Advertisement
ಬೆಕ್ಕಿನಮರಿ ನೋಡಿದ ಕ್ಷಣವೇ ಅಪ್ಪ ಅಮ್ಮನ ಮುಖದಲ್ಲಿ ಮಂದಹಾಸ. “ಎಲ್ಲಿ ಸಿಕ್ಕಿತು’ ಎಂದು ಅಪ್ಪ ಕೇಳಿದಾಗ, ರಸ್ತೆಯಲ್ಲಿ ಸಿಕ್ಕಿದ ವಿಚಾರ ತಿಳಿಸಿದೆ. “ನಿಮ್ಮಗೆ ಇಷ್ಟವಿಲ್ಲ ಎಂದರೇ ಬಿಟ್ಟು ಬರುವೆ’ ಎಂದಾಗ ಅಪ್ಪ “ಬೆಕ್ಕಿನಮರಿಯನ್ನು ಬಿಟ್ಟು ಬರುವುದು ಬೇಡ ನಾವೇ ಸಾಕೋಣ’ ಎಂದರು.ಆಗ ನನ್ನ ಸಂತೋಷಕ್ಕೆ ಪರಿವೇ ಇಲ್ಲದಂತೆ ಮನಸ್ಸಿನಲ್ಲಿ ಆನಂದವೋ ಆನಂದ. ಎಲ್ಲರ ಮೊಗದಲ್ಲಿ ಸಂತೋಷ ತರಿಸಿದ ಬೆಕ್ಕಿನಮರಿಗೆ “ಖುಷಿ’ ಎಂದು ನಾಮಕರಣ ಮಾಡಿದೆವು. ಮನೆಸದಸ್ಯರಲ್ಲಿ ಖುಷಿಯೂ ಒಒºಳಾದಳು. ಅವಳ ಕೊರಳಿಗೆ ಗಂಟೆಯನ್ನು ಕಟ್ಟಿ ಓಡಾಡುವುದನ್ನು ನೋಡುತ್ತ ದಿನ ಕಳೆಯುತ್ತಿದ್ದೆವು.
Related Articles
Advertisement
ಹೀಗಿರುವಾಗಲೇ ಅನಿರೀಕ್ಷಿತವಾಗಿ “ಖುಷಿ’ಯನ್ನು ಬಿಟ್ಟು ಎರಡು ದಿನಗಳು ಕಾಲೇಜಿನಿಂದ ಪ್ರವಾಸಕ್ಕೆಂದು ಹೋಗುವ ಸಂದರ್ಭ ಒದಗಿ ಬಂತು. “ಖುಷಿಯನ್ನು ಬಿಟ್ಟು ಹೋಗುವುದಿಲ್ಲ’ ಎಂದು ಹೇಳಿದೆ, ಅಮ್ಮ “ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ’ ಎಂದು ಧೈರ್ಯ ತುಂಬಿ ಕಳುಹಿಸಿಬಿಟ್ಟರು. “ಸರಿ’ ಎಂದು ಖುಷಿಯನ್ನು ಮುದ್ದಾಡಿ ಹೊರಟೆ. ಅದೇ ಕೊನೆಯ ಭೇಟಿ. ಅವಳು ಇನ್ನು ಜೊತೆ ಇರುವುದಿಲ್ಲ ಎಂಬ ಕಲ್ಪನೆ ಕೂಡ ಇರಲಿಲ್ಲ. ಅಂದು ಖುಷಿ ಮನೆಬಿಟ್ಟು ನಡೆದವಳು ಮತ್ತೆ ಮರಳಿ ಬರಲೇ ಇಲ್ಲ.
ನನ್ನ ಬಿಟ್ಟು “ಖುಷಿ’ ಹೋಗಿದ್ದಾಳೆ ಎಂಬ ಯಾವುದೇ ಅರಿವು ಇಲ್ಲದೆ ಮನೆಗೆ ಬಂದೆ. ಬಾಗಿಲ ಬಳಿಗೆ ಹುಡುಕಿ ಕೊಂಡು ಓಡಿಬಂದು ನೋಡುತ್ತಿದ್ದ “ಖುಷಿ’ ಬರಲೇ ಇಲ್ಲ. ಮಲಗಿಕೊಂಡಿರಬೇಕು ಎಂದು ನಾನೇ ಹುಡುಕತೊಡಗಿದೆ. ಎಷ್ಟೇ ಹುಡುಕಿದರೂ “ಖುಷಿ’ ಕಣ್ಣಿಗೆ ಕಾಣಲೇ ಇಲ್ಲ. ಯಾವ ಅನುಬಂಧವೋ ಗೊತ್ತಿಲ್ಲ. “ಖುಷಿ’ ಎಂಬ ಪುಟ್ಟ ಜೀವಿ ನಮ್ಮ ಬದುಕಿನೊಳಗೆ ಬಂದು, ನಮ್ಮ ಬದುಕಿನ ಒಂದು ಭಾಗವೇ ಆಗಿ, ನಮ್ಮನ್ನೆಲ್ಲ ಖುಷಿಯಾಗಿರಿಸಿ ಇದ್ದಕ್ಕಿದ್ದಂತೆಯೇ ಎದ್ದು ಹೋಗಿದೆ. ಅದು ಪ್ರಾಣಿಯೇ ಆದರೂ ಅದಕ್ಕೂ ಒಂದು ಜೀವಂತಿಕೆ ಇದ್ದೇ ಇದೆಯಲ್ಲ ! ಮನಸ್ಸು ಎಂಬುದು ಪ್ರಾಣಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ, ಅದು “ಖುಷಿ’ ನಮ್ಮೊಂದಿಗೆ ಇದ್ದ ದಿನಗಳನ್ನು ನೆನಪಿಸಿಕೊಂಡರೆ, ಪ್ರಾಣಿಗೂ ಸ್ಪಂದಿಸುವ ಗುಣವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಮನೆಯಲ್ಲಿ ಅವಳ ಪೋಟೋವನ್ನು ನೋಡಿದಾಗ ಮತ್ತೆ “ಖುಷಿ’ಯ ಚಿತ್ರ ಕಣ್ಣ ಮುಂದೆ ಮೂಡಲಾರಂಭಿಸುತ್ತದೆ. ಎಲ್ಲಿ ಹೋದರೂ ಅಡ್ಡಿಯಿಲ್ಲ ಖುಷಿ, ಅಲ್ಲಿ ಸುಖವಾಗಿರು ಎಂದಷ್ಟೇ ಹಾರೈಸುವೆ.– ಸುಶ್ಮಿತಾಗೌಡ
ದ್ವಿತೀಯ ಎಮ್‌ಸಿಜೆ,
ಎಸ್.ಡಿ.ಎಂ ಕಾಲೇಜು, ಉಜಿರೆ.