Advertisement
ಮುಲುಂಡ್ ಚೆಕ್‌ನಾಕಾದ ನವೋದಯ ಹೈಸ್ಕೂಲ್ ಸಭಾಗೃಹದಲ್ಲಿ ಇತ್ತೀಚೆಗೆ ನಡೆದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಮುಂಬಯಿ ಸಮಿತಿ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಬದುಕು ಕ್ಷಣಿಕವಾದುದು. ಆ ಕ್ಷಣಿಕವಾದ ಬದುಕಿನಲ್ಲಿ ದೊಡ್ಡ ಪ್ರಯತ್ನದಿಂದ ನಾವೇನಾದರೂ ಕೂಡಿಟ್ಟರೆ ಅದರ ಶ್ರಮ ಸಾರ್ಥಕವಾಗುವುದು. ನಮ್ಮ ಒಳ್ಳೆಯ ಕೆಲಸ ಕಾರ್ಯಗಳು ಜೀವನದಲ್ಲಿ ನಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ನಮ್ಮ ಸಂಕಟವನ್ನು, ಭಯವನ್ನು ಮೆಟ್ಟಿ ನಿಲ್ಲಲಿಕ್ಕೆ ಸಾಧ್ಯವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಭಗವಂತನ ಪ್ರೀತಿಯನ್ನಿಟ್ಟುಕೊಂಡು ನಾವು ಮೊದಲಾಗಿ ಮನಸ್ಸನ್ನು ನಮ್ಮ ಮಿತ್ರನನ್ನಾಗಿ ಮಾಡಬೇಕು. ಒಂದು ವೇಳೆ ಮನಸ್ಸು ಕೆಟ್ಟು ಹೋದರೆ ಅದಕ್ಕಿಂತ ದೊಡ್ಡ ಶತ್ರು ಬೇರೆ ಇಲ್ಲ. ದೇವರ ಅನುಗ್ರಹದಿಂದ ಆಶ್ರಮದಲ್ಲಿ ಯಾಗವು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಲೋಕ ಕಲ್ಯಾಣಾರ್ಥವಾಗಿ ಈ ಯಾಗ ಆಗಬೇಕಿತ್ತು. ಅದನ್ನು ದೇವರು ನಮ್ಮಿಂದ ಯಶಸ್ವಿಯಾಗಿ ಮಾಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಹಾಯಾಗಕ್ಕೆ ತಯಾರಿ ನಡೆಸಿದ್ದೆವು. ನಿಮ್ಮೆಲ್ಲರ ಭಕ್ತಿಯ, ಪ್ರೀತಿಯ ಬೆಂಬಲದಿಂದ ಯಾಗ ಕಾರ್ಯವು ಸಂಪನ್ನಗೊಂಡಿದೆ ಎಂದರು.
Related Articles
Advertisement
ಥಾಣೆ ಕಿಸನ್ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ ಅವರು ಮಾತನಾಡಿ, ಸೋಮಯಾಗವು ಚಾರಿತ್ರಿಕ ಧಾರ್ಮಿಕ ಕಾರ್ಯಕ್ರಮವಾಗಿತ್ತು,. ನಿಸರ್ಗದ ಸಮತೋಲನ ಕಾಪಾಡಿಕೊಂಡು ಬರಲು ಇಂತಹ ಯಾಗವು ಸಹಕಾರಿಯಾಗಬಹುದು. ಲೋಕಕಲ್ಯಾಣಾರ್ಥಕವಾಗಿ ಸ್ವಾಮೀಜಿ ಅವರು ಹಮ್ಮಿಕೊಳ್ಳುವ ಧರ್ಮ ಕಾರ್ಯದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದರು.
ಗಣೇಶ್‌ಪುರಿಯ ಶ್ರೀ ನಿತ್ಯಾನಂದ ಕ್ಷೇತ್ರದ ಟ್ರಸ್ಟಿ ಗೀತಾ ಯಾಧವ್ ಮಾತನಾಡಿ, ದಕ್ಷಿಣ ಭಾರತವು ದೇವಭೂಮಿಯಾಗಿದೆ. ಅಂತಹ ದೇವಭೂಮಿಯ ಕೊಂಡೆವೂರಿನಲ್ಲಿ ಋಷಿ ಮುನಿ ಕಾಲದ ಮಹಾಯಜ್ಞ ನಡೆದಿರುವುದನ್ನು ಕಂಡಿರುವುದು ತನ್ನ ದೊಡ್ಡ ಸೌಭಾಗ್ಯ. ಹಿಂದೂ ಸಂಸ್ಕೃತಿಯನ್ನು ಧಾರ್ಮಿಕ, ಪರಂಪರೆಯನ್ನು ಸಂಪ್ರದಾಯವನ್ನು ಕಾಪಾಡಿಕೊಂಡು ಬರುವಂಥ ಕೆಲಸ ಕಾರ್ಯಗಳನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದರು.
ಮುಂಬಯಿ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್ ಅವರು ಮಾತನಾಡಿ, ಕೊಂಡೆವೂರಿನಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ನಡೆದ ಮಹಾಯಾಗ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ಯಾಗದ ಯಶಸ್ಸಿಗೆ ಮುಂಬಯಿ ಭಕ್ತರ ಕೊಡುಗೆಯೂ ಅಪಾರವಾಗಿದೆ. ಯಾಗದ ಸಂದರ್ಭದಲ್ಲಿ ಕೊಂಡೆವೂರಿನ ಆಶ್ರಮದ ಸೇವಾಕರ್ತರು ಲಕ್ಷಾಂತರ ಮಂದಿ ಭಕ್ತರಿಗೆ, ಅತಿಥಿ-ಗಣ್ಯರಿಗೆ ಅನುಕೂಲವಾಗುವಂತೆ ನೀಡಿದ ಸೇವೆಯು ಅಭಿನಂದನೀಯವಾಗಿದೆ ಎಂದುರು.
ಮುಂಬಯಿ ಸಮಿತಿಯ ಕೋಶಾಧಿಕಾರಿ ಅಶೋಕ್ ಎಂ. ಕೋಟ್ಯಾನ್ ದಂಪತಿ, ನಿತ್ಯಾನಂದ ಯೋಗಾಶ್ರಮದ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ, ಕಾರ್ಯದರ್ಶಿ ಹರೀಶ್ ಚೇವಾರ್, ವಿಶೇಷ ಸಹಕಾರ ನೀಡಿದ ನವೋದಯ ಕನ್ನಡ ಸಂಘದ ಅಧ್ಯಕ್ಷ ಜಯ ಶೆಟ್ಟಿ, ಜಯ ರಾಮ ಪೂಜಾರಿ, ತೋನ್ಸೆ ನವೀನ್ ಶೆಟ್ಟಿ, ಸಂಜೀವ ಪೂಜಾರಿ ತೋನ್ಸೆ, ಉದ್ಯಮಿ ಗಣೇಶ್ ಪೂಜಾರಿ ದಂಪತಿ, ರಮೇಶ್ ಕೋಟ್ಯಾನ್, ಮನೋಜ್ ಕುಮಾರ್ ಹೆಗ್ಡೆ, ಸಂಧ್ಯಾ ಜಾಧವ್ ಹಾಗೂ ಮಹಿಳಾ ಸದಸ್ಯೆಯರನ್ನು ಸ್ವಾಮೀಜಿಯವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು, ನವೋದಯ ಕನ್ನಡ ಸಂಘದ ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.