ಕಾಪು: ಇತ್ತೀಚೆಗೆ ಅಗಲಿದ ಹಿರಿಯ ಭಾಷಾ ವಿಜ್ಞಾನಿ, ಜಾನಪದ ವಿದ್ವಾಂಸ, ಹಿರಿಯ ಸಂಶೋಧಕರಾದ ಡಾ. ಯು. ಪಿ. ಉಪಾಧ್ಯಾಯ ಅವರ ಸಾರ್ವಜನಿಕ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.4 ರಂದು ನಡೆಯಿತು.
ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ಮಾತನಾಡಿ, ಡಾ. ಯು.ಪಿ. ಉಪಾಧ್ಯಾಯ ಅವರ ಬದುಕು ಸರ್ವರಿಗೂ ಅನುಕರಣೀ ಯವಾಗುವಂತದ್ದಾಗಿದೆ. ವೇದಾಧ್ಯಯನದ ಮೂಲಕ ಪ್ರಾರಂಭಗೊಂಡ ಅವರ ಜೀವನವು ಸಾಹಿತ್ಯ, ಜನಪದ, ಭಾಷೆ, ಸಂಸ್ಕೃತಿ, ಸಂಸ್ಕಾರಗಳ ಪ್ರತಿರೂಪವಾಗಿತ್ತು. ತುಳು ನಿಘಂಟುಗಾರರರಾಗಿ ಮಹೋಪಾಧ್ಯಾಯರಾಗಿ ಗುರುತಿಸಿಕೊಂಡಿದ್ದ ಅವರು ಅಸಂಖ್ಯಾತ ಶಿಷ್ಯಂದಿರ ನೆಚ್ಚಿನ ಗುರುಗಳಾಗಿದ್ದು ತಾವು ನಡೆಸಿದ ಅಧ್ಯಯನದ ಜೀವನವನ್ನು ತಲೆ ತಲಾಂತರದವರೆಗೂ ಉಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಕಾರಣದಿಂದ ಅವರು ಎಲ್ಲರಿಗೂ ಸದಾ ಪ್ರಾತ:ಸ್ಮರಣೀಯರು ಎಂದರು.
ನುಡಿನಮನ ಸಲ್ಲಿಸಿದ ಲೇಖಕಿ ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಉಪಾಧ್ಯಾಯ ದಂಪತಿಯ ಸರಳ ಜೀವನ ಶೈಲಿ ಎಲ್ಲರಿಗೂ ಸದಾ ಅನುಕರಣೀಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಜೊತೆಗೂಡಿ ಕೆಲಸ ಮಾಡಿದ ಅವರು ಭಾಷೆ, ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರದ ಕೆಲಸವನ್ನು ತನ್ನ ಸ್ವಂತ ಕೆಲಸವೆಂಬಂತೆಯೇ ಅನುಭವಿಸುತ್ತಿದ್ದರು. ಬದುಕಲು ಬೇಕು ಶಿಕ್ಷಣ, ಬಾಳಲು ಬೇಕು ಸಂಸ್ಕೃತಿ ಎಂಬ ದ.ರಾ. ಬೇಂದ್ರೆಯವರ ಮಾತಿಗೆ ಅನ್ವರ್ಥವಾಗುವಂತೆ ಬದುಕಿದ ಉಪಾಧ್ಯಾಯ ಅವರು ಕೇವಲ ಹೊಟ್ಟೆಪಾಡಿಗಾಗಿ ಸಾಹಿತ್ಯ, ಜನಪದ, ಸಂಸ್ಕೃತಿ ಮತ್ತು ಭಾಷಾ ಪ್ರೀತಿಯನ್ನು ತೋರಿದ್ದಲ್ಲ. ಬದಲಾಗಿ ಅವುಗಳನ್ನು ಸಮಾಜದ ಮುಂದೆ ತೆರೆದಿಡಬೇಕು, ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕೆಂಬ ಕಲ್ಪನೆಯೊಂದಿಗೆ ಅವರು ಕ್ಷೇತ್ರ ಕಾರ್ಯ ನಡೆಸಿದ್ದರು ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸರಳ ವ್ಯಕ್ತಿತ್ವದ ಉಪಾಧ್ಯಾಯ ದಂಪತಿ ಅವರು ತುಳುನಾಡಿನ ನಿಜಾರ್ಥದ ಸಂಪತ್ತು. ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದ ಅವರು ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕವಾಗಿ ತುಳು ನಿಘಂಟುಗಾರರಾಗಿ ಇಡೀ ವಿಶ್ವಕ್ಕೆ ತುಳುವನ್ನು ಪರಿಚಯಿಸಿಕೊಟ್ಟ ಪ್ರಸಿದ್ಧಿಗೆ ಪಾತ್ರರಾಗಿದ್ದಾರೆ. ಅವರ ಅಕಾಲಿಕ ಅಗಲುವಿಕೆ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ನಿರಂತರ ಅಧ್ಯಯನಶೀಲರಾಗಿದ್ದ ಡಾ. ಯು. ಪಿ ಉಪಾಧ್ಯಾಯ ಅವರ ನಿಧನ ಕರಾವಳಿಗೆ ಬಲು ದೊಡ್ಡ ನಷ್ಟವನ್ನುಂಟು ಮಾಡಿದೆ. ಕೈಯ್ಯಾಡಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯ ತುತ್ತತುದಿಯನ್ನು ಏರಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಸಾಧಕರ ನೆನಪನ್ನು ಮುಂದಿನ ಪೀಳಿಗೆಯವರೆಗೂ ಗುರುತಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಲೀಲಾಧರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಲೀಲಾಧರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕರಂದಾಡಿ ಕಾರ್ಯಕ್ರಮ ನಿರೂಪಿಸಿದರು. ನಾಗಭೂಷಣ್ ರಾವ್ ವಂದಿಸಿದರು.