ಪ್ರೀತಿಯ ಅಕ್ಕಾ ಹೇಗಿದ್ದೀಯ ನೀನು ವಿದೇಶದಲ್ಲಿ ಸುರಕ್ಷಿತವಾಗಿ ಇರುವೆ ಎಂದು ಭಾವಿಸುವೆ.
ನಾವು ಇಲ್ಲಿ ಕ್ಷೇಮವಾಗಿದ್ದೇವೆ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ ಆದಷ್ಟು ಬೇಗ ಬಾ.
ದೂರವಾಣಿಯಲ್ಲಿ ಎಷ್ಟು ಹರಟಬಹುದು, ವಿಡಿಯೋ ಕರೆಯಲ್ಲಿ ಮಾತಾಡಬಹುದು. ಆದರೆ ಬರವಣಿಗೆಯಲ್ಲಿ ಉಕ್ಕುವ ಭಾವನೆ ಸರಣಿ ಮಾತುಗಳಲ್ಲಿ ಸಿಗುವುದಿಲ್ಲ. ಅದಕ್ಕಾಗಿ ನಿನ್ನ ನೆನಪಿನ ಹಂದರದಲ್ಲಿ ಈ ಪತ್ರ ಬರೆಯುತ್ತಿದ್ದೇನೆ ಕಣೇ.
ಅಕ್ಕಾ ಸ್ವತಂತ್ರ ಅಂದ್ರೆ ಅದೊಂದು ಹೋರಾಟ, ತ್ಯಾಗ, ಮಾತೃಭೂಮಿ ಎನ್ನುವ ಉನ್ಮತ್ತ ಶಕ್ತಿ. ನಮ್ಮ ಭಾರತದ ದೇಶಕ್ಕಾಗಿ ಸಂಭವಿಸಿದ ಸುಧೀರ್ಘ ಸಂಘರ್ಷ. ಸ್ವಾತಂತ್ರ್ಯ ದೇಶದ ಮಟ್ಟಿಗೆ ಎಷ್ಟು ಪ್ರಮುಖವೊ ಹಾಗೆ ವ್ಯಕ್ತಿಯ ಮಟ್ಟಿಗೂ ಸ್ವಾತಂತ್ರ್ಯ ಅಷ್ಟೇ ಮುಖ್ಯ. ತನ್ನ ಆಲೋಚನೆಗಳನ್ನು ಹಾಗೂ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ಆವಶ್ಯಕವಾಗಿದೆ.
ನನಗೂ ನಿನಗೂ ಸ್ವತಂತ್ರ ದಿನಾಚರಣೆ ಎಂದರೆ ಮರೆಯಲಾಗದಷ್ಟು ಸಿಹಿ ನೆನಪುಗಳಿವೆ. ನೆನಪಿದ್ಯಾ ನಿನಗೆ ?ನಾವಿಬ್ಬರೂ ಬಿಳಿ ಸಮವಸ್ತ್ರ ತೊಟ್ಟು ಹಿಂದಿನ ದಿನವೇ ಹತ್ತಾರು ಆಂಗಡಿ ಸುತ್ತಿ ತಂದಿದ್ದ ಕೆಸರಿ ಬಿಳಿ ಹಸಿರು ಬಣ್ಣದ ಬ್ಯಾಂಡ್ ಹಾಕಿ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದದ್ದು. ತಿಂಗಳಿನಿಂದಲೇ ಅಭ್ಯಾಸ ನಡೆಸಿ ವೆಂಕಟೇಶ್ ಸರ್ ಹೇಳಿಕೊಡುತ್ತಿದ್ದ ವಂದೇ ಮಾತರಂ ಹಾಡನ್ನು ವೇದಿಕೆಯಲ್ಲಿ ನಿಂತು ಹಾಡುತ್ತಿದ್ದದ್ದು, ಒಮ್ಮೆ ನಾನು ಸಾವರ್ಕರ್ ಅವರ ಕುರಿತಾದ ಭಾಷಣಕ್ಕೆ ತಯಾರಾಗಿದ್ದೆ. ವೇದಿಕೆಗೆ ಹೋಗುತಿದ್ದಂತೆ ಗಲಿಬಿಲಿಯಾಗಿ ತಡಬಡಾಯಿಸಿದ್ದು ಹೇಗೊ ಸಂಭಾಳಿಸಿಕೊಂಡು ಭಾಷಣ ಮಾಡಿದ್ದೆ. ವೇದಿಕೆಯ ಮೇಲಿದ್ದ ಅತಿಥಿಗಳಿಂದ ಬಹುಮಾನ ಪಡೆದಿದ್ದೂ ಸವಿನೆನಪು.
ಆಗಸ್ಟ್ ಬಂದರಂತೂ ನೆನಪುಗಳು ಚಿಟಿಚಿಟಿ ಮಳೆಯಂತೆ ಕಾಡುತ್ತೆ. ಇಂದು ಕೊರೊನಾ ಕಾರಣದಿಂದ ಮನೆಯಲ್ಲೇ ಇರಬೇಕಾಗಿದೆ ಪ್ರತೀ ವರ್ಷ ಮನೆಮುಂದೆ ಹೋಗುತ್ತಿದ್ದ ಗಾಂಧಿ, ಸಾವರ್ಕರ್ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್, ವೇಷಭೂಷಣದ ಶಾಲಾ ಪುಟಾಣಿಗಳ ಟ್ಯಾಬ್ಲೋ ಮೆರಣಿಗೆ ಈ ಬಾರಿ ಇಲ್ಲ ಅವರ ಸಂಭ್ರಮ ಚಿತ್ರಕಲಾ, ಭಾಷಣ, ಕಿರುನಾಟಕ ದೇಶಭಕ್ತಿಗೀತೆಗಳ ಸ್ಪರ್ಧೆಗಳೂ ಹಾಡು ನೃತ್ಯಗಳ ತಯಾರಿಯೂ ಇಲ್ಲ.
ಕೊರೊನಾ ಕಾರಣದಿಂದ ಶಾಲಾ ಕಾಲೇಜುಗಳು ಇನ್ನು ತೆರೆದಿಲ್ಲ. ಶಾಲೆಗಳ ಪುನರ್ ಪ್ರಾರಂಭದ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಎಲ್ಲ ಕಳೆದು ಮುಂದಿನ ವರ್ಷ ಆಗಸ್ಟ್ 15 ಸಂಭ್ರಮ ಮೊದಲಿನಂತೆ ಇರಲಿ. ಮಹನೀಯರ ಆದರ್ಶದಿಂದ ನಮ್ಮ ನಾಳೆಗಳು ಉನ್ನತವಾಗಲಿ ಸಂತೋಷದಿಂದ ಹೆಮ್ಮೆಯಿಂದ ಸ್ವತಂತ್ರ ದಿನಾಚರಣೆಯನ್ನು ಒಟ್ಟಾಗಿ ಎಲ್ಲರೂ ಆಚರಿಸುವಂತಾಗಲಿ. ಕಳೆದ ವರ್ಷಗಳಂತೆ ಎಲ್ಲ ಸಂತಸದ ಕ್ಷಣಗಳು ಮರಳಿ ಎನ್ನುವೇ ಹಾರೈಕೆ ಯಾಗಿದೆ.
– ಸುರಭಿ ಎಸ್. ಶರ್ಮಾ