Advertisement

2011 Cricket World Cup: ಧೋನಿ ಪಡೆಯ ದಿಗ್ವಿಜಯ; ಭಾರತಕ್ಕೆ ಒಲಿಯಿತು 2ನೇ ವಿಶ್ವಕಪ್‌

02:42 PM Oct 03, 2023 | Team Udayavani |

1983ರಲ್ಲಿ ವಿಶ್ವಕಪ್‌ ಎತ್ತಿ ಅಚ್ಚರಿ ಮೂಡಿಸಿದ ಬಳಿಕ ಪ್ರತಿಯೊಂದು ಪಂದ್ಯಾವಳಿಯಲ್ಲೂ ಭಾರತವನ್ನು ಇದೇ ದೃಷ್ಟಿಯಿಂದ ನೋಡುತ್ತ ಬರಲಾಗುತ್ತಿತ್ತು. ಪ್ರತೀ ಸಲವೂ ಭಾರತದ ಮೇಲೆ ಕಪ್‌ ಗೆಲುವಿನ ನಿರೀಕ್ಷೆ ಮತ್ತು ಒತ್ತಡ ಹೇರಲ್ಪಡುತ್ತಿತ್ತು. ತವರಲ್ಲಿ ಎರಡು ಪಂದ್ಯಾವಳಿ ನಡೆದಾಗಲೂ ನಮ್ಮವರಿಗೆ ಚಾಂಪಿಯನ್‌ ಎನಿಸಲು ಸಾಧ್ಯವಾಗಲಿಲ್ಲ. ಆದರೆ 3ನೇ ಆತಿಥ್ಯದ ವೇಳೆ ಮಹೇಂದ್ರ ಸಿಂಗ್‌ ಧೋನಿ ಪಡೆ ದೇಶದ ನವಪೀಳಿಗೆಯ ಕ್ರಿಕೆಟ್‌ ಅಭಿಮಾನಿಗಳ ಆಶೋತ್ತರವನ್ನು ಈಡೇರಿಸಲು ಯಶಸ್ವಿಯಾಯಿತು.

Advertisement

ಸಚಿನ್‌ಗೆ ಉಡುಗೊರೆ: ಕಪಿಲ್‌ ಪಡೆ ವಿಶ್ವಕಪ್‌ ಗೆದ್ದು ಬರೋಬ್ಬರಿ 28 ವರ್ಷಗಳ ಬಳಿಕ ಭಾರತ 2ನೇ ಸಲ ಜಾಗತಿಕ “ಕ್ರಿಕೆಟ್‌ ಕಿಂಗ್‌’ ಎನಿಸಿ ಮೆರೆದಾಡಿತು. ತವರಿನಂಗಳದಲ್ಲಿ ವಿಶ್ವಕಪ್‌ ಎತ್ತಿದ ಜಗತ್ತಿನ ಪ್ರಪ್ರಥಮ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಅಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಧೋನಿ ಪಡೆ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಕಪ್‌ ಎತ್ತಿತು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವಕಪ್‌ ಟ್ರೋಫಿಯ ಬರಗಾಲವನ್ನು ನೀಗಿಸಿತು. ಇದು ತೆಂಡುಲ್ಕರ್‌ ಅವರ ಕೊನೆಯ ವಿಶ್ವಕಪ್‌ ಕೂಡ ಆಗಿದ್ದರಿಂದ ದೊಡ್ಡದೊಂದು ಕೊರತೆ ಅವರನ್ನು ಕಾಡುತ್ತಿತ್ತು. ಧೋನಿ ಪಡೆ ಸಚಿನ್‌ಗೋಸ್ಕರ ಮಹೋನ್ನತ ಸಾಧನೆಗೈದು ಕೃತಾರ್ಥವಾಯಿತು.

