Advertisement

ರೆಮಿಡಿಸಿವಿಯರ್‌ ಮಾಫಿಯಾ : ಪೊಲೀಸರಿಂದ 8ಕ್ಕೂ ಅಧಿಕ ಮಂದಿ ಸೆರೆ

10:28 PM Apr 19, 2021 | Team Udayavani |

ಬೆಂಗಳೂರು : ಕೊರೊನಾಗೆ ಪರಿಣಾಮಕಾರಿ ಔಷಧವಾಗಿರುವ “ರೆಮಿಡಿಸಿವಿಯರ್‌’ ಚುಚ್ಚಮದ್ದನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಬೃಹತ್‌ ಮಾಫಿಯಾ ಕರ್ನಾಟಕದಲ್ಲಿ ತಲೆ ಎತ್ತಿದೆ.

Advertisement

ಈ ಸಂಬಂಧ ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 8ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದಂತೆ ಬೇರೆ ಜಿಲ್ಲೆಗಳಲ್ಲಿ ಕೊರೊನಾ ರೋಗಿಗಳು ದಾಖಲಾಗಿರುವ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮಾಹಿತಿ ಪಡೆದು, ಆಸ್ಪತ್ರೆಗಳು, ಅವುಗಳ ಮೆಡಿಕಲ್‌ ಸ್ಟೋರ್‌ಗಳು, ಸಮೀಪದ ಮೆಡಿಕಲ್‌ ಸ್ಟೋರ್‌ಗಳ ಮೇಲೆ ನಿಗಾ ವಹಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಯೋಗದೊಂದಿಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

3,750 – 4,000ರೂ. ನಿಗದಿ
ರಾಜ್ಯ ಸರಕಾರ “ರೆಮಿಡಿಸಿವಿಯರ್‌’ ಔಷಧ ಉತ್ಪಾದಿಸುವ ವಿವಿಧ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, 3,750-4,000 ರೂ. ಬೆಲೆಗೆ ವಿತರಿಸುವಂತೆ ಸೂಚಿಸಿದೆ. ಅದಕ್ಕಿಂತ ಹೆಚ್ಚಿನ ದರ ನಿಗದಿ ಪಡಿಸುವಂತಿಲ್ಲ. ಒಂದು ವೇಳೆ ಹೆಚ್ಚುವರಿ ದರ ವಿಧಿಸಿದರೆ ಅಂತಹ ಕಂಪೆನಿಗಳ ವಿರುದ್ಧ ಕಾನೂನು ಕ್ರಮದ ಜತೆಗೆ ಒಡಂಬಡಿಕೆ ರದ್ದು ಪಡಿಸುವ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ ; ಡಿ.ಕೆ. ಶಿವಕುಮಾರ್

