ಕಾಪು: ಬದಲಾದ ಕಾಲಸ್ಥಿತಿಯಲ್ಲಿ ಜೀವನ ಪದ್ಧತಿ, ಆರಾಧನಾ ರೀತಿಯಲ್ಲಿ ಬದಲಾವಣೆಗಳು ಕಂಡು ಬಂದರೂ, ನಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದ ಅನೇಕ ಧಾರ್ಮಿಕ ಆಚರಣೆಗಳ ವಿಧಿ ವಿಧಾನಗಳು ಎಂದೆಂದೂ ಅಳಿಸಿ ಹೋಗುವುದಿಲ್ಲ. ದೇವಸ್ಥಾನಗಳ ಉತ್ಸವಾದಿಗಳು, ನಾಗಾರಾಧನೆ, ಭೂತರಾಧನೆ ಜತೆಗೆ ಭಜನ ಮಂದಿರಗಳ ಮಂಗಲೋತ್ಸವಗಳು ಭಕ್ತಿ, ಶ್ರದ್ಧೆಯಿಂದ ನಡೆಯುತ್ತಿರುವ ಭಕ್ತರ ಮನಸ್ಸಿನ ಭಾವನೆಗಳ ಪ್ರತೀಕ ಎಂದು ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳಿದರು.
ಕಟಪಾಡಿ ಪೊಸಾರು ಶ್ರೀ ನಂದಿಕೇಶ್ವರ ಭಜನ ಮಂದಿರದ 14ನೇ ವಾರ್ಷಿಕ ಮಂಗಲೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ಆರಾಧನೆಗಿಂತ ಹೆಚ್ಚು ಶಕ್ತಿಯುತವಾದದ್ದು ಭಜನೆ. ಇದು ದೇವರನ್ನು ಒಲಿಸಿಕೊಳ್ಳಲು ಅತ್ಯಂತ ಸುಲಭದಾರಿ. ಪ್ರತಿ ಮನೆಗಳಲ್ಲಿ ಸಂಜೆ ಹೊತ್ತಿಗೆ ಭಜನೆ ಹಾಡುವ ಪರಿಪಾಠ ಹೆಚ್ಚಲಿ. ಆ ಮೂಲಕ ಮನೆ-ಮನಗಳಲ್ಲಿ ದೇವರ ನಾಮಸಂಕೀರ್ತನೆ ವಿಜ್ರಂಭಿಸಲಿ ಎಂದು ಆಶಿಸಿದರು.
ಕಟಪಾಡಿ ಗ್ರಾ. ಪಂ. ಅಧ್ಯಕ್ಷೆ ಜ್ಯೂಲಿಯೆಟ್ ವೀರಾ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕ ವಾಸು ಶೆಟ್ಟಿ, ನಿವೃತ್ತ ಶಿಕ್ಷಕಿ ಕಸ್ತೂರಿ ಪಿ. ಶೆಟ್ಟಿ, ನಿವೃತ್ತ ಯೋಧ ಸಂಜೀವ ಭಂಡಾರಿ, ನಿವೃತ್ತ ಮೆಸ್ಕಾಂ ಲೈನ್‌ಮ್ಯಾನ್ ನಾರಾಯಣ ಆಚಾರ್ಯ, ನಾಗಸ್ವರ ವಾದಕ ಉದಯ ಶೇರಿಗಾರ್ ಇವರನ್ನು ಸಮ್ಮಾನಿಸಲಾಯಿತು. ಕಲಿಕೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರುತಿ, ಬಿಂದು, ಸಾಕ್ಷಿ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.
ಮಾಜಿ ತಾ.ಪಂ. ಸದಸ್ಯ ಶ್ರೀಕರ ಅಂಚನ್, ಕಟಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಕಟಪಾಡಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಅಪ್ಪು ಪೂಜಾರಿ, ಗ್ರಾ. ಪಂ. ಸದಸ್ಯರಾದ ಭಾಸ್ಕರ ಪೂಜಾರಿ, ಸುಧಾ ಶೆಟ್ಟಿ, ಕವಿತಾ ಸುವರ್ಣ, ಜೇಷ್ಠ ಡೆವಲಪರ್ನ ಯೋಗೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಭಜನ ಮಂದಿರದ ಅಧ್ಯಕ್ಷ ಸುಖೇಶ್ ಪೂಜಾರಿ ಸ್ವಾಗತಿಸಿದರು. ಶಂಭು ಕೋಟ್ಯಾನ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಕಾರ್ತಿಕ್ ಶೇರಿಗಾರ್ ವಂದಿಸಿದರು. ಭಜನಾ ಮಂದಿರದ ಮಾಜಿ ಅಧ್ಯಕ್ಷ ರಾಜೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.