ಹೊನ್ನಾಳಿ: ಅವಳಿ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಹೊಳೆಹರಳಹಳ್ಳಿ, ಹನುಮಸಾಗರ, ಹನುಮಸಾಗರ ತಾಂಡ, ಗೋಪಗೊಂಡನಹಳ್ಳಿ ತಾಂಡಾ, ಸೋಮನಮಲ್ಲಾಪುರ ಮತ್ತು ಹತ್ತೂರು ಗ್ರಾಮಗಳಲ್ಲಿ ಭಾನುವಾರ ನೂತನ ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಮತದಾರರು ನನ್ನನ್ನು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಮತದಾರರ ಋಣ ಇದ್ದು ನನ್ನ ಮೇಲೆ ಇದೆ. ಮತದಾರರ ಬೇಡಿಕೆಗಳನ್ನು ಈಡೇರಿಸಲು ನಾನು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ತಾಲೂಕಿನ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಸಿಸಿ ರಸ್ತೆ, ಶಾಲಾ ಕೊಠಡಿಗಳು ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಿ ಮುಗಿಸಿದ್ದೇನೆ. ಗ್ರಾಮಗಳಲ್ಲಿ ಗ್ರಾಮಸ್ಥರ ಬೇಡಿಕೆಗಳು ಇನ್ನು ಇದ್ದು ಮುಂದಿನ ದಿನಗಳಲ್ಲಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ವಿರೋಧ ಪಕ್ಷದವರು ವಿರೋಧ ಮಾಡಲಿಕ್ಕೆ ವಿರೋಧ ಮಾಡುತ್ತಿದ್ದಾರೆ. ಅವರ ಟೀಕೆ ಟಿಪ್ಪಣೆಗಳಿಗೆ ಯಾವುದೇ ತಲೆ ಕೆಡಿಕೊಳ್ಳದೇ ನನ್ನ ಜವಾಬ್ದಾರಿಯನ್ನು ತಪ್ಪದೇ ಮಾಡುತ್ತೇನೆ. ತಾಲೂಕಿನ ಶಾಸಕನಾಗಿ ಆಯ್ಕೆಯಾಗಿ ಬಂದಾಗ ಅನೇಕ ಗುರುತರವಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಸಾಧನೆ ಮಾಡಿದ್ದೇನೆ.
ಅವಳಿ ತಾಲೂಕಿನಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳೇ ಉತ್ತರ ನೀಡುತ್ತಿವೆ. ತಾಲೂಕಿನಲ್ಲಿ ಏನು ಕೆಲಸ ಮಾಡಬೇಕು ಎನ್ನುವುದು ನನಗೆ ಕರಗತವಾಗಿದೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಭಾನುವಾರ ಒಂದೇ ದಿನ ಒಟ್ಟು 1.62 ಕೋಟಿ ರೂ. ಅನುದಾನದ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು. ತಾಪಂ ಸದಸ್ಯ ಸಿ.ಆರ್.ಶಿವಾನಂದ್, ತಾಂಡಾ ನಿಗಮದ ನಿರ್ದೇಶಕ ಮಾರುತಿನಾಯ್ಕ ಮಾತನಾಡಿದರು. ಗ್ರಾಪಂ ಅಧ್ಯಕ್ಷರುಗಳು, ಸದಸ್ಯರು ಇದ್ದರು.