Advertisement

ಮರೆಯಾದ ದಿಗ್ಗಜ; ನೆಬ್ಬೂರರ ವಿಶಿಷ್ಟ ಶೈಲಿಯ ಭಾಗವತಿಕೆ ನೆನಪು

11:40 AM May 28, 2019 | ವಿಷ್ಣುದಾಸ್ ಪಾಟೀಲ್ |

ಯಕ್ಷರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸಾಟಿಯಿಲ್ಲದ ಕಲಾವಿದರು ಒಬ್ಬೋಬ್ಬರಾಗಿಯೇ ಮರೆಯಾಗುತ್ತಾ ಸಾಗುತ್ತಿದ್ದಾರೆ.  ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಭಾಗವತ ನಾರಾಯಣ ಹೆಗಡೆ ಅವರು ಕಲಾ ಕ್ಷೇತ್ರಕ್ಕೆ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಕೊಡುಗೆಗಳನ್ನು ನೀಡಿದವರು.

Advertisement

ಭಾಗವತಿಕೆಯಲ್ಲಿ ಕುಂಜಾಲು ಶೈಲಿ, ಉಪ್ಪೂರರ ಮಾರ್ವಿ ಶೈಲಿ ಪ್ರಸಿದ್ಧವಾದಂತೆ ನಾರಾಯಣ ಹೆಗಡೆಯವರ ನೆಬ್ಬೂರೂರ ಶೈಲಿ ಎನ್ನುವುದು ಯಕ್ಷರಂಗದಲ್ಲಿ ಜನಪ್ರಿಯವಾಗಿತ್ತು.

ಬಡಗುತಿಟ್ಟಿನ ಓರ್ವ ಪ್ರಸಿದ್ಧ ಭಾಗವತನಾಗಿ ದಿಗ್ಗಜ ಕಲಾವಿದರನ್ನುಕುಣಿಸಿ ಮೆರೆಸಿದ್ದ ನೆಬ್ಬೂರು ಭಾಗವತರು ಪರಂಪರೆಯ ಚೌಕಟ್ಟಿಗೆ ಹಾನಿ ಮಾಡಿದವರಲ್ಲ ಎಂದು ಹಿರಿಯ ಯಕ್ಷಗಾನ ವಿಮರ್ಶಕರು ಹೇಳುತ್ತಾರೆ.

ಎಂದಿಗೂ ಪ್ರಚಾರ ಪ್ರಿಯರಾಗಿರದ ಅವರು ತನ್ನ ಕಸುಬಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡವರು. ಮೊದಲು ರಂಗದಲ್ಲಿರುವ ಸಹ ಕಲಾವಿದರ ಅಭಿಮಾನ ಪಡೆಯಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಪರಂಪರೆಯಿಂದ ಬಂದ ಪೌರಾಣಿಕ ಪ್ರಸಂಗಗಳಿಗೆ ಜೀವ ತುಂಬುತ್ತಿದ್ದ ನೆಬ್ಬೂರು ಭಾಗವತರು ವಿದೇಶಗಳಲ್ಲಿಯೂ ತನ್ನ ಕಂಠಸಿರಿಯನ್ನು ಮೊಳಗಿಸಿದ್ದಾರೆ.

Advertisement

ಕೆರೆಮನೆ ಮೇಳದ ಭಾಗವತರಾಗಿ ಶಿವಾನಂದ ಹೆಗಡೆ ಅವರ ತಂಡದೊಂದಿಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಪ್ರವಾಸಗೈದು  ಶೋತ್ರುಗಳಿಗೆ ತನ್ನ ಗಾನ ಸಿರಿ ಉಣ ಬಡಿಸಿದವರು.

