ಬೆಂಗಳೂರು: ಫುಡ್ ಡೆಲಿವರಿಗೆಂದು ಬಾಡಿಗೆಗೆ ಪಡೆದ ಸ್ಕೂಟರ್‌ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ 50 ಸಾವಿರ ರೂ.ಗೆ ಮಾರಾಟ ಮಾಡಿದ ಆರೋಪಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲಿ ಎಫ್ಐಆರ್ ದಾಖಲಾಗಿದ್ದು, ಜಿಪಿಎಸ್ ಕೊಟ್ಟ ಸುಳಿವಿನಿಂದ ಸ್ಕೂಟರ್ ಪತ್ತೆ ಹಚ್ಚಲಾಗಿದೆ.
ಗೋಪಾಲ್ ನಾಯ್ಡು ಆಲಿಯಾಸ್ ಲಲಿತ್ ಕುಮಾರ್ ವಂಚಿಸಿದ ಆರೋಪಿ.
ಒಂದು ತಿಂಗಳ ಹಿಂದೆ ಗೋಪಾಲ್‌ನಾಯ್ಡು ಫುಡ್ ಡೆಲಿವರಿ ಮಾಡುವ ನೆಪವೊಡ್ಡಿ ಬಾಡಿಗೆಗೆ ಆನ್‌ಲೈನ್‌ನಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್ ಪಡೆದಿದ್ದ. ಬಳಿಕ ಬೇರೆ ವಾಹನದ ನೋಂದಣಿ ಸಂಖ್ಯೆಯನ್ನು ಸ್ಕೂಟರ್‌ಗೆ ಅಳವಡಿಸಿದ್ದ. ನಕಲಿ ಆರ್‌ಸಿ, ಇನ್ಶೂರೆನ್ಸ್ ಸೇರಿದಂತೆ ವಿವಿಧ ನಕಲಿ ದಾಖಲೆ ಸೃಷ್ಟಿಸಿದ್ದ. ಬಳಿಕ 50 ಸಾವಿರಕ್ಕೆ ಸ್ಕೂಟರ್ ಮಾರಾಟ ಮಾಡುವುದಾಗಿ ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದ. ಇದನ್ನು ಗಮನಿಸಿದ ಅಶೋಕ್ ಮಾನೆ ಈತನನ್ನು ಸಂಪರ್ಕಿಸಿ ಸ್ಕೂಟರ್ ಖರೀದಿಸುವುದಾಗಿ ಹೇಳಿದ್ದರು. ಬಳಿಕ ಗೋಪಾಲ್ ಸೂಚಿಸಿದ ಜಾಗಕ್ಕೆ ಹೋಗಿ ಸ್ಕೂಟರ್ ಹಾಗೂ ದಾಖಲೆ ಪರಿಶೀಲಿಸಿ 50 ಸಾವಿರ ರೂ.ಗೆ ಖರೀದಿಸಿದ್ದರು. ಸ್ಕೂಟರ್ ನನ್ನ ಹೆಸರಿನಲ್ಲಿದ್ದು, ಕೆಲವೇ ದಿನಗಳಲ್ಲಿ ಆರ್‌ಟಿಓ ಕಚೇರಿಗೆ ಹೋಗಿ ನಿಮ್ಮ ಹೆಸರಿಗೆ ದಾಖಲೆ ವರ್ಗಾವಣೆ ಮಾಡುವುದಾಗಿ ಹೇಳಿದ್ದ. ಹಲವು ದಿನ ಕಳೆದರೂ ಸ್ಕೂಟರ್ ದಾಖಲೆ ತನ್ನ ಹೆಸರಿಗೆ ವರ್ಗಾವಣೆ ಮಾಡದಿದ್ದಾಗ ಅನುಮಾನಗೊಂಡು ಗೋಪಾಲ್‌ಗೆ ಅಶೋಕ್ ಕರೆ ಮಾಡಿದ್ದ. ಆದರೆ, ಗೋಪಾಲ್ ಸಂಪರ್ಕಕ್ಕೆ ಸಿಗದೇ ಮೊಬೈಲ್ ಸ್ವಿಚ್ಢ್ ಆಫ್ ಮಾಡಿಕೊಂಡಿದ್ದ. ಅಶೋಕ್ ತನ್ನ ಊರಾದ ಹಿಂದೂಪುರಕ್ಕೆ ಸ್ಕೂಟರ್ ತೆಗೆದುಕೊಂಡು ಹೋಗಿ ಬಳಸುತ್ತಿದ್ದ.
ಜಿಪಿಎಸ್ ಕೊಟ್ಟ ಸುಳಿವಿನಿಂದ ಸ್ಕೂಟರ್ ಪತ್ತೆ : ಇತ್ತ ಸ್ಕೂಟರ್ ಅನ್ನು ಗೋಪಾಲ್‌ಗೆ ಬಾಡಿಗೆಗೆ ಕೊಟ್ಟಿದ್ದ ಖಾಸಗಿ ಕಂಪನಿ ಸಿಬ್ಬಂದಿಯ ಸಂಪರ್ಕಕ್ಕೆ ಗೋಪಾಲ್ ಸಿಗದಿದ್ದಾಗ ಅವರು ಸ್ಕೂಟರ್‌ಗೆ ಅಳವಡಿಸಿದ್ದ ಜಿಪಿಎಸ್ ಮೂಲಕ ಸ್ಕೂಟರ್ ಹಿಂದೂಪುರದಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು. ಇತ್ತೀಚೆಗೆ ಸ್ಕೂಟರ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅಶೋಕ್ ಮಾನೆಯನ್ನು ಕಂಪನಿ ಸಿಬ್ಬಂದಿ ತಡೆದಿದ್ದರು. ಇದು ನಮ್ಮ ಕಂಪನಿಯ ಸ್ಕೂಟರ್ ಆಗಿದ್ದು, ನಂಬರ್ ಪ್ಲೇಟ್ ಬದಲಾಯಿಸಿ ನೀವು ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಪ್ರಶ್ನಿಸಿದ್ದರು. ಆ ವೇಳೆ ಅಶೋಕ್ ನಡೆದ ಘಟನೆ ವಿವರಿಸಿದ್ದರು. ಇತ್ತ ಕಂಪನಿಯವರು ಅಶೋಕ್ ಅವರಿಂದ ಸ್ಕೂಟರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದೀಗ ವಂಚನೆಗೊಳಗಾಗಿದ್ದ ಅಶೋಕ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.