ಮಂಗಳೂರು: ಕಾರು ಬಾಡಿಗೆಗೆ ಪಡೆದು ಬಳಿಕ ಮಾರಾಟ ಮಾಡಿದ ಆರೋಪದಲ್ಲಿ ಬಂಟ್ವಾಳ ವಗ್ಗದ ನಿವಾಸಿ ಹರೀಶ್ ಯಾನೆ ಹರಿ (32) ಯನ್ನು ಪೊಲೀಸರು ಬಂಧಿಸಿದ್ದಾರೆ.
ಫಳ್ನೀರ್‌ನ ಕಾರು ಬಾಡಿಗೆ ಸಂಸ್ಥೆಯೊಂದರಿಂದ ಬಂಟ್ವಾಳದ ಯಕ್ಷಿತ್ ಕಾರನ್ನು 15 ದಿನಗಳಿಗೆ ಬಾಡಿಗೆಗೆ ಪಡೆದಿದ್ದ. ಅದಕ್ಕೆ 25 ಸಾವಿರ ರೂ. ಆನ್‌ಲೈನ್ ಮೂಲಕ, ಬಾಕಿ ಇರುವ 50 ಸಾವಿರ ರೂ. ನಗದಾಗಿ ಪಾವತಿಸಿದ್ದ. ಜತೆಗೆ ಆಧಾರ್ ಕಾರ್ಡ್, ಚಾಲನ ಪರವಾನಿಗೆ ಮತ್ತು 3 ಬ್ಯಾಂಕ್ ಚೆಕ್‌ಗಳನ್ನು ನೀಡಿದ್ದ.
ಆದರೆ ಬುಕ್ಕಿಂಗ್ ಅವಧಿ ಮುಗಿದಿದ್ದರೂ ಕಾರನ್ನು ಮರಳಿಸದೆ ಇರುವುದರಿಂದ ಮಾಲಕ ಮಹಮ್ಮದ್ ಹುಸೈನಾರ್ ಕಾರು ಪಡೆದವರ ನಂಬರ್‌ಗೆ ಕರೆ ಮಾಡಿದ್ದು, ಅವರು ಸ್ಪಂದಿಸಿರಲಿಲ್ಲ. ಜಿಪಿಎಸ್ ಮೂಲಕ ಪರಿಶೀಲಿಸಿದಾಗ ಕಾರು ವಿಜಯಪುರದ ಲೊಕೇಶನ್ ತೋರಿಸಿದೆ.
ಈ ಬಗ್ಗೆ ವಿಚಾರಿಸಿದಾಗ ಕಾರನ್ನು ಯಕ್ಷಿತ್ ಮತ್ತು ಹರೀಶ್ ಸೇರಿ ಆಧಾರ್‌ಕಾರ್ಡನ್ನು ನಕಲು ಮಾಡಿ ವಿಜಯಪುರದ ವ್ಯಕ್ತಿಗೆ ಮಾರಾಟ ಒಪ್ಪಂದ ಮಾಡಿ 7 ಲಕ್ಷ ರೂ. ಪಡೆದು ವಂಚನೆ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂದರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ಪೊಲೀಸ್ ತಂಡ ಓರ್ವ ಆರೋಪಿ ಹರೀಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.