ದಿಗ್ಗಜರ ಒಡನಾಡಿಯಾಗಿದ್ದ ಅವರು  ಕೆರೆಮನೆ ಶಂಭು ಹೆಗಡೆ ಅವರ ಆಪ್ತರಾಗಿದ್ದರು. ರಂಗದಲ್ಲೇ ಮರೆಯಾದ ಶಂಭು ಹೆಗಡೆ ಅವರಿಗೆ ಕೊನೆಯ ಕ್ಷಣದಲ್ಲಿ ಭಾಗವತರಾಗಿ ಕೆಲಸ ಮಾಡಿದ್ದರು. ದಿವಂಗತ ಪದ್ಮಶ್ರಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೊಂದಿಗೆ ಯಾವುದೋ ಕಾರಣಕ್ಕಾಗಿ ಸ್ವಲ್ಪ ದೂರಾಗಿದ್ದ ಅವರು ಬುದುಕಿನ ಇಳಿ ವಯಸ್ಸಿನಲ್ಲಿ ವರ್ಗಾಸರದಲ್ಲಿ  ಮತ್ತೆ ಒಂದಾಗುವ ಮೂಲಕ ಆದರ್ಶ ಮೆರೆದಿದ್ದರು.

ಸಾಧನೆಗೆ ತಕ್ಕ ಎನ್ನುವ ಹಾಗೆ ರಾಜ್ಯೋತ್ಸವ ಪ್ರಶಸ್ತಿ , ಶೇಣಿ ಗೋಪಾಲಕೃಷ್ಣ ಭಟ್‌ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆಪ್ರಶಸ್ತಿ, ಜಾನಪದ ಆಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳು ನೆಬ್ಬೂರರ ಯೋಗ್ಯತೆಗೆ ಸರಿಯಾಗಿ ಸಂದಿವೆ.

ನಾಣಿ ಎಂಬ ಹೆಸರನ್ನು ಭಾಗವತರಿಗೆ ಹೆಚ್ಚಿನವರು ಪ್ರೀತಿಯಿಂದ ಕರೆಯುತ್ತಿದ್ದರು. ಕಲಾ ಬದುಕನ್ನು ಖುಷಿಯಿಂದ ಮುನ್ನಡೆಸಿದ್ದ ಅವರು  ಯಕ್ಷರಂಗದಲ್ಲಿ ಶಾಶ್ವತವಾಗಿ  ನೆನಪಾಗಿ ಉಳಿಯಲಿದ್ದಾರೆ. ಅವರ ನೆಬ್ಬೂರಿನ ನಿನಾದ ಎಂಬ ಆತ್ಮಕಥನವನ್ನುಡಾ.ಜಿ.ಎಸ್‌.ಭಟ್‌ ಅವರು ಬರೆದಿದ್ದಾರೆ.  ಅವರ ಅನೇಕ ವಿಡಿಯೋಗಳು, ಕ್ಯಾಸೆಟ್‌ಗಳು ಲಭ್ಯವಿದ್ದುನೆನಪನ್ನು ಉಳಿಸಲು ನಮ್ಮೊಂದಿಗಿವೆ.  ಎಲ್ಲದಕ್ಕೂ ಮಿಗಿಲಾಗಿ ಉಡುಪಿಯ  ಯಕ್ಷಗಾನ ಕಲಾರಂಗ ಸಂಸ್ಥೆ ನೆಬ್ಬೂರರ ವಿಶಿಷ್ಟ ಶೈಲಿಯ ಭಾಗವತಿಕೆ ಯನ್ನು ಚಿತ್ರೀಕರಣ ಮಾಡಿ ದಾಖಲಿಕರಣ ಮಾಡಿದೆ.

ಹಿರಿಯ , ಕಿರಿಯರೆನ್ನದೆ ಅನೇಕ ಕಲಾವಿದರೊಂದಿಗೆ ರಂಗವನ್ನು ಬೆಳಗಿದ ನೆಬ್ಬೂರು ಭಾಗವತರಮರೆಯಾಗಿದ್ದು ಯಕ್ಷಗಾನ ರಂಗದ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ. ಅವರ ರಂಗದಲ್ಲಿನ ವಿಶಿಷ್ಟತೆ , ಪರಂಪರೆಯ ಚೌಕಟ್ಟು ಯುವ ಕಲಾವಿದರ ಮೂಲಕ ಮುಂದುವರಿಯಲಿ ಎನ್ನುವುದು ಆಶಯ.

Advertisement

Udayavani is now on Telegram. Click here to join our channel and stay updated with the latest news.

Next