Advertisement

ಸರಿಗಮಪ ವೇದಿಕೆಯಲ್ಲಿ ಶಾಲಾ ನೆನಪು

02:42 PM Apr 15, 2019 | Lakshmi GovindaRaju |

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟಲ್‌ ಚಾಂಪ್ಸ್‌ ಸೀಸನ್‌ – 16 ಈಗ ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಹೊಸ ರೂಪದೊಂದಿಗೆ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸಂಗೀತದ ಹೊಸ ಅಲೆಗಳು ಮತ್ತೂಮ್ಮೆ ಕರ್ನಾಟಕದ ಸಂಗೀತ ಪ್ರೇಕ್ಷಕರನ್ನು ತಮ್ಮ ಬಾಲ್ಯಕ್ಕೆ, ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುತ್ತಿದೆ.

Advertisement

ಈ ಹಿಂದಿನ ಸಂಚಿಕೆಗಳಲ್ಲಿ ಸ್ಪರ್ಧಿ ರುಬಿನಾ ಹಾಡಿದ ಸರ್ಕಾರಿ ಶಾಲೆಯ ಹಾಡು ಎಲ್ಲಾ ಕಡೆ ಸಾಕಷ್ಟು ವೈರಲ್‌ ಆಗಿತ್ತು. ನಟ ಪುನೀತ್‌ ರಾಜಕುಮಾರ್‌ ಕೂಡ ರುಬೀನಾಳನ್ನು ಮನೆಗೆ ಕರೆದು, ಅವಳ ಜೊತೆಯಲ್ಲಿ ವೀಡಿಯೋ ನೋಡಿ ಖುಷಿ ಪಟ್ಟಿದ್ದರು. ಆಗ ಸರಿಗಮಪ ತೀರ್ಪುಗಾರರು ಆಸೆಪಟ್ಟಂತೆ, ಈ ವಾರ ಸರಿಗಮಪ ವೇದಿಕೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ದಿನಾಚರಣೆ ಅದ್ಧೂರಿಯಾಗಿ ನಡೆಯುತ್ತಿದೆ.

ಇನ್ನು ಈ ಶಾಲಾ ದಿನಾಚರಣೆಯ ಬಹುದೊಡ್ಡ ವಿಶೇಷತೆ ಎಂದರೆ, ಕಾರ್ಯಕ್ರಮದಲ್ಲಿ ಹಾಡುವ ಮಕ್ಕಳ ಜೊತೆಗೆ ನಿರೂಪಕಿ ಅನುಶ್ರೀ, ತೀರ್ಪುಗಾರರಾದ ವಿಜಯ ಪ್ರಕಾಶ್‌, ರಾಜೇಶ್‌ ಕೃಷ್ಣನ್‌ ಹಾಗೂ ಅರ್ಜುನ್‌ ಜನ್ಯ ಮತ್ತೆ ತಮ್ಮ ಸ್ಕೂಲ್‌ ಯುನಿಫಾರ್ಮ್ ಧರಿಸಿ ಮಕ್ಕಳಾಗಿ ವೇದಿಕೆಯನ್ನು ಅಲಂಕರಿಸುತ್ತಿದ್ದಾರೆ. ಇವರೆಲ್ಲರ ಮುಖ್ಯೋಪಾಧ್ಯಾಯರಾಗಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ವೇದಿಕೆಯಲ್ಲಿ ಇರಲಿದ್ದಾರೆ.

ಈ ಶಾಲಾ ದಿನಾಚರಣೆಯ ವಿಶೇಷ ಸಂಚಿಕೆಯಲ್ಲಿ ರಾಜ್ಯದ ವಿವಿಧ ಭಾಗಗಳ ಏಳು ಮಾದರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಕಾಡಶೆಟ್ಟಿಹಳ್ಳಿ, ಶಿವಮೊಗ್ಗ ಜಿಲ್ಲೆಯ ನಾಲೂರು, ದಾವಣಗೆರೆ ಜಿಲ್ಲೆಯ ಆನಗೋಡು, ಚಾಮರಾಜನಗರ ಜಿಲ್ಲೆಯ ಹೊಂಗಹಳ್ಳಿ, ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ, ಹಾವೇರಿ ಜಿಲ್ಲೆ ಮೇವುಂಡಿ, ರಾಯಚೂರು ಜಿಲ್ಲೆ ಸೋಮನಮರಡಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರಿಗಮಪ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.

ಯುನಿಫಾರ್ಮ್ನಲ್ಲಿ ಪುಟಾಣಿಗಳು ಕನ್ನಡ ಚಂದನವನದ ಮಕ್ಕಳ ಗೀತೆಗಳನ್ನು ಹಾಡುತ್ತಿದ್ದರೆ, ತೀರ್ಪುಗಾರರು ಕೂಡ ಅವರ ವಿಶೇಷ ಯುನಿಫಾರ್ಮ್ನಲ್ಲಿ ಮನರಂಜನೆ ನೀಡಲಿದ್ದಾರೆ. ಅಂದಹಾಗೆ, ನಿನ್ನೆ ಆರಂಭವಾಗಿರುವ ಈ ಸಂಚಿಕೆ ಇಂದು ರಾತ್ರಿ 8ರಿಂದ ಮತ್ತೆ ಜೀ ವಾಹಿನಿಯಲ್ಲಿ ಮುಂದುವರೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next