ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಹಾಗೂ ಇತರರಿಂದ ಜಪ್ತಿ ಮಾಡಿಕೊಂಡಿರುವ 70 ಲಕ್ಷ ರೂ. ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಆದಾಯ ಇಲಾಖೆಗೆ (ಐಟಿ) ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ನಟ ದರ್ಶನ್‌ಗೆ ಶೀಘ್ರದಲ್ಲೇ ಐಟಿ ಉರುಳು ಸುತ್ತಿಕೊಳ್ಳುವ ಸಾಧ್ಯತೆಗಳಿವೆ.
ದೊಡ್ಡ ಮಟ್ಟದಲ್ಲಿ ನಗದು ಪತ್ತೆಯಾಗಿದ್ದರಿಂದ ಐಟಿಗೆ ಪತ್ರ ಬರೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಹತ್ಯೆ ಬಳಿಕ ಆರೋಪಿ ರಾಘವೇಂದ್ರ ಆ್ಯಂಡ್ ತಂಡಕ್ಕೆ ಆರೋಪಿ ವಿನಯ್ ಮೂಲಕ 30 ಲಕ್ಷ ರೂ. ಡೀಲ್ ಮಾಡಿಕೊಳ್ಳಲಾಗಿತ್ತು. ಅನಂತರ ಮೋಹನ್‌ರಾಜ್‌ನಿಂದ ದರ್ಶನ್ 40 ಲಕ್ಷ ರೂ. ಪಡೆದು ಪ್ರಕರಣ ಮರೆಮಾಚಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಒಟ್ಟು ಆರೋಪಿಗಳಿಂದ 70 ಲಕ್ಷ ರೂ. ಜಪ್ತಿ ಮಾಡಿಕೊಳ್ಳಲಾಗಿತ್ತು. ಕಾನೂನು ಪ್ರಕಾರ ಓರ್ವ ವ್ಯಕ್ತಿಯು 10 ಲಕ್ಷ ರೂ.ಗಿಂತ ಹೆಚ್ಚು ನಗದದನ್ನು ದಾಖಲೆ ಇಲ್ಲದೇ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ದಾಖಲಾತಿ ನೀಡದಿದ್ದರೆ ಅಥವಾ ಹಣ ಮೂಲದ ಬಗ್ಗೆ ಸ್ಪಷ್ಟವಾಗಿ ತಿಳಿಸದಿದ್ದರೆ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆ ಹಚ್ಚುತ್ತದೆ. ದರ್ಶನ್‌ಗೆ ಶೀಘ್ರದಲ್ಲೇ ಐಟಿ ನೋಟಿಸ್ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಿಸಿ ಕೆಮರಾ ಕೊಟ್ಟ ಸುಳಿವು
ರೇಣುಕಾಸ್ವಾಮಿ ಕೊಲೆ ಬಳಿಕ ಪ್ರದೋಷ್ ಕೆಲ ಆರೋಪಿಗಳನ್ನು ಗಿರಿನಗರದ ನಿವಾಸಕ್ಕೆ ಕರೆದುಕೊಂಡು ಹೋಗಿದ್ದ. ನಟ ದರ್ಶನ್ ನಿಂದ ಪಡೆದಿದ್ದ 30 ಲಕ್ಷ ರೂ. ಅನ್ನು ತಮ್ಮ ಮನೆಯಲ್ಲಿಯೇ ಹಂಚಿಕೆ ಮಾಡಿದ್ದ. ಪ್ರದೋಷ್ ನಿವಾಸದಲ್ಲಿ ಇದ್ದ ಸಿಸಿ ಟಿವಿಯಲ್ಲಿ ಇತರ ಆರೋಪಿಗಳು ಬಂದಿರುವುದು ಸೆರೆಯಾಗಿದೆ. ಹಾಗಾಗಿ ಪ್ರದೋಷ್ ಮನೆಯ ಸಿಸಿ ಕೆಮರಾ ಡಿವಿಆರ್ ವಶಕ್ಕೆ ಪಡೆದಿರುವ ಪಶ್ಚಿಮ ವಿಭಾಗ ಪೊಲೀಸರು, ಆರೋಪಿಗಳು ಕೃತ್ಯಕ್ಕೆ ಮೊದಲ ಕೆಲ ದಿನ, ಕೃತ್ಯ ನಡೆದ ದಿನ ಮತ್ತು ಆದಾದ ಬಳಿಕ ಎಲ್ಲಿ ಹೋಗಿದ್ದಾರೆ ಎನ್ನುವುದರ ಮ್ಯಾಪಿಂಗ್ ಮಾಡಲು ಇಳಿದಿದ್ದಾರೆ. ಆರೋಪಿಗಳ ಮೊಬೈಲ್ ಟ್ರಾವೆಲ್ ಹಿಸ್ಟರಿ ಜತೆಗೆ ಸಿಸಿ ಟಿಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುವವರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಹಲವರನ್ನು ಸಾಕ್ಷಿದಾರರನ್ನಾಗಿ ಮಾಡಿಕೊಂಡಿದ್ದಾರೆ.