ಪಣಜಿ(ವಾಸ್ಕೊ): ನಿರೀಕ್ಷೆಯಂತೆ ಬೈನಾದಲ್ಲಿನ ಕನ್ನಡಿಗರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ದಕ್ಷಿಣ ಗೋವಾ ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಗುರುವಾರ ಬೆಳಗ್ಗೆ 32 ಮನೆಗಳನ್ನು ತೆರವುಗೊಳಿಸಿದೆ. 200ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಕನ್ನಡಿಗರು ಮತ್ತೆ ಬೀದಿಪಾಲಾಗಿದ್ದಾರೆ.
ಸಿಆರ್‌ಜೆಡ್ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದ್ದ 121 ಮನೆಗಳ ತೆರವಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಅವುಗಳ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. 38 ಮನೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಮನೆಗಳಿಗೆ ನ್ಯಾಯಾಲಯ ತುರ್ತು ತಡೆಯಾಜ್ಞೆ ನೀಡಿತ್ತು. ಬುಧವಾರ ಇನ್ನೂ 6 ಮನೆಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಗುರುವಾರ ಬೆಳಗ್ಗೆ 32 ಮನೆಗಳನ್ನು ಮಾತ್ರ ತೆರವುಗೊಳಿಸಲಾಯಿತು. ಕಾಟೆ ಬೈನಾದಲ್ಲಿ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಇವರು ವಾಸಿಸುತ್ತಿದ್ದರು. ಇವರಿಗೆ ಯಾವುದೇ ಪುನರ್ವಸತಿ ನೀಡದ್ದರಿಂದ ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ.
2004ರಿಂದ ಬೈನಾ ಆಪರೇಶನ್: ಗೋವಾ ಸರ್ಕಾರವು 2004ರಿಂದ ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ಒಂದಿಲ್ಲೊಂದು ಕಾರಣ ನೀಡಿ ತೆರವುಗೊಳಿಸುತ್ತಾ ಬಂದಿದೆ. 2004ರಲ್ಲಿ ಬೈನಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಕಾರಣ ನೀಡಿ ಗೋವಾ ಸರ್ಕಾರವು ಸುಮಾರು 309 ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಬೈನಾ ಆಪರೇಶನ್ ಕಾರ್ಯಾಚರಣೆ ಆರಂಭಿಸಿದ ಗೋವಾ ಸರ್ಕಾರ, ಸಿಆರ್‌ಜೆಡ್ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ 350ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿತ್ತು. ಇದುವರೆಗೂ ಬೈನಾದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕನ್ನಡಿಗರಿಗೆ ಗೋವಾ ಸರ್ಕಾರವಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ಯಾವುದೇ ಶಾಶ್ವತ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ.
ಹೋರಾಟಕ್ಕೆ ಸಿದ್ಧವಾದ ಗೋವಾ ಕನ್ನಡ ಮಹಾಸಂಘ
ಪಣಜಿ: ಗೋವಾ ಸರ್ಕಾರ ಕಾಟೆಬೈನಾದಲ್ಲಿ ಗುರುವಾರ ತೆರವುಗೊಳಿಸಿದ 32 ಮನೆಗಳ ಪೈಕಿ 20ಕ್ಕೂ ಹೆಚ್ಚು ಮನೆಗಳು ಕನ್ನಡಿಗರದ್ದಾಗಿವೆ.
ಬೈನಾದಲ್ಲಿ 2004ರಿಂದಲೂ ಯಾವುದೇ ಶಾಶ್ವತ ಪುನರ್ವಸತಿ ಕಲ್ಪಿಸದೆಯೇ ಕನ್ನಡಿಗರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಮಾನವೀಯತೆ ಆಧಾರದ ಮೇಲೂ ಕರ್ನಾಟಕ ಹಾಗೂ ಗೋವಾ ಸರ್ಕಾರಗಳು ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅಖೀಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ(ರೆಡ್ಡಿ) ಆರೋಪಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.