Advertisement

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

11:22 PM Dec 21, 2024 | Team Udayavani |

ಬೆಂಗಳೂರು: ತಮ್ಮ ಬಂಧನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದು, ಬಂಧಿಸಿದ ಬಳಿಕ ರಾತ್ರಿಯೆಲ್ಲ ಸುತ್ತಾಡಿಸಿ ಹಿಂಸೆ ಕೊಡಲು ಪೊಲೀಸರಿಗೆ ನಿರ್ದೇಶನ ನೀಡಿದವರು ಯಾರು ಎಂಬುದು ಬಹಿರಂಗವಾಗಬೇಕಾದರೆ ನ್ಯಾಯಾಂಗ ತನಿಖೆಯೇ ನಡೆಯಬೇಕು ಎಂದರು.

Advertisement

ನನ್ನ ಮೊಬೈಲ್‌ ಟ್ಯಾಪ್‌ ಆಗುತ್ತಿದ್ದು, ಸ್ಯಾಟಲೈಟ್‌ ಹಾಗೂ ಸಿಡಿಆರ್‌ ತನಿಖೆ ನಡೆಯಬೇಕು. ನಿಗೂಢ ಪ್ರದೇಶಕ್ಕೆ ಕರೆದೊಯ್ದು ಯಾರನ್ನೋ ಕರೆಸಿ ನನ್ನನ್ನು ಕೊಲೆ ಮಾಡುವ ಷಡ್ಯಂತ್ರ ಇತ್ತು. ಇಲ್ಲವಾದರೆ ಕ್ರಷರ್‌ ಮಧ್ಯೆ ಕರೆದೊಯ್ದು ತಡರಾತ್ರಿ ಏಕೆ ಪೊಲೀಸರು ವಾಹನ ನಿಲ್ಲಿಸುತ್ತಿದ್ದರು? ಪದೇಪದೆ ಕರೆ ಮಾಡಿ ಪೊಲೀಸರಿಗೆ ನಿರ್ದೇಶನ ಕೊಡುತ್ತಿದ್ದವರು ಯಾರು? ಅದು ಡಿಕೆಶಿಯವರೋ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೋ ಎಂಬುದು ಬಯಲಾಗಬೇಕು ಎಂದರು.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಧನದಿಂದ ಬಿಡುಗಡೆಯವರೆಗಿನ 30 ತಾಸುಗಳ ಬೆಳವಣಿಗೆಗಳನ್ನು ವಿವರಿಸಿದ ಅವರು, ನಾನು ಕ್ರಿಮಿನಲ್‌, ಆತಂಕವಾದಿ ಎಂಬಂತೆ ಪೊಲೀಸರು ವರ್ತಿಸಿದ್ದಾರೆ. ಘಟನೆ ಬಗ್ಗೆ ಸಭಾಪತಿಗಳು ರೂಲಿಂಗ್‌ ಕೊಟ್ಟ ಬಳಿಕವೂ ಈ ರೀತಿ ವರ್ತಿಸಿದ್ದಾರೆ ಎಂದರೆ ಅರ್ಥವೇನು? ಬಿಹಾರ, ತಮಿಳುನಾಡಿನಲ್ಲಿ ನಡೆಯುತ್ತಿದ್ದ ವರ್ತನೆ ಕರ್ನಾಟಕದಲ್ಲಿ ನಡೆಯುತ್ತಿದೆ. ಕರ್ನಾಟಕ ನಂದನವನವೇ ವಿನಾ ಬನಾನಾ ರಿಪಬ್ಲಿಕ್‌ ಅಥವಾ ಕನಕಪುರ-ಬೆಳಗಾವಿ ರಿಪಬ್ಲಿಕ್‌ ಅಲ್ಲ. ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ನನ್ನನ್ನು ಜೀವಂತವಾಗಿ ಬಿಟ್ಟದ್ದೇ ಹೆಚ್ಚು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇದು ಡಿಸಿಎಂ ಘನತೆಗೆ ತಕ್ಕ ಹೇಳಿಕೆಯಲ್ಲ ಎಂದು ವಾಗ್ಧಾಳಿ ನಡೆಸಿದರು.

