ಮಹಾನಗರ: ಹಳೆ ಬಂದರು ಪ್ರದೇಶದ ಗೋಳಿಕಟ್ಟ ಬಜಾರ್‌ನಲ್ಲಿ ಒಳ ಚರಂಡಿಯ ಮ್ಯಾನ್‌ಹೋಲ್ ದುರಸ್ತಿಗಾಗಿ ಕಾರ್ಮಿಕರು ಗುಂಡಿಯೊಳಗೆ ಇಳಿದು ಕೆಲಸ ನಿರ್ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಷಯವೂ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಒಳಚರಂಡಿಗೆ ಕಾರ್ಮಿಕರು ಇಳಿದು ಸ್ವಚ್ಚತಾ ಕೆಲಸ ನಿರ್ವಹಿಸುವುದು ಕಾನೂನು ಬಾಹಿರ. ಆದರೆ ಹೀಗೆ ನಗರದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ದೃಶ್ಯವನ್ನು ಗಮನಿಸಿದ ಸಂಘಟನೆಯವರು ಆ ಫೋಟೊ ಮತ್ತು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಕಾಮಗಾರಿಯ ಬಗ್ಗೆ ಆರೋಪಗಳು ಕೇಳಿ ಬಂದರೂ ಇದುವರೆಗೂ ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲಿಕೆಯ ಆಡಳಿತವೂ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ಇಲ್ಲಿ ನಡೆದಿರುವುದು ಒಳಚರಂಡಿಯ ಸ್ವಚ್ಚತಾ ಕಾರ್ಯ ಅಲ್ಲ. ಕುಸಿದಿದ್ದ ಮ್ಯಾನ್‌ಹೋಲ್‌ನ ದುರಸ್ತಿಯನ್ನು ಕೈಗೊಳ್ಳಲಾಗಿತ್ತು. ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರರ ಕಾರ್ಮಿಕರು ಇದನ್ನು ನಿರ್ವಹಿಸಿದರೇ ಹೊರತು ಪಾಲಿಕೆಯ ಪೌರ ಕಾರ್ಮಿಕರಲ್ಲ. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ರಮೀಝಾ ಅವರು ಸ್ಥಳದಲ್ಲಿದ್ದರು. ಕಾನೂನು ಬಾಹಿರ ಕೆಲಸ ನಡೆದಿದ್ದರೆ ನಾವೇ ಕ್ರಮ ಜರಗಿಸುತ್ತಿದ್ದೆವು’ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಇಲ್ಲಿನ ಮ್ಯಾನ್‌ಹೋಲ್ ಕುಸಿದು ಎರಡು ತಿಂಗಳಾಗಿದೆ. ಸ್ಟೇಟ್ ಬ್ಯಾಂಕ್ ಪರಿಸರದ ಎಲ್ಲಾ ಒಳ ಚರಂಡಿಯ ನೀರು ಮತ್ತು ತ್ಯಾಜ್ಯ ಗೋಳಿಕಟ್ಟ ಬಜಾರ್ ಮುಖೇನ ಹಾದು ಹೋಗುತ್ತದೆ. ಕೆಲವು ದಿನಗಳ ಹಿಂದೆ ಮಳೆ ಬಂದಾಗ ಈ ಮ್ಯಾನ್ ಹೋಲ್‌ನಲ್ಲಿ ತಡೆ ಉಂಟಾಗಿ ಒಳಚರಂಡಿಯ ಸಂಪೂರ್ಣ ನೀರು ಪಕ್ಕದ ಕಾಂಪೌಂಡ್ ಒಳಗೆ ನುಗ್ಗಿ ಅನಾಹುತ ಸೃಷ್ಟಿಸಿತ್ತು. ಅಕ್ಕ ಪಕ್ಕದ ಮನೆಯವರು ಕೂಡಲೇ ಮ್ಯಾನ್‌ಹೋಲ್ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಆಯುಕ್ತರು ಪರಿಶೀಲಿಸಿ ಕಾಮಗಾರಿಗೆ ಆದೇಶಿಸಿದ್ದರು. ಹಾಗಾಗಿ ವಾರದ ಹಿಂದೆ ದುರಸ್ತಿ ಕಾಮಗಾರಿ ನಡೆಸಲಾಗಿತ್ತು ಎಂದು ವಿವರಿಸಿದ್ದಾರೆ.
ಒಳಚರಂಡಿಯ ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ಮ್ಯಾನ್ ಹೋಲ್‌ನ ಇಟ್ಟಿಗೆಗಳನ್ನು ಯಂತ್ರದಿಂದ ಮೇಲಕ್ಕೆ ಎತ್ತಲಾಗದು. ಹಾಗಾಗಿ ಕಾರ್ಮಿಕರೇ ಕೆಳಗಿಳಿದು ಆ ಕೆಲಸವನ್ನು ನಿರ್ವಹಿಸುವುದು ಅನಿವಾರ್ಯವಾಗಿತ್ತು. ಈ ಸಂದರ್ಭ ಸೇಫ್ಟಿ ಶೂ ಮತ್ತು ಹ್ಯಾಂಡ್ ಗ್ಲೌಸ್ ಧರಿಸಲು ಸೂಚಿಸಲಾಗಿತ್ತು. ಆದರೆ ಕಾರ್ಮಿಕರು ನಿರ್ಲಕ್ಷಿಸಿದ್ದರು ಎಂದು ರಮೀಝಾ ತಿಳಿಸಿದ್ದಾರೆ.
ಕಾಮಗಾರಿಯ ಚಿತ್ರ ವೈರಲ್ ಆಗಿದ್ದರಿಂದ ಈಗ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸಲಾಗಿದೆ. ಇದೀಗ ಶನಿವಾರದಿಂದ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
75 ವರ್ಷ ಹಳೆಯ ಪೈಪ್‌ಲೈನ್
‘ಇಲ್ಲಿ ಮ್ಯಾನ್‌ಹೋಲ್ ಪೂರ್ತಿಯಾಗಿ ಕುಸಿದಿತ್ತು. 1942ರಲ್ಲಿ ಈ ಒಳ ಚರಂಡಿ ನಿರ್ಮಿಸಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಇದು ಸಂಪೂರ್ಣವಾಗಿ ನವೀಕರಣಗೊಳ್ಳಲಿದೆ. ಆದರೆ ತುರ್ತಾಗಿ ಮ್ಯಾನ್‌ಹೋಲ್ ದುರಸ್ತಿ ಮಾಡಬೇಕಿತ್ತು’ ಎಂದು ಕಾರ್ಪೊರೇಟರ್ ರಮೀಝಾ ತಿಳಿಸಿದ್ದಾರೆ.