ಗಂಗಾವತಿ: ನಗರದ ರಾಣಾ ಪ್ರತಾಪಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದ ವರೆಗಿನ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿಗೆ ತಿರುಪತಿ ತಿಮ್ಮಪ್ಪನ ಮೂರು ನಾಮ, ಗದೆ ಹಾಗೂ ಬಾಣದ ಗುರುತು ಹಾಕಿದ ಪ್ರಕರಣ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಪಡೆದುಕೊಂಡಿದೆ.
ಧಾರ್ಮಿಕ ಚಿಹ್ನೆಗಳ ತೆರವಿಗೆ ಎಸ್‌ಡಿಪಿಐ ಆಗ್ರಹಿಸಿದರೆ ಬಿಜೆಪಿ, ಸಂಘ ಪರಿವಾರ, ಕನ್ನಡಪರ ಸಂಘಟನೆಗಳು ವಿದ್ಯುತ್ ಕಂಬಗಳಿಗೆ ಸಾಂಸ್ಕೃತಿಕ ಚಿಹ್ನೆಗಳಿರಲಿ ಎಂದು ಮನವಿ ಮಾಡಿವೆ. ಇದರಿಂದ ತಾಲೂಕು ಆಡಳಿತಕ್ಕೆ ತಲೆಬಿಸಿಯಾಗಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕ ಜನಾರ್ದನ ರೆಡ್ಡಿ ಆಸಕ್ತಿ ಮೇರೆಗೆ ಕಿಷ್ಕಿಂಧ ಅಂಜನಾದ್ರಿಗೆ ಹೋಗುವ ರಸ್ತೆ ವಿಸ್ತರಣೆ ಮಾಡಿತ್ತು. ಸದ್ಯ ರಾಣಾ ಪ್ರತಾಪಸಿಂಗ್ ವೃತ್ತದಿಂದ ಜುಲೈನಗರದ ಇಂದಿರಾ ಗಾಂಧಿ ವೃತ್ತದವರೆಗೆ ರಸ್ತೆ ವಿಸ್ತರಣೆ ಮಾಡಿ ವಿದ್ಯುತ್ ಕಂಬ ಹಾಕಲಾಗಿದೆ. ಈ ಮಧ್ಯೆ ಎಸ್‌ಡಿಪಿಐ ಸಂಘಟನೆ ಸರಕಾರಿ ಅನುದಾನದಲ್ಲಿ ಹಿಂದೂ ಧರ್ಮ ಬಿಂಬಿಸುವ ಚಿಹ್ನೆಗಳಿರುವ ವಿದ್ಯುತ್ ಕಂಬ ತೆರವು ಮಾಡುವಂತೆ ಪೌರಾಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ಕಂಬಗಳನ್ನು ತೆರವು ಮಾಡದಂತೆ ಬಿಜೆಪಿ, ಸಂಘ ಪರಿವಾರ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು. ಜಿಲ್ಲಾ ಧಿಕಾರಿ ಮೌಖೀಕ ಆದೇಶದ ಮೇರೆಗೆ ಗಂಗಾವತಿ ತಹಶೀಲ್ದಾರ್ ವಿದ್ಯುತ್ ಕಂಬ ತೆರವು ಮಾಡಿ ಪ್ರಕರಣ ದಾಖಲಿಸುವಂತೆ ನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದರು. ನೋಟಿಸ್ ನೀಡಿದ ಒಂದೇ ದಿನದಲ್ಲಿ ವಾಪಸ್ ಪಡೆದಿದ್ದು ವಿವಾದಕ್ಕೆ ಕಾರಣವಾಗಿದೆ.