ಮಾಹೇಲ ಜಯವರ್ಧನೆ ಅವರ ಅಜೇಯ ಶತಕ (103) ಸಾಹಸದಿಂದ ಶ್ರೀಲಂಕಾ 6 ವಿಕೆಟಿಗೆ 274 ರನ್‌ ಬಾರಿಸಿ ಸವಾಲೊಡ್ಡಿತು. ಭಾರತ 48.2 ಓವರ್‌ಗಳಲ್ಲಿ 4 ವಿಕೆಟಿಗೆ 277 ರನ್ನುಗಳ ಜವಾಬು ನೀಡಿ ಇತಿಹಾಸ ನಿರ್ಮಿಸಿತು. ನುವಾನ್‌ ಕುಲಶೇಖರ ಎಸೆತವನ್ನು ಸ್ವತಃ ಕ್ಯಾಪ್ಟನ್‌ ಧೋನಿ ಲಾಂಗ್‌ಆನ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಭಾರತದ ಜಯಭೇರಿ ಮೊಳಗಿಸಿದ್ದು ವಿಶೇಷವಾಗಿತ್ತು. ಧೋನಿ ಕೊಡುಗೆ ಅಜೇಯ 91 ರನ್‌.

ಭಾರತದ ಚೇಸಿಂಗ್‌ಗೆ ಬುನಾದಿ ನಿರ್ಮಿಸಿದ ಗೌತಮ್‌ ಗಂಭೀರ್‌ 97 ರನ್‌ ಕಾಣಿಕೆ ಸಲ್ಲಿಸಿದ್ದನ್ನು ಮರೆಯುವಂತಿಲ್ಲ. ಭಾರತದೊಂದಿಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲೂ ಪಂದ್ಯಗಳು ನಡೆದವು. ಆದರೆ ಭದ್ರತಾ ಭೀತಿಯಿದ್ದುದರಿಂದ ಪಾಕಿಸ್ಥಾನ ಸಹ ಆತಿಥ್ಯದ ಅವಕಾಶವನ್ನು ಕಳೆದುಕೊಂಡಿತು.

14 ತಂಡಗಳ ಮೇಲಾಟ: ಇದು 14 ತಂಡಗಳ ನಡುವಿನ ಕೂಟವಾಗಿತ್ತು. 7 ತಂಡಗಳ 2 ಗುಂಪುಗಳನ್ನು ರಚಿಸಲಾಗಿತ್ತು. ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿದ್ದ 10 ತಂಡಗಳು ನೇರ ಪ್ರವೇಶ ಪಡೆದರೆ, ಉಳಿದ 4 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆರಿಸಲಾಯಿತು. ಈ ತಂಡಗಳೆಂದರೆ ಚಾಂಪಿಯನ್‌ ಐರ್ಲೆಂಡ್‌, ರನ್ನರ್ ಅಪ್‌ ಕೆನಡಾ, 3ನೇ ಹಾಗೂ 4ನೇ ಸ್ಥಾನ ಸಂಪಾದಿಸಿದ ನೆದರ್ಲೆಂಡ್ಸ್‌ ಮತ್ತು ಕೀನ್ಯಾ. ಪ್ರತೀ ವಿಭಾಗದ ಅಗ್ರ 4 ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಿದವು. “ಎ’ ವಿಭಾಗದಿಂದ ಪಾಕಿಸ್ಥಾನ, ಶ್ರೀಲಂಕಾ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌; “ಬಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಮುನ್ನಡೆದವು.

Advertisement

ಹ್ಯಾಟ್ರಿಕ್‌ ಕಪ್‌ ಎತ್ತಿ ಬೀಗುತ್ತಿದ್ದ ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತ ಸೆಮಿಫೈನಲ್‌ಗೆ ನೆಗೆಯಿತು. ಇಲ್ಲಿ ಧೋನಿ ಬಳಗಕ್ಕೆ ಎದುರಾದ ತಂಡ ಪಾಕಿಸ್ಥಾನ. ಮೊಹಾಲಿ ಮುಖಾಮುಖೀಯಲ್ಲಿ ಪಾಕ್‌ ಪಡೆಯನ್ನು 29 ರನ್ನುಗಳಿಂದ ಉರುಳಿಸಿದ ಭಾರತ ಫೈನಲ್‌ಗೆ ನೆಗೆಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ 5 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಸೋಲಿನೇಟು ನೀಡಿತು.

ಇತ್ತಂಡಗಳಿಗೂ ಇದು 3ನೇ ಫೈನಲ್‌ ಆಗಿತ್ತು. ಶ್ರೀಲಂಕಾ ಸತತ 2ನೇ ಪ್ರಶಸ್ತಿ ಸಮರದಲ್ಲಿ ಆಡಲಿಳಿದಿತ್ತು. ಆದರೆ ಮತ್ತೆ ಅದೃಷ್ಟ ಕೈಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next