Advertisement

ಅನಧಿಕೃತ ಬಡಾವಣೆಗಳ ತೆರವಿಗೆ ಶೆಟ್ಟರ ಸೂಚನೆ

03:51 PM Jul 07, 2020 | Suhan S |

ಹುಬ್ಬಳ್ಳಿ: ಅವಳಿ ನಗರದ ಅನಧಿಕೃತ ಬಡಾವಣೆಗಳ ತೆರವಿಗೆ ಎಲ್ಲ ಜನಪ್ರತಿನಿಧಿಗಳು ಬೆಂಬಲ ನೀಡಿದ್ದು, ಕಾರ್ಯಾಚರಣೆ ನಿರಂತರ ನಡೆಸುವಂತೆ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ಸಚಿವ ಜಗದೀಶ ಶೆಟ್ಟರ ತಿಳಿಸಿದರು.

Advertisement

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹಿಂದೆ ಕೂಡ ಅನಧಿಕೃತ ಬಡಾವಣೆಗಳ ತೆರವು ಮಾಡುವಂತೆ ತಿಳಿಸಲಾಗಿತ್ತು. ಆದರೆ ಹಿಂದಿನ ಬಹುತೇಕ ಹುಡಾ ಅಧ್ಯಕ್ಷರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೆಲವರು ಆರಂಭಶೂರತ್ವ ತೋರಿಸಿ, ನಂತರ ಕಡೆಗಣಿಸಿದರು. ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಿದರೆ ಮಾತ್ರ ನಗರ ಯೋಜನೆಯನ್ವಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಕಾಂಪ್ರಹೆನ್ಸಿವ್‌ ಡೆವಲಪ್‌ಮೆಂಟ್‌ ಪ್ಲ್ಯಾನ್‌ (ಸಿಡಿಪಿ) ಈಗಾಗಲೇ ಮಾನ್ಯತೆ ಪಡೆದುಕೊಂಡಿದ್ದು, ಇದಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಕ್ರೆಡೈ ನೀಡಿದ ಮನವಿಯನ್ನು ಪರಿಗಣಿಸಿದ್ದು, ಸೂಕ್ತವಾದ ಸಲಹೆಗಳನ್ನು ಸರಕಾರದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದರು.

ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಉದ್ಯಾನಕ್ಕೆ ಮೀಸಲಾದ ಶೇ.10ರಷ್ಟು ಜಾಗವನ್ನು ಒಂದೇ ಕಡೆ ನೀಡುವ ಕುರಿತು ಸೂಚಿಸಲಾಗಿದೆ. ಇದರಿಂದ ಬಡಾವಣೆಗಳಲ್ಲಿ ದೊಡ್ಡ ಹಾಗೂ ವ್ಯವಸ್ಥಿತ ಉದ್ಯಾನ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು. ಕಳೆದ ಹಲವು ವರ್ಷಗಳಿಂದ ಹುಡಾ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿಲ್ಲ. ಜಮೀನು ಸಿಗದಿದ್ದರಿಂದ ಬಡಾವಣೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಕೆಲ ರೈತರು ಹುಡಾಕ್ಕೆ ಜಮೀನು ನೀಡಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು. ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಶೀಘ್ರ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next