ ಆರಂಭಗೊಂಡಿತ್ತು. ರಸ್ತೆಯ ಎರಡು ದಿಕ್ಕಿನಲ್ಲಿ ವಾಹನ ಪ್ರವೇಶಾತಿ ಸ್ಥಗಿತಗೊಳಿಸಿದ್ದು, ಪಾದಚಾರಿಗಳು ಮಾತ್ರ ಸೇತುವೆ ದಾಟಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಸೇತುವೆ ಪ್ರಯಾಣಿಕರ ಪಾಲಿಗೆ ಅಪಾಯಕಾರಿಯೆನಿಸಿತ್ತು. ಹೀಗಾಗಿ ದುರಸ್ತಿಗೆ ಆಗ್ರಹ ಕೇಳಿ ಬಂದಿತ್ತು.
ಮಂಜೂರಾತಿ 5 ಲಕ್ಷ ರೂ. ಸೇರಿದಂತೆ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಸೇತುವೆಗೆ ಅಳವಡಿಸಿದ ಕಬ್ಬಿಣದ ಪ್ಲೇಟ್, ಆರು ಸಂದುಗಳಲ್ಲಿ ಕಾಂಕ್ರೀಟ್ ಅಳವಡಿಕೆ ಮೊದಲಾದ ದುರಸ್ತಿ ಆಗಬೇಕಿದ್ದು, ಶುಕ್ರವಾರ ಮೇಲ್ಪದರ ತೆರವು ಕಾರ್ಯ ಪ್ರಗತಿಯಲ್ಲಿತ್ತು. ಮೂರು ದಿನಗಳಲ್ಲಿ ಈ ಕೆಲಸ ಪೂರ್ಣವಾಗಿ ಬಳಿಕ ಸೇತುವೆ ಒಳಭಾಗದ ಹಾನಿಯ ಬಗ್ಗೆ ಪರಿಶೀಲಿಸಲಾಗುತ್ತದೆ. ದುರಸ್ತಿಗೆ 30 ದಿನ ಗಳೆಂದು ನಿಗದಿಪಡಿಸಿದ್ದು, ಹಾನಿ ಪ್ರಮಾಣ ಅಂದಾಜಿಸಿದ ಬಳಿಕ ಖಚಿತ ಮಾಹಿತಿ ಸಿಗಲಿದೆ. ಕಾಂಕ್ರೀಟ್ ಹಾಸುವ 6 ದಿನಗಳಲ್ಲಿ ಓಡಾಟಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಉಳಿದ ದಿನಗಳಲ್ಲಿ ಪಾದಚಾರಿಗಳಿಗೆ ಸೇತುವೆ ಮುಖೇನ ತೆರಳಬಹುದು ಎಂದು ಜಿ.ಪಂ. ಎಂಜಿನಿ ಯರ್ ಮಣಿಕಂಠ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಮಂಡೆಕೋಲು ಅಜ್ಜಾವರ ಮಾರ್ಗವಾಗಿ ಕಾಂತಮಂಗಲ ಸೇತುವೆ ಒಂದು ಭಾಗದ ತನಕ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತವೆ. ಅಲ್ಲಿ ಜನರನ್ನು ಇಳಿಸಿ/ಹತ್ತಿಸಿ ಕರೆದುಕೊಂಡು ಹೋಗಲಾಗುತ್ತಿದೆ. ಸುಳ್ಯ ನಗರದಿಂದ ಸೇತುವೆಯ ಇನ್ನೊಂದು ಭಾಗದ ತನಕ ವಾಹನ ಓಡಾಟ ನಡೆಸುತ್ತಿದೆ. ಅಲ್ಲಿಯು ಇದೇ ವ್ಯವಸ್ಥೆ ಇದೆ.ವಿದ್ಯಾರ್ಥಿಗಳು, ಸಾರ್ವಜನಿಕರು ಸೇತುವೆಯನ್ನು ನಡೆದುಕೊಂಡು ದಾಟಿ ಎರಡು ದಿಕ್ಕಿನಲ್ಲಿ ಇರುವ ರಿಕ್ಷಾ, ಬಸ್ ಇನ್ನಿತ್ತರ ವಾಹನಗಳನ್ನು ಸಂಚರಿಸುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಓಡಾಟ ಹೆಚ್ಚಾಗಿದೆ. ಎರಡಕ್ಕಿಂತ ಅಧಿಕ ವಾಹನ ಹೊಂದಿರುವವರು ಸೇತುವೆ ಎರಡು ಭಾಗದ ಪರಿಚಿತರ ಮನೆಗಳಲ್ಲಿ ವಾಹನ ಇರಿಸಿದ್ದಾರೆ.
ಓಡಾಟಕ್ಕೆ ಪ್ರತ್ಯೇಕ ವ್ಯವಸ್ಥೆ
ಪರ್ಯಾಯ ನಾಲ್ಕು ರಸ್ತೆಗಳ ಪೈಕಿ ಕೆಲ ರಸ್ತೆಗಳ ಸ್ಥಿತಿ ಸರಿಯಾಗಿಲ್ಲ. ಬಹುತೇಕ ಪ್ರಯಾಣಿಕರು ಸೇತುವೆ ತನಕ ಒಂದು ವಾಹನ ಹಾಗೂ ಸೇತುವೆ ದಾಟಿದ ಬಳಿಕ ಇನ್ನೊಂದು ವಾಹನ ಬಳಸಿ ಓಡಾತ್ತಿದ್ದಾರೆ.