ಗೃಹ ಇಲಾಖೆ ಪರಮೇಶ್ವರ್‌ ನಿಯಂತ್ರಣದಲ್ಲಿ ಇದೆಯಾ? 
ಗೃಹ ಸಚಿವ ಪರಮೇಶ್ವರ್‌ ಕೆಟ್ಟವರಲ್ಲ. ಆದರೆ ಈ ಘಟನೆ ಬಳಿಕ ಗೃಹ ಇಲಾಖೆ ಅವರ ನಿಯಂತ್ರಣದಲ್ಲಿ ಇದೆಯಾ ಎಂಬ ಅನುಮಾನ ಮೂಡುತ್ತಿದೆ. ನನ್ನನ್ನು ರಾತ್ರಿಯೆಲ್ಲ ಸುತ್ತಾಡಿಸಿದ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಲ್ಲ, ಇದೆಲ್ಲ ಬೇಕಿತ್ತಾ ಎಂದು ಅವರು ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ. ಪರಮೇಶ್ವರ್‌ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತತ್‌ಕ್ಷಣ ಅಮಾನತು ಮಾಡಲಿ ಎಂದು ಆಗ್ರಹಿಸಿದರು.

ಮಾನವ ಹಕ್ಕು ಉಲ್ಲಂಘನೆ
ಈ ಪ್ರಕರಣದಲ್ಲಿ ನನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನನ್ನನ್ನು ಬಂಧಿಸುವುದಕ್ಕೆ ನೋಟಿಸ್‌ ನೀಡಿದ್ದರಾ ಅಥವಾ ಸಭಾಪತಿಗಳ ಅನುಮತಿ ಪಡೆದಿದ್ದರಾ? ಇದೊಂದು ಷಡ್ಯಂತ್ರ. ಇದರಲ್ಲಿ ಡಿಸಿಎಂ, ಲಕ್ಷ್ಮೀ ಹೆಬ್ಬಾಳ್ಕರ್‌ ಭಾಗಿಯಾಗಿದ್ದಾರೆ. ಪರಿಷತ್‌ನಲ್ಲಿ ಡಿ.ಕೆ. ಶಿವಕುಮಾರ್‌, ಲಕ್ಷ್ಮಿಹೆಬ್ಬಾಳ್ಕರ್‌, ಚನ್ನರಾಜ್‌ ಹಟ್ಟಿಹೊಳಿ ಯಾವ ರೀತಿ ವರ್ತಿಸಿದರು ಎಂಬ ದಾಖಲೆಯಿದೆ. ನನಗೆ ಈಗಲೂ ಜೀವ ಬೆದರಿಕೆ ಇದೆ. ನನಗೇನಾದರೂ ಅನಾಹುತವಾದರೆ ಇವರೇ ಹೊಣೆ. ಈ ಬಗ್ಗೆ ನಾನು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.

Advertisement

ಕುಡಿಯಲು ನೀರು ಕೊಡಲಿಲ್ಲ: 
ಭದ್ರತಾ ದೃಷ್ಟಿಯಿಂದ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ನನ್ನನ್ನು ಸುತ್ತಾಡಿಸಲಾಯಿತು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾನೂನು ಪಂಡಿತರಾದ ನಿಮ್ಮಿಂದ ಈ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ವ್ಯಂಗ್ಯವಾಡಿದರು. ರಾತ್ರಿ 11.45ರ ಸುಮಾರಿಗೆ ನನ್ನನ್ನು ಕಿತ್ತೂರು ಠಾಣೆಯಿಂದ ಬಲವಂತವಾಗಿ ಜೀಪಿನಲ್ಲಿ ತುಂಬಿಕೊಂಡು ನಂದಗಢಕ್ಕೆ ಹೋದರು. ಕುಡಿಯುವುದಕ್ಕೆ ನೀರನ್ನು ಕೊಡಲಿಲ್ಲ. ಮೂತ್ರ ಮಾಡುವುದಕ್ಕೂ ಅವಕಾಶ ನೀಡಲಿಲ್ಲ. ವಾಂತಿ ಬಂದಂತೆ ಆಗುತ್ತಿದೆ ಎಂದರೆ ಇಬ್ಬರು ಅಧಿಕಾರಿಗಳು ಭದ್ರವಾಗಿ ಹಿಡಿದುಕೊಂಡರು. ಎಲ್ಲಿಗೆ ಕರೆದೊಯ್ತುತ್ತಿದ್ದೀರಿ ಎಂದು ಕಿರುಚಿದರೂ ಉತ್ತರ ನೀಡಲಿಲ್ಲ. ಹೊರಗೆ ನೋಡಿದರೆ ನಮ್ಮ ವಾಹನ ಧಾರವಾಡ ಹೈಕೋರ್ಟ್‌ ಬಳಿ ಇತ್ತು. ಆ ಸಂದರ್ಭದಲ್ಲಿ ನಾನು ಮೊಬೈಲ್‌ನಿಂದ ಲೈವ್‌ ಲೊಕೇಶನ್‌ ಪತ್ನಿಗೆ ಕಳುಹಿಸಿದೆ.

