Advertisement

ಕೆಎಎಸ್‌ ಪರೀಕ್ಷೆಯಲ್ಲಿ ಧರ್ಮ ಸೂಕ್ಷ್ಮ ಪ್ರಶ್ನೆಗಳು?

06:10 AM Dec 23, 2017 | |

ಬೆಂಗಳೂರು: “ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ವಿಶ್ಲೇಷಿಸಿರಿ’, “ಪ್ರತ್ಯೇಕ ನಾಡ ಧ್ವಜದ ಬಗ್ಗೆ ಬರೆಯಿರಿ’ ಇವು ಕೆಎಎಸ್‌ ಮುಖ್ಯ ಪರೀಕ್ಷೆಯ ಪ್ರಬಂಧ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಗಳು.

Advertisement

ಗೆಜೆಟೆಡ್‌ ಪ್ರೊಬೇಷನರಿ 428 (ಕೆಎಎಸ್‌) ಹುದ್ದೆಗಳ ನೇಮಕಾತಿಗೆ ನಡೆಯುತ್ತಿರುವ ಮುಖ್ಯ ಪರೀಕ್ಷೆಯಲ್ಲಿ ಡಿ.17ರಂದು ನಡೆದ “ಪ್ರಬಂಧ’ ಪರೀಕ್ಷೆಯಲ್ಲಿ ಈ ರೀತಿಯ ಧರ್ಮಸೂಕ್ಷ್ಮ, ಪ್ರಾದೇಶಿಕ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿರುವುದಕ್ಕೆ ಹಲವು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದರ ಔಚಿತ್ಯವನ್ನು ಪ್ರಶ್ನೆ ಮಾಡಿದ್ದಾರೆ.

ಪ್ರಬಂಧ ಪರೀಕ್ಷೆಯಲ್ಲಿ 250 ಅಂಕಗಳಿಗೆ 8 ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಇದರಲ್ಲಿ 2 ಪ್ರಶ್ನೆಗಳಿಗೆ ಪ್ರಬಂಧ ರೂಪದ ಉತ್ತರ ಬರೆಯಬೇಕು. ನಾವೆಲ್ಲ ನೋಟು ರದ್ದತಿ, ಜಿಎಎಸ್‌ಟಿ, ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಸೇರಿದಂತೆ ಆರ್ಥಿಕ ಮತ್ತು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದಾದ ನೀತಿ ನಿರೂಪಕ, ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಪ್ರಶ್ನೆಗಳು ಬರಬಹುದು ಎಂದು ನಿರೀಕ್ಷೆ ಮಾಡಿದ್ದೇವು. ಆದರೆ, ಪ್ರತ್ಯೇಕ ಲಿಂಗಾಯತ ಧರ್ಮ, ಪ್ರತ್ಯೇಕ ನಾಡಧ್ವಜ ಇದರ ಬಗ್ಗೆ ಪ್ರಶ್ನೆ ಕೇಳಿರುವುದು ಎಷ್ಟು ಸರಿ, ಈ ರೀತಿಯ ಸೂಕ್ಷ್ಮ ಪ್ರಶ್ನೆಗಳನ್ನು ಕೇಳುವುದು ಅವಶ್ಯಕವಿತ್ತೇ ಎಂದು ಪರೀಕ್ಷೆ ಬರೆದ ಅನೇಕ ಅಭ್ಯರ್ಥಿಗಳು ಕೇಳುತ್ತಿದ್ದಾರೆ.

ಇದೇ ವೇಳೆ ಇಂತಹ ಪ್ರಶ್ನೆಗಳನ್ನು ಕೇಳಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಕೇಳಿದ ಪ್ರಶ್ನೆಗೆ ನಮ್ಮ ಸಾರ್ಮಥ್ಯಕ್ಕೆ ತಕ್ಕಂತೆ ಉತ್ತರ ಬರೆದಿದ್ದೇವೆ. ಯಾವುದೇ ಒಂದು ವಿಷಯದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ಇದ್ದೇ ಇರುತ್ತವೆ. ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ಮತ್ತು ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಮೌಲ್ಯಮಾಪಕರು ವ್ಯತಿರಿಕ್ತ ನಿಲುವು ಹೊಂದಿದವರು ಇದ್ದರೆ, ನಿಷ್ಪಕ್ಷಪಾತ ಮೌಲ್ಯಮಾಪನ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಪ್ರತ್ಯೇಕ ನಾಡಧ್ವಜವನ್ನು ಸಮರ್ಥಿಸಿಕೊಂಡು ಬರೆದವರ ಉತ್ತರ ಪತ್ರಿಕೆ, ಅದರ ವಿರುದ್ಧ ನಿಲುವು ಹೊಂದಿದವರ ಕೈಗೆ ಸಿಕ್ಕರೆ ಏನಾಗಬಹುದು. ಅದೇ ರೀತಿ ಎರಡೂ ವಿಷಯಗಳನ್ನು ವಿರೋಧಿಸಿ ಬರೆದಾಗ ಅಂತಹ ಉತ್ತರ ಪತ್ರಿಕೆ, ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಪ್ರತ್ಯೇಕ ನಾಡಧ್ವಜದ ಪರ ನಿಲುವು ಹೊಂದಿದವರು ಮೌಲ್ಯಮಾಪನ ಮಾಡಿದರೆ ನ್ಯಾಯ ಸಿಗಬಹುದೇ ಅನ್ನುವುದು ಇನ್ನೂ ಕೆಲವು ಅಭ್ಯರ್ಥಿಗಳ ವಾದವಾಗಿದೆ.

ಇದಲ್ಲದೇ ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಹಾಗೂ ಅಭಿವೃದ್ಧಿ ಬ್ಯಾಂಕ್‌. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ಬಡತನ, ಅಂತರರಾಷ್ಟ್ರೀಯ ಸಂಬಂಧಗಳು, , ನದಿಗಳ ಜೋಡಣೆ, ಐಟಿ ಕ್ಷೇತ್ರದಲ್ಲಿ ಬೆಂಗಳೂರು ಪ್ರಸಿದ್ಧಿ ಯಾಕೆ ಇವುಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೆಲ್ಲ ಸರಿ. ಆದರೆ, ಕೆಎಎಸ್‌ ಅಧಿಕಾರಿಗಳು ನಿಷ್ಪಕ್ಷಪಾತವಾಗಿ, ಪೂರ್ವಗ್ರಹಪೀಡಿತವಲ್ಲದ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಬಯಸುವ ಆಡಳಿತ ವ್ಯವಸ್ಥೆ, ಮುಖ್ಯ ಪರೀಕ್ಷೆಯ ಹಂತದಲ್ಲಿ ಈ ರೀತಿಯ ಧರ್ಮಸೂಕ್ಷ್ಮ ಹಾಗೂ ಪ್ರಾದೇಶಿಕ ಭಾವನೆಗಳು ಸಂಬಂಧ ಹೊಂದಿರುವ ಪ್ರಶ್ನೆಗಳನ್ನು ಕೇಳುವುದು ಸಮಂಜವಸಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಭ್ಯರ್ಥಿಯೊಬ್ಬರು “ಉದಯವಾಣಿ’ಗೆ ಹೇಳಿದ್ದಾರೆ.

Advertisement

ಇಂತಹ ಪ್ರಶ್ನೆ ಕೇಳ್ಳೋದು ತಪ್ಪಲ್ಲ: ಇಂತಹದೇ ಪ್ರಶ್ನೆ ಕೇಳಬೇಕು, ಕೇಳಬಾರದು ಎಂಬ ನಿರ್ದಿಷ್ಟ ನಿಯಮಗಳಿರುವುದಿಲ್ಲ. ಆದರೆ, ಎಲ್ಲ ವಿಷಯಗಳಿಗೂ ಒಂದು ಪಠ್ಯಕ್ರಮವಿರುತ್ತದೆ. ಅದರ ಪರಿಮಿತಿಯೊಳಗೆ ಪ್ರಶ್ನೆ ಪತ್ರಿಕೆ ತಯಾರಿಸಲಾಗುತ್ತದೆ. ಆದರೆ, ಪ್ರಸಕ್ತ ವಿದ್ಯಾಮಾನಗಳಡಿಯಲ್ಲಿ ಕೆಲವೊಂದು ಜ್ವಲಂತ ಹಾಗೂ ಸಾರ್ವಜನಿಕ ಚರ್ಚಿತ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಹಾಗಂತ ಭಾವನೆಗಳಿಗೆ ಧಕ್ಕೆ ತರುವುದು, ಕಾನೂನು-ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದು ಇದರ ಉದ್ದೇಶವಾಗಿರುವುದಿಲ್ಲ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲೂ ಈ ರೀತಿಯ ಪ್ರಶ್ನೆಗಳನ್ನು ಕೇಳಿರುತ್ತಾರೆ.  ಸೂಕ್ಷ್ಮ ವಿಚಾರಗಳು ಬಂದಾಗ ಯಾವ ರೀತಿ ನಿಭಾಯಿಸಬೇಕು ಅನ್ನುವುದನ್ನು ತಿಳಿದಿರಲಿ ಎಂಬ ಕಾರಣಕ್ಕೆ ಇಂತಹ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಹಾಗಾಗಿ, ಮುಖ್ಯ ಪರೀಕ್ಷೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ, ಪ್ರತ್ಯೇಕ ನಾಡಧ್ವಜ ಕುರಿತು ಪ್ರಶ್ನೆ ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಕೆಪಿಎಸ್‌ಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ, ಪ್ರತ್ಯೇಕ ನಾಡಧ್ವಜದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಂವಿಧಾನ ಏನು ಹೇಳುತ್ತದೆ. ಸಂವಿಧಾನ ಮತ್ತು ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯಾ, ನಮ್ಮ ದೇಶದ ಧ್ವಜ ಸಂಹಿತೆ ಏನು ಹೇಳುತ್ತದೆ ಎಂಬ ವಿವರಣೆ ನೀಡುವಂತೆ ಈ ಪ್ರಶ್ನೆಗಳನ್ನು ಕೇಳಲಾಗಿದೆಯೇ ಹೊರತು, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಅಭ್ಯರ್ಥಿಗಳೂ ಅನಗತ್ಯ ಗೊಂದಲ ಅಥವಾ ಅನುಮಾನಕ್ಕೊಳಗಾಗಬಾರದು’.
-ಎನ್‌.ಎಸ್‌. ಪ್ರಸನ್ನಕುಮಾರ್‌, ಕೆಪಿಎಸ್‌ಸಿ, ಕಾರ್ಯದರ್ಶಿ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next