ಕಟಪಾಡಿ: ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುತ್ತದೆ. ಆ ಮೂಲಕ ಸಂಘಟನಾತ್ಮಕವಾಗಿ ಸಮಾಜದ ಏಳಿಗೆಗೆ ತೊಡಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಆಚಾರ್ಯ ಪಡುಬಿದ್ರಿ ಹೇಳಿದರು.
ಅವರು ಮುಟ್ಲಪಾಡಿ ಹಿಂದೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಡಂಬು ವಿಶ್ವಕರ್ಮ ಸಮಾಜ ಸೇವಾ ಸಂಘದ ವಿಶ್ವಕರ್ಮ ಪೂಜೆಯ ಸಂದರ್ಭ ನಡೆದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾಜದ ಸಂಘಟನೆಗಳು ಆಧಾರವಾಗಿರಬೇಕು. ಆ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯ ಚಟುವಟಿಕೆಗಳು ಪೂರಕವಾಗಿ ಜರಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಆಚಾರ್ಯ ಉಚ್ಚಿಲ ಮಾತನಾಡಿ, ಈ ಭಾಗದ ಸಮಾಜ ಬಾಂಧವರು ಯುವ ಸಂಘಟನೆಯಲ್ಲೂ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುತ್ತಿರುವುದು ಬಹಳಷ್ಟು ಸಂತಸದಾಯಕ. ಸಮಾಜಮುಖೀ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಯು ಬಲಿಷ್ಠವಾಗಿದೆ ಎಂದರು.
ಮುಖ್ಯ ಭಾಷಣಗೈದ ನಿವೃತ್ತ ಅಧ್ಯಾಪಕ ಮಾಧವ ರಾವ್ ಮಾತನಾಡಿ, ದೈನಂದಿನ ಚಟುವಟಿಕೆ ಉತ್ತಮ ರೀತಿಯಲ್ಲಿ ಇದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಕಂಡುಕೊಳ್ಳುತ್ತೇವೆ.ಆ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು.
ಸಂಘದ ಅಧ್ಯಕ್ಷ ಯೋಗೀಶ ಆಚಾರ್ಯ ಕಡಂಬು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಮೊಕ್ತೇಸರ ದಾಮೋದರ ಆಚಾರ್ಯ, ಕಾಳಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಾತಾ ಆಚಾರ್ಯ, ಶಿರ್ವ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಪೂಜಾರಿ, ಸದಸ್ಯ ಗೋಪಾಲ ಆಚಾರ್ಯ, ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಎರಡನೇ ಮೊಕ್ತೇಸರ ಅನಂತಯ್ಯ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಸುಕೇಶ್ ಆಚಾರ್ಯ ಸ್ವಾಗತಿಸಿದರು. ಲಕ್ಷ್ಮಣ ಆಚಾರ್ಯ ಪ್ರಸ್ತಾವನೆಗೈದರು. ಕೋಶಾಧಿಕಾರಿ ಪ್ರವೀಣ ಆಚಾರ್ಯ ವಂದಿಸಿದರು. ಚೇತನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.