ಕನಕಪುರ: ಮೂರು ತಿಂಗಳಿಂದ ಕೆಟ್ಟು ನಿಂತಿದ್ದ ಶುದ್ಧ ನೀರಿನ ಘಟಕವನ್ನು ಅಧಿಕಾರಿಗಳು ದುರಸ್ತಿ ಮಾಡಿಸಿ ಗ್ರಾಮಸ್ಥರು ಅಲೆದಾಟ ತಪ್ಪಿಸಿದ್ದಾರೆ.
ತಾಲೂಕಿನ ಮರಳವಾಡಿಹೋಬಳಿ ಬಳಗೆರೆ ಗ್ರಾಮದಲ್ಲಿಕಳೆದ 2 ವರ್ಷಗಳ ಹಿಂದೆ ಕುಡಿಯುವ ನೀರಾವರಿ ಇಲಾಖೆಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲು ಅನುದಾನ ಬಿಡುಗಡೆಯಾಗಿತ್ತು. ಬೆಂಗಳೂರಿನ ಅರ್ಥ್ ಮೂವರ್ಸ್ ಎಂಬ ಸಂಸ್ಥೆ ಶುದ್ಧ ನೀರಿನ ಘಟಕ ಅನುಷ್ಠಾನ ಮಾಡಿ 5 ವರ್ಷ ನಿರ್ವಹಣೆಯನ್ನು ಸಂಸ್ಥೆಯೇ ವಹಿಸಿಕೊಂಡಿತ್ತು. ಆದರೆ, ಘಟಕ ಕೆಟ್ಟು ನಿಂತು 3 ತಿಂಗಳು ಕಳೆದರೂ ನಿರ್ವಹಣೆ ಹೊಣೆ ಹೊತ್ತಿದ್ದ ಸಂಸ್ಥೆ ನಿರ್ಲಕ್ಷ್ಯಿಸಿತ್ತು.
ಈ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹೊಣೆಗಾರಿಕೆ ಮರೆತು ನಿರ್ವಹಣೆ ಹೊತ್ತಿರುವ ಸಂಸ್ಥೆಯ ಗಮನಕ್ಕೆ ತಂದು ದುರಸ್ತಿಪಡಿಸುವ ಗೋಜಿಗೂ ಹೋಗಿರಲಿಲ್ಲ. ಶುದ್ಧ ನೀರಿಗೆ ಹೊಂದಿಕೊಂಡಿದ್ದ ಗ್ರಾಮಸ್ಥರು ಕೊಳವೆ ಬಾವಿ ನೀರು ಸೇವಿಸಲು ಆಗದೆ 5-6ಕಿ.ಮೀ. ದೂರದಿಂದ ನೀರು ತರುವ ಪರಿಸ್ಥಿತಿ ಎದುರಾಗಿತ್ತು.
ಅಲ್ಲದೆ ಸ್ವತ್ಛತೆ ಕಾಪಾಡಬೇಕಾದ ತೋಕ ಸಂದ್ರ ಗ್ರಾಪಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಘಟಕದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದವು. ಈ ಬಗ್ಗೆ ಕಳೆದ ಸೆ.17ರಂದು “ಶುದ್ಧ ನೀರು ಘಟಕದ ದುರಸ್ತಿಗೆ ಆಗ್ರಹ’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವರದಿ ಪ್ರಕಟಿಸಿತ್ತು. ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ವಹಣೆ ಹೊಣೆ ಹೊತ್ತಿದ್ದ ಸಂಸ್ಥೆಯ ಗಮನಕ್ಕೆ ತಂದು ಕೆಟ್ಟು ನಿಂತಿದ್ದ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸಿದ್ದಾರೆ. ಇದರಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ ತಪ್ಪಿದಂತಾಗಿದೆ. ಜತೆಗೆ ಘಟಕದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಪಂ ಅಧಿಕಾರಿಗಳು ಸ್ವತ್ಛಗೊಳಿಸಿದ್ದಾರೆ.
ಈ ಹಿನ್ನೆಲೆ “ಉದಯವಾಣಿ’ಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದ್ದಾರೆ.