ಗರಗ, ಸವದತ್ತಿ, ರಾಮದುರ್ಗ, ಯಾದವಾಡ ಸುತ್ತಾಡಿಸಿ ಕಬ್ಬಿನಗದ್ದೆಯೊಂದರ ಬಳಿ ವಾಹನ ನಿಲ್ಲಿಸಿದರು. ಆಗ ಮಾಧ್ಯಮದ ಪ್ರತಿನಿಧಿಗಳು ಹಾಗೂ ಪರಿಷತ್‌ ಸದಸ್ಯ ಕೇಶವಪ್ರಸಾದ್‌ ಸ್ಥಳಕ್ಕೆ ಆಗಮಿಸಿದರು. ಅಲ್ಲಿಂದ ಡಿವೈಎಸ್‌ಪಿ ಕಚೇರಿಗೆ ನನ್ನನ್ನು ಕರೆದೊಯ್ದು ಕುಳ್ಳಿರಿಸಿ, ವಾಶ್‌ ರೂಂಗೆ ಹೋಗಲು ಅವಕಾಶ ಕೊಟ್ಟರು. ಆಗ ಬೆಳಗಿನ ಜಾವ 3 ಗಂಟೆಯಾಗಿತ್ತು. ಕನ್ನಡಿಯಲ್ಲಿ ನೋಡಿಕೊಂಡಾಗ ತಲೆಯಿಂದ ಹರಿದ ರಕ್ತ ಮುಖದ ಮೇಲೆಲ್ಲ ಹೆಪ್ಪುಗಟ್ಟಿದ್ದು ಕಾಣಿಸಿತು ಎಂದರು.

ಆಗ ಮುಧೋಳದಿಂದ ಗ್ರಾಮಾಂತರ ಎಸ್ಪಿ ಭೀಮಾಶಂಕರ್‌ ಗುಳೇದ್‌ ಬಂದರು. ನಿಮಗೆ ಏನೂ ತೊಂದರೆಯಾಗುವುದಿಲ್ಲ. ಫೋನ್‌ ಕೊಟ್ಟುಬಿಡಿ ಎಂದರು. ದಡೂತಿ ವ್ಯಕ್ತಿಯೊಬ್ಬ ಫೋನ್‌ ಕಿತ್ತುಕೊಳ್ಳುವುದಕ್ಕೆ ಪ್ರಯತ್ನ ನಡೆಸಿದ. ಆದರೆ ನಾನು ಮೊಬೈಲ್‌ ಗಟ್ಟಿಯಾಗಿ ಹಿಡಿದುಕೊಂಡು ಚೀರಿದೆ. 10 ನಿಮಿಷದ ಬಳಿಕ ಅಂಕಲಿ ಠಾಣೆಗೆ ನನ್ನನ್ನು ಕರೆತಂದರು. ಆಗ ಅಧಿಕಾರಿಯೊಬ್ಬರು ಇವೆಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದರು ಎಂದು ರವಿ ಹೇಳಿದರು. ಈ ಪ್ರಕರಣದಲ್ಲಿ ಬೆಳಗಾವಿ ಕಮಿಷನರ್‌, ಎಸ್ಪಿ ಗುಳೇದ್‌, ಎಸಿಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ ಳಗೊಂಡಂತೆ ಎಂಟು ಜನರ ವರ್ತನೆ ಅನುಮಾನಾಸ್ಪದವಾಗಿದೆ ಎಂದರು.

ಹೆಬ್ಬಾಳ್ಕರ್‌ ಬಗ್ಗೆ ದ್ವೇಷ ಇಲ್ಲ
ನಾನೇನು ಮಾತನಾಡಿದೆ ಎಂಬುದು ನನಗೆ ಗೊತ್ತು. ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ನನಗೆ ದ್ವೇಷ ಇಲ್ಲ. ಅಶ್ಲೀಲ ಪದ ಬಳಸುವ ಸಂಸ್ಕೃತಿ ನನ್ನದಲ್ಲ ಎಂದರು.

ಸಿ.ಟಿ.ರವಿಗೆ ಹೂಮಳೆ ಸ್ವಾಗತ
ಇದಕ್ಕೂ ಮೊದಲು ಸಿ.ಟಿ. ರವಿ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವವಾಗಿ ಸ್ವಾಗತ ಮಾಡಿದರು. ಸಿ.ಟಿ. ರವಿ ಮೇಲೆ ಹೂಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಕಾರ್ಯಕರ್ತರು ಸಿ.ಟಿ.ರವಿ ಪರ ಜಯ ಘೋಷಣೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next