ಬೆಳ್ತಂಗಡಿ: ನಾವು ಬೆಳೆಯುವ ಜತೆಗೆ ಇತರರನ್ನೂ ಬೆಳೆಸಬೇಕು. ಇದರಿಂದ ಉತ್ತಮ ಪರಿಸರ ನಿರ್ಮಾಣವಾಗಿ ಸಮಾಜ, ರಾಜ್ಯ, ಪ್ರಪಂಚದ ಬೆಳವಣಿಗೆಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು. ಅವರು ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಮತ್ತು ಸತ್ಯನಾರಾಯಣ ಪೂಜೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಉತ್ತಮ ಚಾರಿತ್ರ್ಯ ಇದ್ದಲ್ಲಿ ಸಮಾಜ ಗೌರವ ನೀಡುತ್ತದೆ. ಪ್ರತಿಯೊಬ್ಬರಿಗೂ ಅವರವರ ಬಗ್ಗೆ ಅರಿವಿರಬೇಕು. ಭಕ್ತಿಯಿಂದ ಮಾಡುವ ಪೂಜೆ ವಿಮೆ ಇದ್ದಂತೆ ಎಂದು ಹೆಗ್ಗಡೆ ಹೇಳಿದರು.
ಪುತ್ತೂರು ನೆರಿಮೊಗರು ಸರಸ್ವತಿ ವಿದ್ಯಾಮಂದಿರದ ಅವಿನಾಶ್ ಕೊಡೆಂಕೇರಿ ಧಾರ್ಮಿಕ ಉಪನ್ಯಾಸ ನೀಡಿದರು. ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಉದ್ಯಮಿ ಆನಂತರಾಮ ಜೋಗಿತ್ತಾಯ, ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಗೌರವ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೀರ್ಣೋದ್ಧಾರ ಸಮಿತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ತಾ.ಪಂ. ಮಾಜಿ ಉಪಾಧ್ಯಕ್ಷ ಪದ್ಮರಾಜ ಅಜಿಲ, ಧವನಂ ಜುವೆಲರ್ ನಿರ್ದೇಶಕ ಡಿ.ವಿ. ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಸ್ವಾಗತಿಸಿ, ಸಂಚಾಲಕ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಪೊಸಂದೋಡಿ ವಂದಿಸಿದರು. ಪ್ರಕಾಶ್ ಶೆಟ್ಟಿ ನಿರೂಪಿಸಿದರು.
ಜನರು ಮೊದಲು ತಮ್ಮ ಏಳಿಗೆಗೆ ಶ್ರಮಿಸಬೇಕು. ದುಡಿದ ಹಣವನ್ನು ಉಳಿತಾಯ ಮಾಡುವ ಗುಣ ರೂಢಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾದರೆ ಹಣ ಕೂಡಿಡಲು ಸಾಧ್ಯವಿಲ್ಲ. ಆದು ತೂತು ಮಡಕೆಯಲ್ಲಿ ನೀರು ತುಂಬಿಟ್ಟಂತೆ. ಉಳಿಕೆ ಹಣವನ್ನು ಉತ್ತಮ ಕಾರ್ಯಗಳಿಗೆ ಬಳಸುವುದರಿಂದ ಉತ್ತಮ ಜೀವನ ಸಾಧ್ಯ.
– ಡಾ| ಡಿ. ವೀರೇಂದ್ರ ಹೆಗ್ಗಡೆ