ಬೃಹತ್‌ ಮಾಫಿಯಾ
ಸರ್ಕಾರ ಜತೆಗಿನ ಒಡಂಬಡಿಕೆ ಪ್ರಕಾರ ಕೊರೊನಾ ಸೋಂಕಿತರನ್ನು ದಾಖಲಿಸಿಕೊಂಡು ಆಸ್ಪತ್ರೆಗಳು ರೋಗಿಗಳ ಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವ ರೆಮ್‌ಡೆಸಿವಿಯರ್‌’ ಪೂರೈಸುವಂತೆ ಸಗಟು ವ್ಯಾಪಾರಿಗಳ ಬಳಿ ಬೇಡಿಕೆ ಇಡಬೇಕು. ಈ ವೇಳೆ ಆಸ್ಪತ್ರೆಯೂ ತನ್ನ ವಿಳಾಸದ ಜತೆಗೆ ಕೊರೊನಾ ರೋಗಿಯ ನಂಬರ್‌, ವಾರ್ಡ್‌ ಅನ್ನು ನಮೊದಿಸಿ ಆನ್‌ಲೈನ್‌ ಮೂಲಕ ಬೇಡಿಕೆ ಇಡಬೇಕು. ಅನಂತರ ಸಗಟು ವ್ಯಾಪಾರಿಗಳು ಔಷಧಿ ಸರಬರಾಜು ಮಾಡಬೇಕು. ಅದು ಹೊರತು ಪಡಿಸಿ ಹೆಚ್ಚುವರಿಯಾಗಿ ಪೂರೈಕೆ ಮಾಡುವಂತಿಲ್ಲ. ಬೇರೆಯವರಿಗೂ ಮಾರಾಟ ಮಾಡುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಈ ಮಧ್ಯೆಯೂ ಕೆಲ ಕಂಪನಿಗಳು ಅಕ್ರಮವಾಗಿ ಸಗಟು ವ್ಯಾಪಾರಿಗಳ ಮೂಲಕ ಆಸ್ಪತ್ರೆ ಆಡಳಿತ ಮಂಡಳಿ, ಮೆಡಿಕಲ್‌ ಸ್ಟೋರ್‌ಗಳಿಗೆ ಅಕ್ರಮವಾಗಿ ಔಷಧಿ ಪೂರೈಕೆ ಮಾಡಿ ಅಧಿಕ ಮೊತ್ತಕ್ಕೆ ಮಾರಾಟಕ್ಕೆ ಉತ್ತೇಜನ ನೀಡುತ್ತಿವೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೂಂದೆಡೆ ಕೆಲ ಖಾಸಗಿ ಆಸ್ಪತ್ರೆಗಳು ಹೆಚ್ಚವರಿಯಾಗಿ ರೆಮ್‌ಡೆಸಿವಿಯರ್‌ ಅನ್ನು ಖರೀದಿಸಿ ಸಮೀಪದ ಮೆಡಿಕಲ್‌ ಸ್ಟೋರ್‌ಗೆ ಪೂರೈಕೆ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿಸುವ ಮೂಲಕ ಲಾಭ ಪಡೆದುಕೊಳ್ಳುತ್ತಿರುವ ವಿಚಾರವೂ ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಇದೊಂದು ಬೃಹತ್‌ ಮಾಫಿಯಾ ಆಗಿ ವಿಸ್ತರಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಕೋವಿಡ್ ಎಫೆಕ್ಟ್ : ಯುಪಿಎಸ್‌ಸಿ ನೇಮಕಾತಿ ಸಂದರ್ಶನ ಮುಂದೂಡಿಕೆ

ಮೆಡಿಕಲ್‌ ಸ್ಟೋರ್‌ಗೆ ಅನುಮತಿ ಇಲ್ಲ
ಕೊರೊನಾ ಸೋಂಕಿತರು ದಾಖಲಾದ ಆಸ್ಪತ್ರೆಗಳು ಹೊರತು ಪಡಿಸಿ ಬೇರೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ರೆಮ್‌ಡೆಸಿವಿಯರ್‌’ ಮಾರಾಟಕ್ಕೆ ಅನುಮತಿ ನೀಡಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಅದು ಅಕ್ರಮ. ಆದರೂ ಕೆಲ ಔಷಧಿ ಮಳಿಗೆಯಲ್ಲಿ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರೆಮ್‌ಡೆಸಿವಿಯರ್‌’ ಅಕ್ರಮ ಮಾರಾಟ ಸಂಬಂಧ ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ರಕರಣಗಳು ದಾಖಲಾಗಿದ್ದು, ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಬೇರೆ ಜಿಲ್ಲೆಗಳಲ್ಲೂ ನಿರಂತರವಾಗಿ ಕಾರ್ಯಾಚರಣೆ ಮುಂದುವರಿದಿದೆ.
– ಪ್ರತಾಪ್‌ ರೆಡ್ಡಿ, ರಾಜ್ಯ ಕಾನೂನು ಸುವ್ಯವಸ್ಥೆ, ಎಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next