ಕೊಳ್ಳೇಗಾಲ: ಪಟ್ಟಣದ ಖಾಸಗಿ ಗೀತಾ ಪ್ರೈಮರಿ ಶಾಲೆಯ ಕಿಟಕಿ ಬಳಿ ಸೆಸ್ಕ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದು, ವಿದ್ಯಾರ್ಥಿಗಳು ಶಾಲೆಯ ಕಿಟಕಿ ತೆಗೆಯುವ ವೇಳೆ ಟ್ರಾನ್ಸ್‌ಫಾರ್ಮರ್ ಕೈಗೆ ಎಟಕುವಂರಿದೆ. ಯಾವುದೇ ಕ್ಷಣದಲ್ಲಾದರೂ ವಿದ್ಯುತ್ ಸ್ಪರ್ಶದಿಂದ ಅವಘಡ ಸಂಭವಿಸಬಹುದು.
ಇತ್ತೀಚೆಗೆ ಕೊಪ್ಪಳದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಡಿ.ದೇವರಾಜ್ ಅರಸು ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿ ತಾತ್ಕಾಲಿಕ ಧ್ವಜ ಕಂಬವನ್ನು ತೆರವು ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ 5 ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದ್ದು ಆ ರೀತಿಯ ಅನಾಹುತ ನಡೆಯದಂತೆ ಇಲಾಖೆ ಎಚ್ಚರ ವಹಿಸಬೇಕು.
ಶಾಲಾ ಸಿಬ್ಬಂದಿ ಎಚ್ಚರಿಕೆ ವಹಿಸಿ: ಶಾಲೆಯ ಕಿಟಕಿಗೆ ಹೊಂದಿಕೊಂಡಂತೆ ಸೆಸ್ಕ್ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಕಿಟಕಿಯನ್ನು ತೆಗೆಯುವ ವೇಳೆ ಕೈಯಿಂದ ಸ್ಪರ್ಶವಾದ ಕೂಡಲೇ ಶಾಲೆಯಲ್ಲಿ ಅವಘಡ ಸಂಭವಿಸಿದ ಪಕ್ಷದಲ್ಲಿ ಹಲವರ ಪ್ರಾಣಹಾನಿಗೆ ಆಹ್ವಾನ ನೀಡಿದಂತಾಗುತ್ತದೆ. ಈಗಾಲಾದರೂ ಅಧಿಕಾರಿಗಳು ಮತ್ತು ಶಾಲಾ ಸಿಬ್ಬಂದಿ ಎಚ್ಚರಿಕೆ ವಹಿಸಬೇಕಾಗಿದೆ.
ಜಾನುವಾರುಗಳಿಗೆ ಕುತ್ತು: ಶಾಲಾ ಕಟ್ಟಡದ ಮಗ್ಗುಲಲ್ಲೇ ಇರುವ ಗಲ್ಲಿಯಲ್ಲಿ ಹುಲ್ಲು ಮೇಯಿಸುವ ಸಲುವಾಗಿ ಬಡಾವಣೆಯ ನಿವಾಸಿಗಳ ರಾಸು ಗಳು ಇಲ್ಲೇ ಬಂದು ಹುಲ್ಲನ್ನು ಮೇಯಿವುದರಿಂದ ವಿದ್ಯುತ್ ಸ್ಪರ್ಶಿಸಿ ಅವುಗಳ ಪ್ರಾಣಕ್ಕೂ ಹಾನಿಯಾಗುವ ಸಂಭವವಿದೆ.
ಮುನ್ನೆಚ್ಚರಿಕೆ ಅಗತ್ಯ: ಶಾಲೆಯ ಆಡಳಿತ ವರ್ಗ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ವಿದ್ಯುತ್ ಟ್ರಾನ್ಸ್‌ಫಾರ್ಮರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ ಪಕ್ಷದಲ್ಲಿ ಮುಂದೊಂದು ದಿನ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಾಧ್ಯವಿದ್ದು, ಕೂಡಲೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಶಿಕ್ಷಕರ ದೂರು: ಕಳೆದ ಒಂದು ವರ್ಷಗಳ ಹಿಂದೆಯೇ ಸೆಸ್ಕ್ ನಿಗಮದ ಅಧಿಕಾರಿಗಳಿಗೆ ಶಾಲೆಯ ಕಿಟಕಿ ಪಕ್ಕದಲ್ಲೇ ಇರುವ ಟ್ರಾನ್ಸ್‌ಫಾರ್ಮರ್‌ನಿಂದ ಇತ್ತೀಚೆಗೆ ಬೆಂಕಿ ಹೊತ್ತಿಕೊಂಡು ಯಾವುದೇ ಅಪಾಯ ಎದುರಾಗದೆ ಪಾರಾಗಿತ್ತು. ಘಟನೆ ಬಳಿಕ ಬದಲಾಯಿಸುವಂತೆ ದೂರು ನೀಡಿದ್ದರೂ ಸಹ ಇದುವೆರೆಗೂ ಅಧಿಕಾರಿಗಳು ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಶಾಲೆ ಮುಖ್ಯ ಶಿಕ್ಷಕ ಶಿವರಾಜು ದೂರಿದ್ದಾರೆ.
ಶಾಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಯಾವುದೇ ಅವಘಡ ಸಂಭವಿಸಿದಂತೆ ತಡೆಯುವ ಸಲುವಾಗಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಟ್ರಾನ್ಸ್‌ಫಾರ್ಮರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು.
-ಲಿಂಗರಾಜು, ಸೆಸ್ಕ್ ಎಇಇ
* ಡಿ.ನಟರಾಜು