ಹೊನ್ನಾಳಿ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಏ. 24ರಂದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಜಿ. ರಾಜಪ್ಪ ಹೇಳಿದರು. ಭಾನುವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕು ಗಣ್ಯರು ಭಾಗವಹಿಸುವರು. ಅಂದು ಬೆಳಗ್ಗೆ 11ಕ್ಕೆ ಹಿರೇಕಲ್ಮಠದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರಿಯಾಗಿ 1ಗಂಟೆಗೆ ತಾಲೂಕು ಕಚೇರಿಗೆ ತೆರಳಿ ರೇಣುಕಾಚಾರ್ಯ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ 15ರಿಂದ 20 ಸಾವಿರ ಬೆಂಬಲಿಗರು, ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಿಪಂ ಸದಸ್ಯರಾದ ಎಂ.ಆರ್. ಮಹೇಶ್, ಸುರೇಂದ್ರ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಲ್. ರಂಗಪ್ಪ, ಮುಖಂಡರಾದ ಶಾಂತರಾಜ್ ಪಾಟೀಲ್, ನೆಲಹೊನ್ನೆ ಮಂಜುನಾಥ, ಯಕ್ಕನಹಳ್ಳಿ ಜಗದೀಶ್, ಚಂದಪ್ಪ, ಕೊನಾಯ್ಕನಹಳ್ಳಿ ಮಂಜುನಾಥ್, ಶಿವುಹುಡೇದ್ ಉಪಸ್ಥಿತರಿದ್ದರು.