ಚಿಂಚೋಳಿ: ತಾಲೂಕಿನಲ್ಲಿ ಕಳೆದ ವರ್ಷ ಆಗಸ್ಟ್ ಕೊನೆ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಹೂಡದಳ್ಳಿ ಗ್ರಾಮದ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ಒಡೆದು ಹೋಗಿ ಒಂದು ವರ್ಷವೇ ಆಗಿದ್ದು, ಈಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 3.50ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ಆರಂಭವಾಗಿದೆ.
ತಾಲೂಕಿನ ಹೂಡದಳ್ಳಿ ಗ್ರಾಮದ ಹತ್ತಿರ ಸಣ್ಣ ದಾದ ನಾಲಾ ಇತ್ತು. ಮಳೆಗಾಲದಲ್ಲಿ ಪಸ್ತಪುರ, ಮೋಘಾ, ಹೂವಿನಬಾವಿ, ರುಸ್ತಂಪುರ ಗ್ರಾಮಗಳ ಬೆಟ್ಟಗುಡ್ಡಗಳಿಂದ ಹರಿದು ಬರುವ ಮಳೆ ನೀರನ್ನು ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಸದುಪಯೋಗ ಪಡೆದುಕೊಳ್ಳಲಿ ಎಂದು ಮೈಸೂರು ರಾಜ್ಯದ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ತಮ್ಮ ಹುಟ್ಟೂರಿನಲ್ಲಿ 22 ನವೆಂಬರ್ 1969ರಲ್ಲಿ ಸಣ್ಣ ನೀರಾವರಿ ಕೆರೆ ಮಂಜೂರಿಗೊಳಿಸಿ ಮೂರು ಸಾವಿರ ಹೆಕ್ಟೇರ್ ಜಮೀನುಗೆ ನೀರಿನ ಸೌಲಭ್ಯ ಒದಗಿಸಿದ್ದರು.
ಕಳೆದ ವರ್ಷ 2020 ಆಗಸ್ಟ್ ತಿಂಗಳಲ್ಲಿ ಎಡೆಬಿಡದೇ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದ ಕೆರೆ ಸಂಪೂರ್ಣ ತುಂಬಿ ಸೆಪ್ಟೆಂಬರ್ 15ರಂದು ಮಣ್ಣಿನ ಒಡ್ಡು ಒಡೆದು ಕೆರೆಯ ಕೆಳಭಾಗದಲ್ಲಿರುವ ಅನೇಕ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯನ್ನುಂಟು ಮಾಡಿತ್ತು. ತುಂಬಾ ಹಳೆಯದಾದ ಸಣ್ಣ ನೀರಾವರಿ ಕೆರೆ ಒಡೆದು ಹೋಗಿದ್ದ ಸ್ಥಳಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ| ಅವಿನಾಶ ಜಾಧವ ಭೇಟಿ ನೀಡಿ ಪರಿಶೀಲಿಸಿದ್ದರು.
ದೋಟಿಕೋಳ ಗ್ರಾಮದ ಮೇಲ್ಭಾಗದಲ್ಲಿ ಇರುವ ಸಣ್ಣ ನೀರಾವರಿ ಕೆರೆಗೂ ಹೆಚ್ಚಿನ ನೀರು ಹರಿದು ಬಂದಿದ್ದರಿಂದ ಮಣ್ಣಿನ ಒಡ್ಡಿನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಗ್ರಾಮಸ್ಥರು ಇಡೀ ರಾತ್ರಿ ಎಚ್ಚರವಾಗಿದ್ದು ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಆ ನಂತರ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಕೋಡಿಯಿಂದ ನೀರು ಹರಿ ಬಿಟ್ಟು ಕೆರೆ ರಕ್ಷಿಸಿದ್ದರು. ಈ ಕೆರೆಯ ದುರಸ್ತಿ ಕಾರ್ಯವೂ ಆರಂಭವಾಗಬೇಕಿದೆ. ಸದಸ್ಯ ಹೂಡದಳ್ಳಿ ಸಣ್ಣ ನೀರಾವರಿ ಕೆರೆ ದುರಸ್ತಿ ಆರಂಭವಾಗಿದ್ದರಿಂದ ಮಳೆಯಾಶ್ರಿತ ರೈತರು ಹಿಂಗಾರು ಬೆಳೆಗಳಿಗೆ ನೀರು ಪಡೆಯಲು ಮತ್ತು ಬೇಸಿಗೆ ದಿನಗಳಲ್ಲಿ ದನಕರುಗಳಿಗೆ, ಗ್ರಾಮಸ್ಥರಿಗೆ ಕುಡಿಯುವ ನೀರು ಪಡೆಯಲು ಅನುಕೂಲವಾಗಲಿದೆ.
ಚಿಂಚೋಳಿ ತಾಲೂಕಿನಲ್ಲಿ ಕಳೆದ 2020ರಲ್ಲಿ ಸುರಿದ ಭಾರಿ ಮಳೆಯಿಂದ ಕೆರೆ ಒಡೆದಿತ್ತು. ಈಗ ಅದರ ದುರಸ್ತಿಗೆ ಸರ್ಕಾರದಿಂದ ಪ್ರವಾಹ ವಿಕೋಪ ನಿಧಿಯಿಂದ 3.50ಕೋಟಿ ರೂ. ಅನುದಾನ ಬಂದಿದ್ದು, ಕಾಮಗಾರಿ ಆರಂಭವಾಗಿದೆ. ಇದೇ ರೀತಿ ನಾಗಾ ಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಯೂ ಒಡೆದಿತ್ತು. ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಕೆರೆ ದುರಸ್ತಿಗಾಗಿ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗ ನಾಗಾ ಇದಲಾಯಿ ಮತ್ತು ಹೂಡದಳ್ಳಿ ಕೆರೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.
-ಶಿವಶರಣಪ್ಪ ಕೇಶ್ವಾರ, ಎಇಇ, ಸಣ್ಣ ನೀರಾವರಿ ಇಲಾಖೆ
-ಶಾಮರಾವ ಚಿಂಚೋಳಿ