Advertisement
ಇಂಥ ಸಿಡಿಲಮರಿ ಅರುಣ್‌ನ ತಂದೆಯ ಹೆಸರು ಎಂ. ಎಲ್. ಖೇತರ್‌ಪಾಲ್. ಇವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿ ಯರ್ ಆಗಿದ್ದವರು. ಅವರಾಗಲಿ, ಅವರ ಪತ್ನಿ ಮಹೇಶ್ವರಿ ಯವರಗಲಿ ಯಾವ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳಲಿಲ್ಲ. ಬದಲಾಗಿ- ಅರುಣ್‌ನಂಥ ಧೀರ ಮಗನನ್ನು ಪಡೆದೆವಲ್ಲ; ನಾವು ಅದೃಷ್ಟವಂತರು’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು.
Related Articles
Advertisement
ಇಷ್ಟಾದರೂ ಎಲ್ಲೋ ಏನೋ ತಾಳ ತಪ್ಪಿದೆ ಎಂದು ಬ್ರಿಗೇಡಿಯರ್ ಖೇತರ್‌ಪಾಲ್‌ಗೆ ಅನಿಸತೊಡಗಿತ್ತು. ಮಹಮ್ಮದ್ ನಾಸಿರ್ ಮತ್ತು ಅವರ ಕುಟುಂಬದವರು ಮನಸ್ಸು ಬಿಚ್ಚಿ ಮಾತಾಡುತ್ತಿದ್ದುದು ನಿಜ. ಆದರೆ ಖೇತರ್‌ಪಾಲ್‌ರಿಗೆ ಮುಖ ಕೊಟ್ಟು ಮಾತಾಡಲು ಮನೆ ಮಂದಿಯೆಲ್ಲ ಹಿಂಜರಿಯುತ್ತಿದ್ದರು. ಅವರ ನಡೆನುಡಿಯಲ್ಲಿ ಕಪಟವಿರಲಿಲ್ಲ, ಹಾಗೆಯೇ ಸಹಜತೆ ಇದ್ದಂತೆಯೂ ಕಾಣಲಿಲ್ಲ.
ಖೇತರ್‌ಪಾಲ್ ದಂಪತಿ ಭಾರತಕ್ಕೆ ಮರಳುವ ಹಿಂದಿನ ರಾತ್ರಿ, ಒಂದು ದೃಢ ನಿರ್ಧಾರಕ್ಕೆ ಬಂದ ಮಹಮ್ಮದ್ ನಾಸಿರ್, ವಯೋವೃದ್ಧ ಖೇತರ್‌ಪಾಲ್‌ರನ್ನು ತಮ್ಮ ರೂಂಗೆ ಕರೆದೊಯ್ದರು. ಅವರನ್ನು ಕುರ್ಚಿಯಲ್ಲಿ ಕೂರಿಸಿ, ತಲೆತಗ್ಗಿಸಿಕೊಂಡು ಹೇಳ ತೊಡಗಿದರು: ಸರ್, ನಿಮ್ಮನ್ನು ನೋಡಬೇಕು, ಮಾತಾಡಿಸಬೇಕು, ಒಮ್ಮೆ ಕ್ಷಮೆ ಕೇಳಬೇಕು, ನಿಮ್ಮ ಕೈಗಳನ್ನು ಕಣ್ಣಿಗೆ ಒತ್ತಿಕೊಳ್ಳಬೇಕು, ಕೆಲವು ಸಂಗತಿಗಳನ್ನು ಹೇಳಿ ಮನಸ್ಸು ಹಗುರ ಮಾಡ್ಕೊಬೇಕು ಎಂದು ವರ್ಷಗಳಿಂದಲೂ ಕಾಯುತ್ತಿದ್ದವ ನಾನು. ಭಾರತ-ಪಾಕಿಸ್ಥಾನದ ನಡುವೆ ಶಾಂತಿ ಮಾತುಕತೆ ಆರಂಭವಾಗಲಿ ಎಂದಾಗಲೆಲ್ಲ, ಪರಿಚಿತರ ಮೂಲಕ ನಿಮ್ಮ ಭೇಟಿಗೆ ಸಂದೇಶ ಕಳಿಸ್ತಾ ಇದ್ದವ ನಾನೇ. ಅದೆಷ್ಟು ಪ್ರಯತ್ನಿಸಿದರೂ ನೀವು ನನಗೆ ಸಿಕ್ಕೇ ಇರಲಿಲ್ಲ. ಕಡೆಗೂ ದೇವರು ನನ್ನ ಮೊರೆಯನ್ನು ಕೇಳಿಸಿಕೊಂಡ. ಅತಿಥಿಯ ರೂಪದಲ್ಲಿ ನಿಮ್ಮನ್ನು ನನ್ನ ಬಳಿಗೆ ಕಳಿಸಿಕೊಟ್ಟ…
ಈಗ ನಾನು ಹೇಳುವ ಸಂಗತಿಯನ್ನು ಕೇಳಿ ನಿಮಗೆ ರಕ್ತ ಕುದಿಯಬಹುದು. ಶಾಪ ನೀಡುವ ಮನಸ್ಸಾಗಬಹುದು. ಅದೆಲ್ಲ ಗೊತ್ತಿದ್ದೂ ಹೇಳುತ್ತಿದ್ದೇನೆ. ಏಕೆಂದರೆ, ಆ ಸಂಗತಿಯನ್ನು ಹೇಳದಿದ್ದರೆ ನನಗೆ ಸಮಾಧಾನವಿಲ್ಲ.
