Advertisement
ಬಿ.ಸಿ. ರೋಡ್-ಚಾರ್ಮಾಡಿ ಹೆದ್ದಾರಿಯಲ್ಲಿ ಸಾಕಷ್ಟು ಕಡೆ ಹೆದ್ದಾರಿ ಹದಗೆಟ್ಟಿದ್ದು, ಅದಕ್ಕೆ ಮಳೆಗಾಲದಲ್ಲಿ ವೆಟ್‌ಮಿಕ್ಸ್ (ಜಲ್ಲಿ ಹುಡಿ) ಹಾಕಲಾಗಿತ್ತು. ಆದರೆ ಗುರುವಾಯನಕರೆ ಜಂಕ್ಷನ್‌ನಲ್ಲಿ ಹೆದ್ದಾರಿ ಪೂರ್ತಿ ಹದಗೆಟ್ಟು, ಸಾಕಷ್ಟು ಬಾರಿ ಜಲ್ಲಿ ಹುಡಿ ಹಾಕಲಾಗಿದೆ. ಆದರೆ ಇದೀಗ ಅದೇ ಪ್ರಮುಖ ಸಮಸ್ಯೆಯಾಗಿದ್ದು, ಇಡೀ ಪೇಟೆಯೇ ಧೂಳಿನಿಂದ ತುಂಬಿ ಹೋಗಿದೆ. ಪ್ರಸ್ತುತ ಈಗಲೂ ಅಲ್ಲಿ ನೀರು ಹಾಕಿ ಧೂಳಿಗೆ ಮುಕ್ತಿ ನೀಡುವ ಕಾರ್ಯ ನಡೆಯುತ್ತಿದೆ.
ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ರಸ್ತೆ ಹೊರತುಪಡಿಸಿ ಉಳಿದ ಘಾಟಿಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಘನ ವಾಹ ನಗಳು ಸಹಿತ ಹೆಚ್ಚಿನ ವಾಹನಗಳು ಬಿ.ಸಿ. ರೋಡ್ – ಚಾರ್ಮಾಡಿ ಹೆದ್ದಾರಿ ಮೂಲಕವೇ ಸಾಗಿವೆ. ಹೀಗಾಗಿ ಇಲ್ಲಿನ ಹೆದ್ದಾರಿಗೆ ಒತ್ತಡ ಬಿದ್ದು, ಬಹುತೇಕ ಕಡೆ ಸಂಚಾರವೇ ದುಸ್ತರವೆನಿಸಿದೆ. ಶಿರಾಡಿ ಘಾಟಿನಲ್ಲಿ ಸದ್ಯಕ್ಕೆ ಲಘು ವಾಹನಗಳು ಮಾತ್ರ ಸಂಚರಿಸುತ್ತಿರುವುದರಿಂದ ಲಾರಿಗಳು, ಮಂಗಳೂರಿನಿಂದ ಬೆಂಗಳೂರು ಸಹಿತ ಇತರೆಡೆಗೆ ತೆರಳುವ ಬಸ್ಸುಗಳು ಈಗಲೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಹೀಗಾಗಿ ಹೆದ್ದಾರಿಗೆ ತೇಪೆ ಕಾರ್ಯ ಅನಿವಾರ್ಯವಾಗಿದೆ. ಸಾಮಾನ್ಯವಾಗಿ ರಸ್ತೆ ಕಾಮಗಾರಿಗಳು ಮೇ ತಿಂಗಳ ಅಂತ್ಯಕ್ಕೆ ಮುಗಿಯುತ್ತವೆ. ಮುಂದಿನ ಸುಮಾರು 4 ತಿಂಗಳ ಕಾಲ ರಸ್ತೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ. ಇಂತಹ ಕೆಲಸಗಳನ್ನು ಹೊರ ಜಿಲ್ಲೆಯವರೇ ಮಾಡು ವುದರಿಂದ ಅವರು ಮಳೆಗಾಲದಲ್ಲಿ ಊರಿಗೆ ಹೋಗುತ್ತಾರೆ. ಮತ್ತೆ ಅವರು ಕೆಲಸಕ್ಕೆ ಬರುವುದು ದಸರಾ ಮುಗಿದ ಬಳಿಕವೇ. ಹೀಗಾಗಿ ಕಾರ್ಮಿಕರು ಆಗಮಿಸಿದ ಬಳಿಕ ಹೆಚ್ಚಿನ ಕಡೆ ರಸ್ತೆ ಕಾಮಗಾರಿಗಳು ಆರಂಭಗೊಳ್ಳುತ್ತವೆ.
Related Articles
ಧೂಳಿನ ಸಮಸ್ಯೆ ಇದೆ ಎಂದು ಏಕಾಏಕಿ ತೇಪೆ ಕಾರ್ಯ ನಡೆಸಿದರೆ, ಮಳೆ ಬಂದರೆ ಅದು ಪೂರ್ತಿ ಎದ್ದು ಹೋಗುತ್ತದೆ. ತೇಪೆ ಕಾರ್ಯ ನಡೆದು ಕನಿಷ್ಠ 15 ದಿನಗಳಾದರೂ ಬಿಸಿಲು ಬಿದ್ದರೆ ಅದು ಗಟ್ಟಿಯಾಗುತ್ತದೆ. ಮುಂದಿನ ವಾರ ಮಳೆಯಾಗುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಹೇಳಿರುವುದರಿಂದ ತೇಪೆ ಕಾರ್ಯವನ್ನು ಮುಂದೂಡಲಾಗಿದ್ದು, ದಸರಾ ಬಳಿಕ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಹೆದ್ದಾರಿ ತೇಪೆ ಕಾರ್ಯಕ್ಕೆ ಸರಕಾರದ ಅನುದಾನವನ್ನು ಕಾಯದೆ, ಗುತ್ತಿಗೆ ಕಂಪೆನಿಗಳಿಗೆ ಮನವಿ ಮಾಡಿ ಈ ಕಾರ್ಯವನ್ನು ಮಾಡಿಸಲಾಗುತ್ತದೆ. ಯಾರು ಮೊದಲು ಕಾಮಗಾರಿಗೆ ಒಪ್ಪಿಗೆ ಸೂಚಿಸುತ್ತಾರೋ ಅವರೇ ತೇಪೆ ಕಾರ್ಯ ನಡೆಸಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Advertisement