Advertisement

ತತ್‌ಕ್ಷಣ ಪಾಠ ತೆಗೆದು ಹಾಕಿ: ಶರಣ್‌ ಪಂಪ್‌ವೆಲ್‌

10:47 AM Jun 08, 2018 | |

ಅಂಬೇಡ್ಕರ್‌ ವೃತ್ತ : ರಾಜ್ಯ ಸರಕಾರವು 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮುಸ್ಲಿಂ, ಕ್ರೈಸ್ತ ಧರ್ಮಗಳ ಬಗ್ಗೆ ಪಾಠ ರಚಿಸಿ ಹಿಂದೂಗಳ ಮತಾಂತರಕ್ಕೆ ಪರೋಕ್ಷ ಹುನ್ನಾರ ನಡೆಸುತ್ತಿದೆ. ತತ್‌ಕ್ಷಣ ಈ ಪಾಠವನ್ನು ತೆಗೆದು ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಂಚಾಲಕ ಶರಣ್‌ ಪಂಪ್‌ವೆಲ್‌ ಒತ್ತಾಯಿಸಿದ್ದಾರೆ.

Advertisement

9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳ ವಿಚಾರಕ್ಕೆ ಸಂಬಂಧಿಸಿ ಪಠ್ಯ ಪ್ರಕಟಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ನಗರದ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳದ ವತಿಯಿಂದ ಗುರುವಾರ ಜ್ಯೋತಿ ಸರ್ಕಲ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದ ಇತಿಹಾಸ, ಸಾಧಕರು, ವೀರರ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪ್ರಯತ್ನ ಶಾಲೆಗಳಲ್ಲಿ ನಡೆಯಬೇಕು. ವಿಶ್ವಕ್ಕೇ ಮಾರ್ಗದರ್ಶನ ನೀಡಿದ ಭಾರತದಲ್ಲಿ ಧರ್ಮಗಳ ವಿಚಾರಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಪ್ರಯತ್ನ ಒಳ್ಳೆಯದಲ್ಲ. ದೇಶದ ಬಗ್ಗೆ ತಿಳಿಸುವಂತಹ ಪಾಠಗಳನ್ನು ವಿದ್ಯಾರ್ಥಿಗಳು ಕಲಿಯುವಂತಾಗಬೇಕು ಎಂದವರು ಹೇಳಿದರು.

ಮಾತೃ ಮಂಡಳಿಯ ಅಧ್ಯಕ್ಷೆ ಆಶಾ ಜಗದೀಶ್‌ ಮಾತನಾಡಿ, ಚರ್ಚ್‌, ಮಸೀದಿಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು ಎಂದು ಪಠ್ಯದಲ್ಲಿ ಹೇಳಿರುವುದು ಪರೋಕ್ಷವಾಗಿ ಮತಾಂತರಕ್ಕೆ ಹುನ್ನಾರ ನಡೆಸಿದಂತೆ ಎಂದು ಆಪಾದಿಸಿದರು. ಪ್ರತಿಭಟನೆಯಲ್ಲಿ ವಿಹಿಂಪ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್‌, ಪ್ರಮುಖರಾದ ಪ್ರವೀಣ್‌ ಕುತ್ತಾರ್‌, ಪ್ರದೀಪ್‌ ಉಪಸ್ಥಿತರಿದ್ದರು.

ಬೃಹತ್‌ ಹೋರಾಟದ ಎಚ್ಚರಿಕೆ 
ಮಹಮ್ಮದ್‌ ಪೈಗಂಬರ್‌, ಜೀಸಸ್‌ ಬಗ್ಗೆ ಬೋಧನೆಗೆ ನಮ್ಮ ವಿರೋಧವಿಲ್ಲ. ಆದರೆ ವಿದ್ಯಾರ್ಥಿಗಳು ಚರ್ಚ್‌, ಮಸೀದಿಗಳಿಗೆ
ತೆರಳಿ ಪಠ್ಯಕ್ಕೆ ಸಂಬಂಧಿಸಿ ತಯಾರಿ ನಡೆಸಬೇಕೆನ್ನುವುದು ಒಪ್ಪುವಂತ ವಿಚಾರವಲ್ಲ. ತತ್‌ಕ್ಷಣ ಈ ಪಠ್ಯವನ್ನು ತೆಗೆದು ಹಾಕದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶರಣ್‌ ಪಂಪ್‌ವೆಲ್‌ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next