ನಿಮ್ಮ ಮಗನಿದ್ದನಲ್ಲ- ಅರುಣ್ ಖೇತರ್‌ಪಾಲ್ -ಅವನು ಧೀರ ಸೇನಾನಿ. ಶತ್ರುಗಳನ್ನು ಹಿಮ್ಮೆಟ್ಟಿಸಿದ ವೀರಯೋಧ. ಈಗ ನಾನು-ನೀವು ಆಪ್ತಮಿತ್ರರು ನಿಜ. ಆದರೆ 1971ರಲ್ಲಿ ನನ್ನ ಪಾಲಿಗೆ ಬಂದ ಆ ಕೆಟ್ಟದಿನವನ್ನು ಎಂದೆಂದೂ ಮರೆಯಲಾಗುವುದಿಲ್ಲ. 1971ರ ಯುದ್ಧವನ್ನು ನೀವು ಭಾರತೀಯರು ಬಸಂತಾರ್ ಕದನ ಅನ್ನುತ್ತೀರಿ. ನಾವು ಪಾಕಿಸ್ಥಾನದವರು ಬಡೇಪಿಂದ್ ವಾರ್ ಎನ್ನುತ್ತೇವೆ. ಯುದ್ಧಭೂಮಿಯಲ್ಲಿ ನಾನು ಹಾಗೂ ನಿಮ್ಮ ಮಗ ಅರುಣ್ ಮುಖಾಮುಖಿಯಾಗಿದ್ದೆವು. ಎರಡೂ ದೇಶಗಳ ಯೋಧರು ಟ್ಯಾಂಕರ್‌ಗಳಲ್ಲಿ ಕೂತು ಯುದ್ಧ ಮಾಡಿದ ಸಂದರ್ಭ ಅದು. ನಮ್ಮವು 10 ಟ್ಯಾಂಕರ್‌ಗಳಿದ್ದವು. ಎದುರಾಳಿಯಾಗಿ 3 ಟ್ಯಾಂಕರ್‌ಗಳಿದ್ದವು. ಯುದ್ಧ ಶುರುವಾಗಿ ಸ್ವಲ್ಪಹೊತ್ತು ಕಳೆಯುವಷ್ಟರಲ್ಲಿ ಭಾರತದ ಎರಡು ಟ್ಯಾಂಕರ್‌ಗಳು ನಾಶವಾದವು. ಉಳಿದಿರೋದು ಇನ್ನೊಂದೇ ಟ್ಯಾಂಕರ್. ನಾವು ಗೆದ್ದೆವು ಅಂದುಕೊಂಡೆವು. ಆದರೆ ನಮ್ಮ ಊಹೆ ತಪ್ಪಾಯಿತು. ಉಳಿದಿದ್ದ ಒಂದೇ ಟ್ಯಾಂಕರ್‌ನಿಂದ ನಿರಂತರವಾಗಿ ಸಿಡಿದ ಬೆಂಕಿಯುಂಡೆಗಳು ನಮ್ಮ ಕಡೆಯ 7 ಟ್ಯಾಂಕರ್‌ಗಳನ್ನು ಧ್ವಂಸ ಮಾಡಿದವು. ಯುದ್ಧ ಮುಂದುವರಿಯಿತು. ಕಡೆಯಲ್ಲಿ ಉಳಿದವರು ಇಬ್ಬರೇ. ಪಾಕಿಸ್ಥಾನದ ಪರವಾಗಿ ನಾನು. ಭಾರತದ ಪರವಾಗಿ ಅವನು! ಈಗ ಹೇಳಿಕೊಳ್ಳಲು ಸಂಕಟವಾಗುತ್ತದೆ. ಅವತ್ತು ನಿಮ್ಮ ಧೀರ ಮಗ ಅರುಣ್ ಖೇತರ್‌ಪಾಲ್‌ನ ಪ್ರಾಣ ಆಹುತಿಯಾಗಿ ಹೋಯ್ತು. ಮತ್ಯಾರಿಂದಲೋ ಅಲ್ಲ, ನನ್ನಿಂದಲೇ. ಈ ಪಾಪಿ ಕೈಗಳಿಂದಲೇ ನಾನವತ್ತು ಗುಂಡು ಹಾರಿಸಿದೆ…
ಇದನ್ನೂ ಓದಿ:ಕೊರೊನಾ ಮಾತಾ ದೇಗುಲ : ಅರ್ಜಿದಾರನಿಗೇ ದಂಡ ವಿಧಿಸಿದ ಸುಪ್ರೀಂಕೋರ್ಟ್
ಸರ್, ಕಣ್ಣಾರೆ ಕಂಡೆನಲ್ಲ; ನಿಮ್ಮ ಮಗನಿಗೆ ಸಾವಿನ ಭಯವಿರಲಿಲ್ಲ. ಸೋಲುವ ಮನಸ್ಸಿರಲಿಲ್ಲ. ಆತ ಮದ್ದಾ ನೆಯಂತೆ ಅಬ್ಬರಿಸುತ್ತಿದ್ದ. ಜತೆಗಾರರನ್ನು ಹುರಿದುಂಬಿಸುತ್ತಿದ್ದ. ಏಕಾಂಗಿ ಎಂದು ತಿಳಿದಾಗಲೂ ಹೆಜ್ಜೆ ಹಿಂದಿಡಲಿಲ್ಲ. 21 ವರ್ಷದ ಆ ಪುಟ್ಟ ಹುಡುಗ, ನಮ್ಮ ಕಡೆಯ ಏಳು ಟ್ಯಾಂಕರ್‌ಗಳನ್ನು ಏಕಾಂಗಿಯಾಗಿ ಉಡಾಯಿಸಿಬಿಟ್ಟದ್ದನ್ನು ಕಂಡು ಒಂದರೆಕ್ಷಣ ನಾವೆಲ್ಲ ನಡುಗಿ ಹೋಗಿದ್ದೆವು. ಆದರೆ ಸರ್, ಅಂಥ ಧೀರನ ಗುಂಡೇಟಿಗೆ ಬಲಿಯಾಗುವ ಅದೃಷ್ಟ ನನಗಿರಲಿಲ್ಲ ನೋಡಿ, ಹಾಗಾಗಿ ಬದುಕಿಬಿಟ್ಟೆ. ಆದರೆ ಯುದ್ಧ ದಲ್ಲಿ ನಮಗೆ ಸೋಲಾ ಯಿತು. ಅಂಥ ಧೀರನನ್ನು ತಯಾರು ಮಾಡಿದ ನಿಮ್ಮ ಕೈಗಳನ್ನು ಕಣ್ಣಿಗೆ ಒತ್ತಿಕೊಳ್ಳಬೇಕು ಅನಿಸಿತ್ತು ಸರ್….”ಮುಂದೇನು ಹೇಳಬೇಕೋ ತೋಚದೆ ಶಿಲೆಯಂತೆ ನಿಂತುಬಿಟ್ಟರು ಮಹಮ್ಮದ್ ನಾಸಿರ್.
