ಬೆಂಗಳೂರು: ವಿಚಾರಣಾಧೀನ ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದಕ್ಕೆ ಸ್ಥಳಾಂತರಿಸುವ ಪ್ರಕರಣಗಳಲ್ಲಿ ವಿಚಾರಣ ನ್ಯಾಯಾಲಯಗಳು ವಿವೇಚನೆ ಬಳಸಿ ಆದೇಶ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಎಸ್. ರಾವ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿದ ಪ್ರಕರಣದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ಹೇಳಿದೆ.
ಪ್ರದೋಷ್‌ನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ತತ್‌ಕ್ಷಣ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಆದೇಶಿಸಿದ್ದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದಲ್ಲಿ ಅರ್ಜಿದಾರರು ದರ್ಶನ್‌ರಿಂದ ದೂರ ಇದ್ದಾರೆ. ವೈರಲ್ ಆದ ಫೋಟೋದಲ್ಲೂ ಕಾಣಿಸಿಕೊಂಡಿಲ್ಲ. ದರ್ಶನ್ ಮೇಲಿನ ಆರೋಪವನ್ನು ಅರ್ಜಿದಾರರ ಮೇಲೆ ಹೊರಿಸಲಾಗಿದೆ ಎಂದು ಹೇಳಿದೆ, ಜತೆಗೆ, ವಿಚಾರಣಾಧೀನ ಕೈದಿಗೆ ತನ್ನಿಷ್ಟದ ಜೈಲು ಆಯ್ಕೆ ಮಾಡಿಕೊಳ್ಳಲು ಅವಕಾಶವಿಲ್ಲ.
ಹಾಗಂತ ಯಾವುದೇ ಕಾರಣಗಳಿಲ್ಲದೆ, ಏಕಾಏಕಿ ಅವರನ್ನು ಸ್ಥಳಾಂತರಿಸುವಂತಿಲ್ಲ. ವಿಚಾರಣಾಧೀನ ಕೈದಿಗಳ ಸ್ಥಳಾಂತರಕ್ಕೆ ಸೂಕ್ತ ಮತ್ತು ಸಮಂಜಸ ಕಾರಣ ನೀಡಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ವಿಚಾರಣ ನ್ಯಾಯಾಲಯಗಳು ವಿವೇಚನೆ ಬಳಸಿ ಆದೇಶಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿರುವ ಹೈಕೋರ್ಟ್, ಪ್ರದೋಷ್ ರಾವ್‌ನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ ಜೆಎಂಎಫ್ಸಿ ಕೋರ್ಟ್ 2024ರ ಆಗಸ್ಟ್ 27ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.