Advertisement

ರೀಮೇಕ್‌ ಕವಚ

12:05 PM Dec 01, 2017 | |

“ಈ ಪಾತ್ರ ನನಗೆ ತುಂಬಾ ಹೊಸದು. ನಾನು ಕೂಡಾ ಎಕ್ಸೆ„ಟ್‌ ಆಗಿದ್ದೀನಿ …’
ಹೀಗೆಂದರು ಶಿವರಾಜಕುಮಾರ್‌. ಇಲ್ಲಿವರೆಗೆ 110ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಶಿವರಾಜಕುಮಾರ್‌ ಅವರು
ಮಾಡಿರದಂತಹ ಪಾತ್ರ ಯಾವುದು, ಯಾವ ಪಾತ್ರ ಅವರ ಎಕ್ಸೆ„ಟ್‌ಮೆಂಟ್‌ಗೆ ಕಾರಣವಾಗಿದೆ ಎಂದು ನೀವು ಕೇಳಿದರೆ
ಅದು ಅಂಧನ ಪಾತ್ರ. ಹೌದು, ಶಿವರಾಜಕುಮಾರ್‌ “ಕವಚ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಅವರು ಅಂಧನ ಪಾತ್ರ ಮಾಡುತ್ತಿದ್ದಾರೆ. ತಮ್ಮ ಇಷ್ಟು ವರ್ಷದ ಕೆರಿಯರ್‌ನಲ್ಲಿ ಶಿವಣ್ಣ ಈ ತರಹದ ಪಾತ್ರ ಮಾಡಿಲ್ಲ. ಮೊದಲ ಬಾರಿಗೆ ಮಾಡುತ್ತಿರುವುದರಿಂದ ಸಹಜವಾಗಿಯೇ ಎಕ್ಸೆ„ಟ್‌ ಆಗಿದ್ದಾರೆ. ಈ ಪಾತ್ರಕ್ಕಾಗಿ ಒಂದಷ್ಟು ತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಅಂಧರ ಮ್ಯಾನರೀಸಂ ಯಾವ ರೀತಿ ಇರುತ್ತದೆ ಎಂಬುದನ್ನು ಶಿವಣ್ಣ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Advertisement

ಅಂದಹಾಗೆ, ಇದು ಮಲಯಾಳಂನ “ಒಪ್ಪಂ’ ಚಿತ್ರದ ರೀಮೇಕ್‌. ಅಲ್ಲಿನ “ಒಪ್ಪಂ’ ಇಲ್ಲಿ “ಕವಚ’ ಆಗಿದೆ. ವಿಶೇಷವೆಂದರೆ ಸುಮಾರು 15 ವರ್ಷಗಳ ನಂತರ ಶಿವರಾಜಕುಮಾರ್‌ ರೀಮೇಕ್‌ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾವನ್ನು ರೀಮೇಕ್‌ ಮಾಡಲು ಕಾರಣವೇನೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕಥೆ. ಶಿವರಾಜಕುಮಾರ್‌ ಅವರಿಗೆ “ಒಪ್ಪಂ’ ಚಿತ್ರ ತುಂಬಾ
ಇಷ್ಟವಾಯಿತಂತೆ. ಅದರಲ್ಲಿನ ಮೋಹನ್‌ ಲಾಲ್‌ ಅವರ ಅಭಿನಯ ಖುಷಿಕೊಟ್ಟಿತಂತೆ. “15 ವರ್ಷಗಳಿಂದ ಯಾವುದೇ ರೀಮೇಕ್‌ ಮಾಡಿರಲಿಲ್ಲ. ಈ ಸಿನಿಮಾ ಮಾಡಲು ಕಾರಣ ಕಥೆ ಹಾಗೂ ಪಾತ್ರ. ಒಬ್ಬ ಅಂಧ ತನ್ನ ಕುಟುಂಬ ಉಳಿಸಲು ಏನೆಲ್ಲಾ ಮಾಡುತ್ತಾನೆ ಎಂಬ ಲೈನ್‌ ನನಗೆ ತುಂಬಾ ಇಷ್ಟವಾಯಿತು’ ಎಂದು ತಾವು ರೀಮೇಕ್‌ ಒಪ್ಪಿಕೊಂಡ ಬಗ್ಗೆ ಹೇಳುತ್ತಾರೆ. ಚಿತ್ರದ ಪಾತ್ರದ ಬಗ್ಗೆಯೂ
ಶಿವಣ್ಣ ಮಾತನಾಡುತ್ತಾರೆ. “ಇಲ್ಲಿ ನಾನು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಂಧನ ಪಾತ್ರ ಕೂಡಾ ನನಗೆ ಮೊದಲು. ಈ ತರಹದ ಸವಾಲಿನ ಪಾತ್ರ ಮಾಡೋದು ಖುಷಿ. ಮೋಹನ್‌ ಲಾಲ್‌ ಮಟ್ಟಕ್ಕೆ ನಟಿಸುತ್ತೇನೋ ಗೊತ್ತಿಲ್ಲ, ಆದರೆ, ಶೇ. 60ರಷ್ಟಾದರೂ ನ್ಯಾಯ ಒದಗಿಸುತ್ತೇನೆ. ಈ ಪಾತ್ರಕ್ಕಾಗಿ ಮ್ಯಾನರೀಸಂ ಕೂಡಾ ಬದಲಾಗಬೇಕಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಜೀವ ತುಂಬಲು ಪ್ರಯತ್ನಿಸುತ್ತೇನೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ.