ಮಹಮ್ಮದ್ ನಾಸಿರ್‌ನ ಮನೆಯವರೆಲ್ಲ ತಲೆತಗ್ಗಿಸಿಕೊಂಡು ಮಾತಾಡುತ್ತಿದ್ದುದೇಕೆ ಎಂಬ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿತ್ತು. ಮಗನನ್ನು ಕೊಂದವನು, ಗೆಳೆಯನ ರೂಪದಲ್ಲಿ ಎದುರಿಗೇ ನಿಂತಿದ್ದಾನೆ ಎಂದು ತಿಳಿದಾಗ ಅವರ ಮನಸ್ಸಿನ ತುಂಬಾ ಅಲ್ಲೋಲಕಲ್ಲೋಲ. ಉಹುಂ, ಅವರು ಕ್ರುದ್ಧರಾಗಲಿಲ್ಲ. ಸಂಯಮ ಕಳೆದುಕೊಳ್ಳಲಿಲ್ಲ. ಯುದ್ಧಭೂಮಿಯಲ್ಲಿ ನಿಂತವನಿಗೆ ದೇಶದ ಗೆಲುವು ಮುಖ್ಯವಾಗಬೇಕೇ ಹೊರತು ಸೆಂಟಿಮೆಂಟ್ ಅಲ್ಲ. ನಾಸಿರ್, ತನ್ನ ಕರ್ತವ್ಯ ಪಾಲಿಸಿದ್ದಾನೆ. ಅವನ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರ ಒಳ ಮನಸ್ಸು ಪಿಸುಗುಟ್ಟಿತು. ತತ್‌ಕ್ಷಣವೇ ತಮ್ಮನ್ನು ನಿಯಂತ್ರಿಸಿ ಕೊಂಡು ನಾಸಿರ್‌ನ ಬೆನ್ನುತಟ್ಟಿದ ಅವರು-ನನ್ನ ಮಗನ ವೀರಚರಿತ್ರೆಯನ್ನು ಹೇಳಿದ್ದಕ್ಕೆ ಥ್ಯಾಂಕ್ಸ್’ ಎಂದರು.
ಮರುದಿನ, ಬ್ರಿಗೇಡಿಯರ್ ನಾಸಿರ್‌ರ ಇಡೀ ಕುಟುಂಬ ಅತಿಥಿಗಳನ್ನು ಬೀಳ್ಕೊಡಲು ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿತು. ಎಲ್ಲರ ಮನಸ್ಸೂ ಭಾರ. ಎಲ್ಲರ ಕಂಗಳಲ್ಲೂ ನೀರಪೊರೆ. ಕಡೆಗೆ ಎಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಂಡರು. ನಾಸಿರ್‌ರ ಕುಟುಂಬವರ್ಗ, ಬಿಕ್ಕಳಿಸುತ್ತಲೇ ಖೇತರ್‌ಪಾಲ್ ದಂಪತಿಯನ್ನು ಬೀಳ್ಕೊಟ್ಟಿತು. ಎರಡು ದಿನಗಳ ಅನಂತರ ಖೇತರ್‌ಪಾಲ್ ದಂಪತಿಗೆ ನಾಸಿರ್‌ರ ಕಡೆಯಿಂದ ಪತ್ರ ಬಂತು. ವಿಮಾನ ನಿಲ್ದಾಣದಲ್ಲಿ ತೆಗೆಸಿಕೊಂಡ ಗ್ರೂಪ್ ಫೋಟೋ ಹಿಂದೆ ಹೀಗೆ ಬರೆಯಲಾಗಿತ್ತು: ಪರಮವೀರ ಚಕ್ರ ಪುರಸ್ಕೃತ ಧೀರ ಸೇನಾನಿ, ಶಹೀದ್ ಲೆಫ್ಟಿನೆಂಟ್ ಅರುಣ್ ಖೇತರ್‌ಪಾಲ್ ಅವರ ತಂದೆಯವರಾದ ಬ್ರಿಗೇಡಿಯರ್ ಎಂ. ಎಲ್ ಖೇತರ್‌ಪಾಲ್ ಅವರಿಗೆ- ಪ್ರೀತಿ, ಗೌರವದೊಂದಿಗೆ- ಖಾಜಾ ಮಹಮ್ಮದ್ ನಾಸಿರ್, ಲಾಹೋರ್, ಪಾಕಿಸ್ಥಾನ.
ಬಸಂತಾರ್ ಯುದ್ಧ ನಡೆದು ಆಗಲೇ 50 ವರ್ಷವಾಗುತ್ತಾ ಬಂತು ಎಂಬುದು ನೆನಪಾದಾಗ, ಅರುಣ್ ಖೇತರ್‌ಪಾಲ್ ಅವರ ಕೆಚ್ಚೆದೆಯ ಹೋರಾಟ ಮತ್ತು ಅನಂತರದಲ್ಲಿ ಎಂ.ಎಲ್ ಖೇತರ್‌ಪಾಲ್ ಅವರು ಪಾಕಿಸ್ಥಾನಕ್ಕೆ ಹೋಗಿಬಂದ ವಿವರಣೆಯ ಕಥೆ ನೆನಪಾಗಿ…
– ಎ.ಆರ್.ಮಣಿಕಾಂತ್