Advertisement

2014 ಅಂಗನವಾಡಿಯಲ್ಲಿ 877ಕ್ಕೆ ಸ್ವಂತ ನೆಲೆ ಇಲ್ಲ

03:46 PM Jul 22, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವ ಹಿಸುತ್ತಿರುವ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಇಲ್ಲದೇ ಸೊರಗುತ್ತಿವೆ. ಜಿಲ್ಲೆಯ ಒಟ್ಟು 2014 ಅಂಗನವಾಡಿ ಕೇಂದ್ರಗಳ ಪೈಕಿ ಬರೋಬ್ಬರಿ 877 ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಸಮುದಾಯ, ಬಾಡಿಗೆ ಕಟ್ಟಡಗಳನ್ನು ಅಶ್ರಯಿಸಿವೆ.

Advertisement

ಜಿಲ್ಲೆಯಲ್ಲಿನ 6 ತಾಲೂಕುಗಳಲ್ಲಿ ಒಟ್ಟು 2014 ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ, ಆದರೆ, ಸರಿ ಸುಮಾರು ಅರ್ಧದಷ್ಟು ಕಟ್ಟಡಗಳು ಇನ್ನೂ ಸ್ವಂತದ್ದಲ್ಲ. 2014 ಅಂಗನವಾಡಿ ಪೈಕಿ ಬಾಗೇಪಲ್ಲಿ ತಾಲೂಕಿ ನಲ್ಲಿ 384 ಅಂಗನವಾಡಿ ಕೇಂದ್ರಗಳಿದ್ದು ಕೇವಲ 193 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದರೆ ಉಳಿದಂತೆ 11 ಕೇಂದ್ರ ಪಂಚಾಯಿತಿ ಕೇಂದ್ರ, 17 ಕೇಂದ್ರ ಸಮುದಾಯ ಭವನ, 62 ಕೇಂದ್ರ ಸಮೀಪದ ಸರ್ಕಾರಿ ಶಾಲೆಗಳಲ್ಲಿ ನಡೆಯತ್ತಿವೆ.

100 ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು 1 ಇತರೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 320 ಅಂಗನವಾಡಿ ಕೇಂದ್ರಗಳ ಪೈಕಿ 195 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡವಿದ್ದು ಉಳಿದಂತೆ 3 ಪಂಚಾಯ್ತಿ, 9 ಸಮುದಾಯ, 35 ಶಾಲೆ, 70 ಬಾಡಿಗೆ ಹಾಗೂ 8 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 473 ಕೇಂದ್ರಗಳಿದ್ದು ಈ ಪೈಕಿ ಕೇವಲ 229 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. 4 ಪಂಚಾಯ್ತಿ, 56 ಸಮುದಾಯ, 72 ಶಾಲೆ, 97 ಬಾಡಿಗೆ ಹಾಗೂ 15 ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗೌರಿ ಬಿದನೂರು ತಾಲೂಕಿನಲ್ಲಿ ಒಟ್ಟು 363 ಅಂಗನವಾಡಿ ಪೈಕಿ ಕೇವಲ 257 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದು ಉಳಿದಂತೆ 5 ಪಂಚಾಯ್ತಿ, 14 ಸಮುದಾಯ, 31 ಶಾಲೆ, 53 ಕೇಂದ್ರ ಬಾಡಿಗೆ ಹಾಗೂ 3 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವ ಹಿಸುತ್ತಿವೆ.

Advertisement

ಗುಡಿಬಂಡೆಯಲ್ಲಿ ಒಟ್ಟು 130 ಅಂಗನವಾಡಿ ಕೇಂದ್ರಗಳಿದ್ದು ಆ ಪೈಕಿ 95 ಕಟ್ಟಡಗಳಿಗೆ ಮಾತ್ರ ಸ್ವಂತ ನೆಲೆ ಇದೆ. ಉಳಿದಂತೆ 6 ಸಮುದಾಯ, 11 ಶಾಲೆ, 18 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 344 ಅಂಗನವಾಡಿ ಕೇಂದ್ರಗಳಿದ್ದ ಆ ಪೈಕಿ 168 ಕೇಂದ್ರಕ್ಕೆ ಮಾತ್ರ ಸ್ವಂತ ಕಟ್ಟಡ ಇದ್ದು ಉಳಿದಂತೆ 5 ಪಂಚಾಯ್ತಿ, 22 ಸಮುದಾಯ, 64 ಶಾಲೆ, 82 ಬಾಡಿಗೆ ಹಾಗೂ 3 ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಭದ್ರತೆಯಲ್ಲಿ ಚಿಣ್ಣರು: ಎಲ್‌ಕೆಜಿ, ಯುಕೆಜಿ ಮಾಯೆಯ ಪರಿಣಾಮ ಮೊದಲೇ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ಕುಸಿತ ಕಾಣುತ್ತಿದೆ. ಈ ನಡುವೆ ಸ್ವಂತ ಕಟ್ಟಡ ಇಲ್ಲದೇ ಕೆಲವು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮತ್ತೆ ಕೆಲವು ಗ್ರಾಮದ ಹಳೆಯ ಸಮುದಾಯ ಭವನ, ಶಾಲಾ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಸುರಕ್ಷರತೆ ಬದಲಾಗಿ ಅಭದ್ರತೆ ಕಾಡುತ್ತಿವೆ. ಬಹಳಷ್ಟು ಕೇಂದ್ರಗಳ ಕಟ್ಟಡಗಳು ದುರಸ್ತಿ ಆಗದೇ ಮಳೆ ಬಂದಾಗ ಸೋರುವಂತಾಗಿದೆ. ಇನ್ನೂ ಕೆಲವು ಕಟ್ಟಡಗಳು ಪಾಳು ಬಿದ್ದ ರೀತಿಯಲ್ಲಿ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ್ದೇ ಸಮಸ್ಯೆ!: ನರೇಗಾ ಯೋಜನೆಯಡಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ವಿಫ‌ುಲ ಅವಕಾಶ ಇದೆ. ಆದರೆ, ನಗರ-ಗ್ರಾಮಾಂತರ ಪ್ರದೇಶದಲ್ಲಿ ಜಾಗದ ಸಮಸ್ಯೆ ಇದೆ. ಹೀಗಾಗಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಗ್ರಾಮಾಂತರಕ್ಕಿಂತ ನಗರ ಭಾಗದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟಡಗಳೇ ಕಾಯಂ ಆಗಿವೆ. ನಿವೇಶನ ಒದಗಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಇಲಾಖೆ ಅಧಿಕಾರಿಗಳು ಸುಸ್ತಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2014 ಅಂಗನವಾಡಿ ಕೇಂದ್ರಗಳಿದ್ದು ಆ ಪೈಕಿ 1,113 ಕೇಂದ್ರ ಸ್ವಂತ ಕಟ್ಟಡದಲ್ಲಿವೆ. 28 ಕೇಂದ್ರ ಪಂಚಾಯ್ತಿ ಕಟ್ಟಡದಲ್ಲಿ, 124 ಕೇಂದ್ರ ಸಮುದಾಯ ಭವನ, 275 ಸಮೀಪದ ಸರ್ಕಾರಿ ಶಾಲೆ ಹಾಗೂ 420 ಕೇಂದ್ರ ಬಾಡಿಗೆ ಹಾಗೂ 30 ಕೇಂದ್ರ ಇತರೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ● ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next