Advertisement

ಸಿಎಂ ಸೂಚನೆ ಮೀರಿ ವಿಧಾನಸೌಧ ಕೊಠಡಿ ನವೀಕರಣ?

11:59 AM Jun 09, 2018 | Team Udayavani |

ಬೆಂಗಳೂರು: “ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಟ್ಟಡ ಅಥವಾ ಕೊಠಡಿಗಳ ನವೀಕರಣ ಮಾಡಬಾರದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದರೂ ಕೆಲವು ಸಂಪುಟ ಸದಸ್ಯರು ಅದಕ್ಕೆ ವ್ಯತಿರಿಕ್ತವಾಗಿ ವಿಧಾನಸೌಧದಲ್ಲಿ ತಮಗೆ ಮಂಜೂರಾದ ಕೊಠಡಿಗಳನ್ನು ನವೀಕರಿಸಲು ಮುಂದಾಗಿದ್ದಾರೆ.

Advertisement

ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದ 25 ಸಚಿವರಿಗೆ ಗುರುವಾರ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ಜೆಡಿಎಸ್‌ ಸಚಿವರಾದ ಎಂ.ಸಿ.ಮನಗೂಳಿ, ವೆಂಕಟರಾವ್‌ ನಾಡಗೌಡ ಮತ್ತು ಸಿ.ಎಸ್‌.ಪುಟ್ಟರಾಜು ಅವರು ತಮಗೆ ಮಂಜೂರಾದ ಕೊಠಡಿ ಪ್ರವೇಶಿಸಿದ್ದಾರೆ. ಕೆಲವರು ಒಳಗೆ ಇದ್ದ ಕಾಗದ ಪತ್ರ ಸೇರಿ ಮತ್ತಿತರೆ ವಸ್ತುಗಳನ್ನು ತೆರವುಗೊಳಿಸಿದ್ದು, ಸ್ವತ್ಛಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಇನ್ನು ಕೆಲವರು ಕೊಠಡಿಯ ಮೇಜು ಸೇರಿ ಪೀಠೊಪಕರಣಗಳನ್ನು ಬದಲಾಯಿಸುವಂತೆ ಇಲಾಖೆಗೆ ಕೋರಿಕೆ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಹೊಸ ಪಕ್ಷ ಅಧಿಕಾರಕ್ಕೆ ಬಂದು ನೂತನ ಸಚಿವರು ವಿಧಾನಸೌಧದ ಕೊಠಡಿ ಪ್ರವೇಶಿಸುವ ಮುನ್ನ ಅವುಗಳನ್ನು ತಮಗೆ ಬೇಕಾದಂತೆ ನವೀಕರಿಸುತ್ತಾರೆ.

ಇದಕ್ಕಾಗಿಯೇ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತದೆ. ಆದರೆ, ಈ ಬಾರಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಇಂತಹ ಕೆಲಸ ಮಾಡದಂತೆ ಸೂಚಿಸಿದ್ದರು. ಈ ಸೂಚನೆಯನ್ನು ಸಚಿವರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸಿದ್ದರಾಮಯ್ಯಗೆ ವಿಧಾನಸೌಧ ಕೊಠಡಿ ಸಂ.125: ಕೆ.ಬಿ.ಕೋಳಿವಾಡ ವಿಧಾನಸಭಾಧ್ಯಕ್ಷರಾಗಿದ್ದ ವೇಳೆ ಲಕ್ಷಾಂತರ ರೂ. ವೆಚ್ಚ ಮಾಡಿ ಹೈಟೆಕ್‌ ಮಾದರಿಯಲ್ಲಿ ನವೀಕರಣಗೊಳಿಸಿದ್ದ ವಿಧಾನಸೌಧದ ಮೊದಲ ಮಹಡಿಯಲ್ಲಿರುವ 125ನೇ ಸಂಖ್ಯೆಯ ಕೊಠಡಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಪಾಲಾಗಿದೆ.

Advertisement

ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರಿಗೆ ಈ ಕೊಠಡಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಂಚಿಕೆ ಮಾಡಿದೆ.  ಇದರಲ್ಲಿ 14-15 ಮಂದಿ ಕುಳಿತು ಚರ್ಚಿಸಲು ಅವಕಾಶವಾಗುವ ದೊಡ್ಡ ಟೇಬಲ್‌ ಇದೆ. ವಿಶ್ರಾಂತಿ ಮತ್ತು ಖಾಸಗಿ ಮಾತುಕತೆಗೆ ಪ್ರತ್ಯೇಕ ಕೊಠಡಿ (ಆ್ಯಂಟಿ ಚೇಂಬರ್‌) ವ್ಯವಸ್ಥೆಯೂ ಇದು.

ನೂತನ ಸರ್ಕಾರದಲ್ಲಿ ಕೆ.ಆರ್‌.ರಮೇಶ್‌ಕುಮಾರ್‌ ಸ್ಪೀಕರ್‌ ಆದ ಬಳಿಕ ಅವರಿಗೆ ಈ ಕೊಠಡಿ ನೀಡಲು ಉದ್ದೇಶಿಸಲಾಗಿತ್ತು. ಆದರೆ, ನನಗೆ ಇಂತಹ ಐಷಾರಾಮಿ ಕೊಠಡಿ ಬೇಡ. ನನಗೆಂದು ಮೀಸಲಿರುವ ಕೊಠಡಿಯಲ್ಲೇ ಇರುತ್ತೇನೆ ಎಂದಿದ್ದರು. ಹೀಗಾಗಿ ಖಾಲಿ ಉಳಿದಿದ್ದ ಈ ಕೊಠಡಿಯನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next