ಮತ್ತೆ ರೀಮೇಕ್‌ ಮಾಡುತ್ತಿರುವ ಶಿವಣ್ಣ ಮುಂದಿನ ದಿನಗಳಲ್ಲಿ ರೀಮೇಕ್‌ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂದು ನೀವು ಕೇಳಬಹುದು. “ನಟಿಸುತ್ತೇನೆ, ಆದರೆ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ ಅಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “ನನಗೆ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ಕಥೆಯನ್ನಷ್ಟೇ ರೀಮೇಕ್‌ ಮಾಡುತ್ತೇನೆ. ಅದು ಬಿಟ್ಟು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳನ್ನು ರೀಮೇಕ್‌ ಮಾಡಲ್ಲ. “ಒಪ್ಪಂ’ ತರಹದ ಕಥೆಗಳು ಇಷ್ಟವಾಗಿ, ಆ ಪಾತ್ರ ಮಾಡಬೇಕೆಂಬ ಆಸೆ ನನಗೆ ಬಂದರೆ ಮಾತ್ರ ಮಾಡುತ್ತೇನೆ’  ಎಂದು ಸ್ಪಷ್ಟಪಡಿಸುತ್ತಾರೆ. 

ಈ ಚಿತ್ರವನ್ನು ಜಿ.ವಿ.ಆರ್‌. ವಾಸು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ 
ಅವರು, ಶಿವರಾಜಕುಮಾರ್‌ ಅವರಿಗೆ ಸಿನಿಮಾ ಮಾಡಬೇಕೆಂದು ಅವತ್ತೇ ಅಂದುಕೊಂಡಿದ್ದರಂತೆ. ಈಗ ಆ ಅವಕಾಶ ಸಿಕ್ಕ ಖುಷಿಯನ್ನು ಹಂಚಿಕೊಂಡರೇ ಹೊರತು ಸಿನಿಮಾ ಬಗ್ಗೆ ಮಾತನಾಡಲಿಲ್ಲ. ಚಿತ್ರವನ್ನು ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಕೃತಿಕಾ ನಾಯಕಿಯಾಗಿ ನಟಿಸಿದರೆ, ಇಶಾ ಕೊಪ್ಪಿಕರ್‌ ಇಲ್ಲಿ ಪೊಲೀಸ್‌ ಆಫಿಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ವಸಿಷ್ಠ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next