Advertisement

ಕುಂದೂರು ತೋಟದಲ್ಲಿ ಚಂದ್ರಶೇಖರ್‌ ಅಂತ್ಯಕ್ರಿಯೆ

11:50 PM Nov 04, 2022 | Team Udayavani |

ಹೊನ್ನಾಳಿ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ, ನಿಗೂಢವಾಗಿ ಸಾವನ್ನಪ್ಪಿರುವ ಎಂ.ಆರ್‌. ಚಂದ್ರಶೇಖರ ಅವರ ಅಂತ್ಯಕ್ರಿಯೆ ಕುಂದೂರುಗ್ರಾಮದ ಶಾಸಕರ ತೋಟದಲ್ಲಿರುವ ಅಜ್ಜ, ಅಜ್ಜಿ ಸಮಾಧಿ  ಬಳಿಯೇ ವೀರಶೈವ ಜಂಗಮ ಪದ್ಧತಿಯಂತೆ ನಡೆಯಿತು.

Advertisement

ಬೆಳಗ್ಗೆ 6.30ಕ್ಕೆ ಕುಟುಂಬದ ಸದಸ್ಯರು ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7ರಿಂದ ಸಾರ್ವಜನಿಕರ ದರ್ಶನ ಆರಂಭವಾಗಿ ಮಧ್ಯಾಹ್ನ 2.30ರ ವರೆಗೆ ನಡೆಯಿತು. ಬಳಿಕ ಹೊನ್ನಾಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಾಲೂಕಿನ ಗೊಲ್ಲರಹಳ್ಳಿ, ಮಾಸಡಿ, ತರಗನಹಳ್ಳಿ, ಹನುಮನಹಳ್ಳಿ ಗ್ರಾಮಗಳ ಮೂಲಕ ಕುಂದೂರು ಗ್ರಾಮಕ್ಕೆ ತರಲಾಯಿತು.

ಹಿರೇಕಲ್ಮಠದ ಡಾ| ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೊಟ್ಯಾಪುರ ಹಿರೇ ಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾಂತ್ವನ ಹೇಳಿದರು.

ಪ್ರಮುಖರಿಂದ ಸಾಂತ್ವನ
ರೇಣುಕಾಚಾರ್ಯ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್‌. ಯಡಿಯೂ ರಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್‌.ಈಶ್ವರಪ್ಪ, ರಾಮಪ್ಪ, ಬಿ.ಕೆ.ಸಂಗಮೇಶ್ವರ ಮುಂತಾದ ಗಣ್ಯರು ಭೇಟಿ ನೀಡಿದರು.

ಸಮಗ್ರ ತನಿಖೆ: ಅಲೋಕ್‌ ಕುಮಾರ್‌
ಶಿವಮೊಗ್ಗ: ಚಂದ್ರಶೇಖರ್‌ ಸಾವಿನ ಬಗ್ಗೆ ಎಲ್ಲ ಕೋನಗಳಿಂದಲೂ ತನಿಖೆ ಮುಂದುವರಿದಿದೆ. ತನಿಖೆ ಸಂದರ್ಭದಲ್ಲಿ ಬಹಿರಂಗಪಡಿಸು ವುದು ಸೂಕ್ತವಲ್ಲ ಎಂದು ಕಾನೂನು ಮತ್ತು ಸುವವ್ಯಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ ಆಕಸ್ಮಿಕ ಸಾವಿನ ಬಗ್ಗೆ ಹುಬ್ಬಳ್ಳಿ, ದಾವಣಗೆರೆಯ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಮೇಲೆ ಎಲ್ಲ ಮಾಹಿತಿ ಸಿಗುತ್ತದೆ. ಸಿಸಿ ಟಿವಿಯ ಫೂಟೇಜ್‌ ಸಿಕ್ಕಿದೆ. ಕುಟುಂಬದವರ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ. ಎಫ್‌ಎಸ್‌ಐಎಲ್‌ ವರದಿಗೆ ಕಾಯುತ್ತಿದ್ದೇವೆ ಎಂದು ಹೇಳಿದರು.

ಚಂದ್ರು ಸಾವಿನ ಪ್ರಕರಣದ ಬಗ್ಗೆ ಎಲ್ಲ
ಆಯಾಮದಿಂದಲೂ ತನಿಖೆ: ಆರಗ
ಬಾಗಲಕೋಟೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಮೃತಪಟ್ಟ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುವುದು. ಎಫ್‌ಎಸ್‌ಎಲ್‌ನ ಅಧಿಕಾರಿಗಳು ಈ ನಿಟ್ಟಿನಲ್ಲಿ ತಪಾಸಣೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಬೆಂಗಳೂರಿನಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪುತ್ಥಳಿ ನಿರ್ಮಾಣದ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿನ ಮೃತ್ತಿಕೆಗಾಗಿ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅದೊಂದು ಅಪಘಾತವೇ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದಾವಣಗೆರೆ ಎಸ್ಪಿ ಹಾಗೂ ಎಡಿಜಿಪಿ ನೇತೃತ್ವದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯನ್ನು ಸದ್ಯ ಬಹಿರಂಗ ಮಾಡಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಿಂದಲೇ ಎಲ್ಲವೂ ಹೊರ ಬರಲಿದೆ ಎಂದರು.

ಬೆದರಿಕೆ ಕರೆ ಇತ್ತು
ಮೃತ ಚಂದ್ರಶೇಖರ್‌ ಅವರು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಬೆದರಿಕೆ ಕೆರೆಗಳೂ ಬರುತ್ತಿದ್ದವು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಹೀಗಾಗಿ ಅವರ ಫೋನ್‌ ಕರೆಗಳ ಮಾಹಿತಿಯನ್ನೂ ಪರಿಶೀಲಿಸ ಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next